ಸಾಧಕರಿಗೆ ಒಲಿಂಪಿಕ್‌ ಸಂಸ್ಥೆ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Dec 27, 2023 1:30 AM

ಸಾರಾಂಶ

ಕರ್ನಾಟಕದ 22 ಕ್ರೀಡಾ ಸಾಧಕರಿಗೆ ರಾಜ್ಯ ಒಲಿಂಪಿಕ್‌ ಸಂಸ್ಥೆಯು ಪ್ರಶಸ್ತಿ ಜೊತೆಗೆ 1 ಲಕ್ಷ ರು. ನಗದು ಬಹುಮಾನವನ್ನೂ ನೀಡಿ, ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಹುರಿದುಂಬಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಯಾಡ್ಮಿಂಟನ್‌ ತಾರೆ ಮಿಥುನ್‌ ಮಂಜುನಾಥ್‌, ಅಥ್ಲೆಟಿಕ್ಸ್‌ ಸಾಧಕರಿ ಪ್ರಿಯಾ ಮೋಹನ್‌ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕರ್ನಾಟಕ 22 ಮಂದಿಗೆ ಮಂಗಳವಾರ ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆ(ಕೆಒಎ) ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಗೃಹ ಸಚಿವ ಜಿ.ಪರಮೇಶ್ವರ್‌, ಕ್ರೀಡಾ ಸಚಿವ ಬಿ.ನಾಗೇಂದ್ರ, ಕೆಒಎ ಅಧ್ಯಕ್ಷ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಗೋವಿಂದರಾಜು ಅವರು ಪ್ರಶಸ್ತಿ ಹಸ್ತಾಂತರಿಸಿದರು. ಕ್ರೀಡಾ ಸಾಧಕರಿಗೆ ಪ್ರಶಸ್ತಿ ಜೊತೆ 1 ಲಕ್ಷ ರು. ನಗದು ಬಹುಮಾನವನ್ನೂ ನೀಡಲಾಯಿತು.

ಈ ವೇಳೆ ಮಾತನಾಡಿದ ರಾಜ್ಯಪಾಲ ಗೆಹಲೋತ್‌, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸುವ ಕ್ರೀಡಾ ತಾರೆಗಳು ಯುವಪೀಳಿಗೆಗೆ ಪ್ರೇರಣೆ ಮತ್ತು ಸ್ಫೂರ್ತಿ. ಕರ್ನಾಟಕ ಅತ್ಯಂತ ಶ್ರೀಮಂತ ಕ್ರೀಡಾ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಕೂಡಾ ಸ್ಥಾಪಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುವುದು ಕರ್ನಾಟಕವನ್ನು ‘ಇಂಟರ್ನ್ಯಾಷನಲ್ ಹಬ್ ಆಫ್ ಸ್ಪೋರ್ಟ್ಸ್’ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದರು.

ಸಮಾರಂಭದಲ್ಲಿ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಎನ್., ಆಯುಕ್ತ ಶಶಿಕುಮಾರ್‌.ಎನ್, ಕೆಒಎ ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

---ವಲಸೆ ಹೋಗಬೇಡಿ

ರಾಜ್ಯದ ಕ್ರೀಡಾ ಸಾಧಕರಿಗೆ ಕೆಲಸ ಸಿಗಲು ಇನ್ನು ಕಷ್ಟಪಡಬೇಕಿಲ್ಲ. ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಶೇ.2 ಮೀಸಲಾತಿ ಹೆಚ್ಚಿಸುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಕರ್ನಾಟಕದಲ್ಲೇ ಇದ್ದು ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿ. ಎಲ್ಲಿಗೂ ವಲಸೆ ಹೋಗಬೇಡಿ. ನಿಮಗೆ ಬೇಕಾದ ಎಲ್ಲಾ ಸಹಕಾರ ಸರ್ಕಾರ ಮಾಡಲಿದೆ.

ಡಾ.ಕೆ.ಗೋವಿಂದರಾಜು, ಕೆಒಎ ಅಧ್ಯಕ್ಷ

Share this article