ಇರಾನಿ ಕಪ್‌ ಕ್ರಿಕೆಟ್‌ ಪಂದ್ಯ : ಶೇಷ ಭಾರತದ ಹೋರಾಟಕ್ಕೆ ಬಲ ನೀಡಿದ ಈಶ್ವರನ್‌ ಶತಕ

KannadaprabhaNewsNetwork |  
Published : Oct 04, 2024, 01:07 AM ISTUpdated : Oct 04, 2024, 03:28 AM IST
ಅಭಿಮನ್ಯು ಈಶ್ವರನ್‌  | Kannada Prabha

ಸಾರಾಂಶ

ಈ ಬಾರಿ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಗಳಿಸಿರುವ ಮುಂಬೈಗೆ ಶೇಷ ಭಾರತ ತಂಡ ದಿಟ್ಟ ಉತ್ತರ ನೀಡಿದೆ. ಪಂದ್ಯದಲ್ಲಿ ರನ್‌ ಹೊಳೆಯೇ ಹರಿಯುತ್ತಿದ್ದು, ಡ್ರಾದತ್ತ ಸಾಗುತ್ತಿದೆ.

ಲಖನೌ: ಈ ಬಾರಿ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಗಳಿಸಿರುವ ಮುಂಬೈಗೆ ಶೇಷ ಭಾರತ ತಂಡ ದಿಟ್ಟ ಉತ್ತರ ನೀಡಿದೆ. ಪಂದ್ಯದಲ್ಲಿ ರನ್‌ ಹೊಳೆಯೇ ಹರಿಯುತ್ತಿದ್ದು, ಡ್ರಾದತ್ತ ಸಾಗುತ್ತಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 537 ರನ್‌ ಕಲೆಹಾಕಿದರೆ, 3ನೇ ದಿನದಂತ್ಯಕ್ಕೆ ಶೇಷ ಭಾರತ 4 ವಿಕೆಟ್‌ ನಷ್ಟದಲ್ಲಿ 289 ರನ್‌ ಗಳಿಸಿದೆ. ತಂಡ ಇನ್ನೂ 248 ರನ್ ಹಿನ್ನಡೆಯಲ್ಲಿದೆ.2ನೇ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 536 ರನ್‌ ಕಲೆಹಾಕಿದ್ದ ಮುಂಬೈ, ಗುರುವಾರ ಕೇವಲ 1 ರನ್‌ ಸೇರಿಸಿತು.

 ಜುನೇದ್‌ ಖಾನ್‌ ಶೂನ್ಯಕ್ಕೆ ಔಟಾಗುವುದರೊಂದಿಗೆ ತಂಡದ ಇನ್ನಿಂಗ್ಸ್‌ಗೆ ತೆರೆಬಿತ್ತು. ಸರ್ಫರಾಜ್‌ ಖಾನ್‌ 222 ರನ್‌ ಗಳಿಸಿ ಔಟಾಗದೆ ಉಳಿದರು. ಶೇಷ ಭಾರತ ಪರ ಮುಕೇಶ್‌ ಕುಮಾರ್‌ 5 ವಿಕೆಟ್ ಗೊಂಚಲು ಪಡೆದರು.

ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಶೇಷ ಭಾರತಕ್ಕೆ ಅಭಿಮನ್ಯು ಈಶ್ವರನ್‌ ಆಸರೆಯಾದರು. ನಾಯಕ ಋತುರಾಜ್‌ ಗಾಯಕ್ವಾಡ್‌ 9 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಸಾಯಿ ಸುದರ್ಶನ್‌ 32 ರನ್‌ ಗಳಿಸಿದರು. ಸುದರ್ಶನ್‌-ಅಭಿಮನ್ಯು 2ನೇ ವಿಕೆಟ್‌ಗೆ 87 ರನ್‌ ಸೇರಿಸಿದರು. ಬಳಿಕ ಕ್ರೀಸ್‌ಗೆ ಬಂದ ದೇವದತ್‌ ಪಡಿಕ್ಕಲ್‌ 16, ಇಶಾನ್‌ ಕಿಶನ್‌ 38 ರನ್‌ ಗಳಿಸಿದರು.

 ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ ಕಚ್ಚಿನಿಂತ ಈಶ್ವರನ್‌ 212 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 151 ರನ್‌ ಗಳಿಸಿದ್ದಾರೆ. ಧ್ರುವ್‌ ಜುರೆಲ್‌(30) ಕೂಡಾ 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಮೋಹಿತ್‌ ಅವಾಸ್ತಿ 2 ವಿಕೆಟ್‌ ಕಿತ್ತರು.ಸ್ಕೋರ್‌: ಮುಂಬೈ 537/10 (ಸರ್ಫರಾಜ್‌ ಔಟಾಗದೆ 222, ಮುಕೇಶ್‌ 4-110), ಶೇಷ ಭಾರತ 289/4 (3ನೇ ದಿನದಂತ್ಯಕ್ಕೆ) (ಅಭಿಮನ್ಯು ಔಟಾಗದೆ 151, ಮೋಹಿತ್‌ 2-66)

PREV

Recommended Stories

ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌
ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!