ಗೆಬೆರ್ಹಾ: ಮೊನಚು ಬೌಲಿಂಗ್ ದಾಳಿ ಮೂಲಕ ಹರಿಣಗಳ ಪಡೆಯನ್ನು ಮೊದಲ ಏಕದಿನ ಪಂದ್ಯದಲ್ಲಿ ಅವರದೇ ತವರಿನಲ್ಲಿ ಕಟ್ಟಿಹಾಕಿ ಪ್ರಾಬಲ್ಯ ಮೆರೆದಿದ್ದ ಟೀಂ ಇಂಡಿಯಾ ಯುವ ಪಡೆ, ಸದ್ಯ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯ ಮಂಗಳವಾರ ನಿಗದಿಯಾಗಿದ್ದು, ಇಲ್ಲಿನ ಗೆಬೆರ್ಹಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ದ.ಆಫ್ರಿಕಾ ಸರಣಿ ಸಮಬಲದ ಕಾತರದಲ್ಲಿದೆ.
ಟೆಸ್ಟ್ ಸರಣಿಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ರಿಂಕು ಸಿಂಗ್ ಅಥವಾ ರಜತ್ ಪಾಟೀದಾರ್ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಿಂಕು ಈಗಾಗಲೇ ಟಿ20 ಸರಣಿಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು, ರಜತ್ ಕೂಡಾ ದೇಸಿ ಟೂರ್ನಿಗಳಲ್ಲಿ ಅಬ್ಬರಿಸಿದ್ದಾರೆ. ಇಬ್ಬರಿಗೂ ತಂಡದಲ್ಲಿ ಸ್ಥಾನ ನೀಡಿ, ತಿಲಕ್ ವರ್ಮಾರನ್ನು ಹೊರಗಿಟ್ಟರೂ ಅಚ್ಚರಿಯಿಲ್ಲ. ಯುವ ಪ್ರತಿಭೆ ಸಾಯಿ ಸುದರ್ಶನ್ ಮತ್ತೊಮ್ಮೆ ಮಿಂಚಲು ಕಾಯುತ್ತಿದ್ದಾರೆ.ಇನ್ನು, ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಆರಂಭಿಕ ಪಂದ್ಯದಲ್ಲಿ ಪ್ರದರ್ಶಿಸಿದ್ದ ಆಟ ಮುಂದುವರಿಸಲು ಕಾಯುತ್ತಿದ್ದಾರೆ. ಇನ್ನು ಬಹುತೇಕ ಅನನುಭವಿಗಳಿಂದಲೇ ಕೂಡಿರುವ ದ.ಆಫ್ರಿಕಾ ಆರಂಭಿಕ ಪಂದ್ಯದ ಆಘಾತದಿಂದ ಚೇತರಿಸಿಕೊಂಡು, ಭಾರತಕ್ಕೆ ತಿರುಗೇಟು ನೀಡುವ ನಿರೀಕ್ಷೆಯಲ್ಲಿದೆ. ನಾಯಕ ಮಾರ್ಕ್‌ರಮ್, ಅನುಭವಿಗಳಾದ ಡೇವಿಡ್ ಮಿಲ್ಲರ್, ಕ್ಲಾಸೆನ್, ಕೇಶವ್ ಮಹಾರಾಜ್ ಮೇಲೆ ಭರವಸೆ ಇಡಲಾಗಿದೆ.ಒಟ್ಟು ಮುಖಾಮುಖಿ: 92ಭಾರತ: 39ದ.ಆಫ್ರಿಕಾ: 50
ಫಲಿತಾಂಶವಿಲ್ಲ: 03ಸಂಭವನೀಯ ಆಟಗಾರರ ಪಟ್ಟಿ ಭಾರತ: ಋತುರಾಜ್, ಸಾಯಿ ಸುದರ್ಶನ್, ತಿಲಕ್, ರಿಂಕು/ರಜತ್, ರಾಹುಲ್(ನಾಯಕ), ಸ್ಯಾಮ್ಸನ್, ಅಕ್ಷರ್, ಅರ್ಶ್‌ದೀಪ್, ಆವೇಶ್, ಕುಲ್ದೀಪ್, ಮುಕೇಶ್. ದ.ಆಫ್ರಿಕಾ: ಹೆಂಡ್ರಿಕ್ಸ್, ಡೆ ಜೊರ್ಜಿ, ಡುಸ್ಸೆನ್, ಮಾರ್ಕ್‌ರಮ್(ನಾಯಕ), ಕ್ಲಾಸೆನ್, ಮಿಲ್ಲರ್, ಫೆಲುಕ್ವಾಯೋ, ಮುಲ್ಡರ್, ಬರ್ಗರ್, ಕೇಶವ್, ತಬ್ರೇಜ್ ಶಮ್ಸಿ, ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಡಿಸ್ನಿ+ ಹಾಟ್‌ಸ್ಟಾರ್ ಪಿಚ್ ರಿಪೋರ್ಟ್ ಗೆಬೆರ್ಹಾ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದ ಉದಾಹರಣೆ ಇದೆ. ಇಲ್ಲಿ ನಡೆದ ಕಳೆದ 10 ಏಕದಿನ ಪಂದ್ಯಗಳಲ್ಲಿ ಒಮ್ಮೆ ಮಾತ್ರ 250+ ರನ್ ದಾಖಲಾಗಿದೆ. ಮಂಗಳವಾರದ ಪಂದ್ಯಕ್ಕೆ ಮಳೆ ಭೀತಿ ಇಲ್ಲ.