ಐಪಿಎಲ್ ಮಾದರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮೊದಲ 3 ಆವೃತ್ತಿ, ಟೂರ್ನಿಯು ಭಾರತೀಯ ಕ್ರಿಕೆಟ್ ವ್ಯವಸ್ಥೆಯೊಳಗೆ ಆಳವಾಗಿ ನೆಲೆಯೂರಲು ಬಳಕೆಯಾಯಿತು ಇದೀಗ 4ನೇ ಆವೃತ್ತಿ ಆರಂಭಗೊಳ್ಳುವ ಸಮಯ ಬಂದಿದ್ದು, ವೇದಿಕೆ ಸಜ್ಜಾಗಿದೆ
ನವಿ ಮುಂಬೈ: ಐಪಿಎಲ್ ಮಾದರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮೊದಲ 3 ಆವೃತ್ತಿ, ಟೂರ್ನಿಯು ಭಾರತೀಯ ಕ್ರಿಕೆಟ್ ವ್ಯವಸ್ಥೆಯೊಳಗೆ ಆಳವಾಗಿ ನೆಲೆಯೂರಲು ಬಳಕೆಯಾಯಿತು. ಇದೀಗ 4ನೇ ಆವೃತ್ತಿ ಆರಂಭಗೊಳ್ಳುವ ಸಮಯ ಬಂದಿದ್ದು, ವೇದಿಕೆ ಸಜ್ಜಾಗಿದೆ. ಜ.9ರಿಂದ ಫೆ.5ರ ವರೆಗೂ ನಡೆಯಲಿರುವ ಟೂರ್ನಿಯು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಸ್ಥಾನಮಾನವನ್ನೇ ಬದಲಿಸಬಹುದು ಎನ್ನುವ ಭರವಸೆ ಮೂಡಿಸಿದೆ.
ಇತ್ತೀಚಿನ ಕೆಲ ವರ್ಷಗಳ ವರೆಗೂ ಮಹಿಳಾ ಕ್ರಿಕೆಟಿಗರು ತಮ್ಮ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದಲ್ಲಿ ಮಹಿಳಾ ಕ್ರಿಕೆಟಿಗರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದೆ. ಡಬ್ಲ್ಯುಪಿಎಲ್‌ನಿಂದಲೇ ಪ್ರಸಿದ್ಧಿ ಪಡೆದು, ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತಿದೆ. ಈ ಆವೃತ್ತಿಯು, ಹಲವು ಪ್ರತಿಭಾನ್ವಿತರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಬಹುದು.
ಟೂರ್ನಿ ಮಾದರಿ ಹೇಗೆ?
ಈ ಹಿಂದಿನ ಆವೃತ್ತಿಗಳಂತೆಯೇ ಈ ಸಲವೂ ಪ್ರಶಸ್ತಿಗಾಗಿ 5 ತಂಡಗಳು ಸೆಣಸಲಿವೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರೆ ಪ್ರತಿ ತಂಡ ಉಳಿದ 4 ತಂಡದ ವಿರುದ್ಧ ತಲಾ 2 ಬಾರಿ ಆಡಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್‌ನಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಫೆ.5ರಂದು ಫೈನಲ್ ನಿಗದಿಯಾಗಿದೆ.
2 ನಗರ, ತಲಾ 11 ಪಂದ್ಯ
ಟೂರ್ನಿಯನ್ನು ಈ ಸಲವೂ ಕೇವಲ ಎರಡು ನಗರಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ನವಿ ಮುಂಬೈನ ಡಿ.ವೈ.ಪಾಟೀಲ್, ವಡೋದರಾದ ಕೋಟಂಬಿ ಕ್ರೀಡಾಂಗಣಗಳು ತಲಾ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಮೊದಲ ಚರಣ ನವಿ ಮುಂಬೈನಲ್ಲಿ ನಡೆಯಲಿದ್ದು, ಲೀಗ್ ಹಂತದ 9, ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯ ವಡೋದರಾದಲ್ಲಿ ನಡೆಯಲಿವೆ.
ಟಿ20 ವಿಶ್ವಕಪ್‌ಗೆ ಸಿದ್ಧತೆ
4ನೇ ಆವೃತ್ತಿಯ ಡಬ್ಲ್ಯುಪಿಎಲ್ ಜೂನ್- ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ನೆರವಾಗಲಿದೆ. ಭಾರತದ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲು ಡಬ್ಲ್ಯುಪಿಎಲ್ ಅನ್ನು ಬಿಸಿಸಿಐ ಬಳಸಿಕೊಳ್ಳಲಿದೆ. ಅದೇ ರೀತಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದ. ಆಫ್ರಿಕಾ, ವೆಸ್ಟ್‌ಇಂಡೀಸ್, ನ್ಯೂಜಿಲೆಂಡ್‌ನ ಹಲವು ಆಟಗಾರ್ತಿಯರು ಟೂರ್ನಿಯಲ್ಲಿ ಆಡಲಿದ್ದು, ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಕಾಡಲಿದೆ ಪೆರ್ರಿ ಅನುಪಸ್ಥಿತಿ
ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಎಲೈಸಿ ಪೆರ್ರಿ ಈ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಅವರ ನಿರ್ಧಾರದಿಂದ ಕೇವಲ ಆರ್‌ಸಿಬಿಗೆ ಮಾತ್ರವಲ್ಲ, ಇಡೀ ಟೂರ್ನಿಗೇ ನಷ್ಟ ಉಂಟು ಮಾಡಲಿದೆ. ಡಬ್ಲ್ಯುಪಿಎಲ್‌ನ ಪ್ರಮುಖ ಆಕರ್ಷಣೆ ಎನಿಸಿದ್ದ ಪೆರ್ರಿ, ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಇಂದು
ಆರ್‌ಸಿಬಿ vs ಮುಂಬೈ ಇಂಡಿಯನ್ಸ್
ನವಿ ಮುಂಬೈ: ಕಳೆದ ವರ್ಷ ಸೇರಿ ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ 2ನೇ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು, ಶುಕ್ರವಾರ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ. ಇತ್ತೀಚೆಗೆ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ, ದೇಶದ ಇಬ್ಬರು ತಾರೆ ಕ್ರಿಕೆಟರ್‌ಗಳಾದ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಪರಸ್ಪರ ಎದುರಾಗಲಿದ್ದಾರೆ.
ಮುಂಬೈ ಕಳೆದ ವರ್ಷ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯನ್ನು ಈ ಆವೃತ್ತಿಗೆ ಉಳಿಸಿಕೊಂಡಿದ್ದು, ತಂಡ ಸದೃಢವಾಗಿದೆ. ಹರ್ಮನ್ ಜೊತೆಗೆ ಇಂಗ್ಲೆಂಡ್ ನಾಯಕಿ ನಥಾಲಿ ಸ್ಕೀವರ್ ಬ್ರಂಟ್, ವಿಂಡೀಸ್‌ನ ನಾಯಕಿ ಹೇಲಿ ಮ್ಯಾಥ್ಯೂಸ್‌ರ ಅನುಭವ ತಂಡಕ್ಕೆ ನೆರವಾಗಲಿದೆ. ನ್ಯೂಜಿಲೆಂಡ್‌ನ ಅಮೆಲಿಯ ಕೆರ್ರ್, ಆಸ್ಟ್ರೇಲಿಯಾದ ಮಿಲ್ಲಿ ಇಲ್ಲಿಂಗ್‌ವರ್ಥ್, ಭಾರತದ ಆಲ್ರೌಂಡರ್ ಅಮನ್‌ಜೋತ್ ಕೌರ್, ಯುವ ಆಟಗಾರ್ತಿ ಜಿ.ಕಮಲಿನಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಸ್ಮೃತಿ ಮಂಧನಾ ಉತ್ಕೃಷ್ಟ ಲಯದಲ್ಲಿರುವುದು ಆರ್‌ಸಿಬಿಗೆ ವರದಾನ ಎನಿಸಿದ್ದು, ಆಸ್ಟ್ರೇಲಿಯಾದ ಜಾರ್ಜಿಯಾ ವೊಲ್ ಸೇರ್ಪಡೆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆಲ್ರೌಂಡರ್‌ಗಳಾದ ಗ್ರೇಸ್ ಹ್ಯಾರಿಸ್, ನದಿನೆ ಡಿ ಕ್ಲೆರ್ಕ್ ಆರ್‌ಸಿಬಿ ಬಲ ಎನಿಸಿದ್ದಾರೆ. ಪೆರ್ರಿಯ ಅನುಪಸ್ಥಿತಿ ರಿಚಾ ಘೋಷ್ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಲಿದೆ.
ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಇಂಗ್ಲೆಂಡ್‌ನ ಲಾರೆನ್ ಬೆಲ್, ಲಿನ್ಸೆ ಸ್ಮಿತ್ ಬೌಲಿಂಗ್ ನಿಭಾಯಿಸಲಿದ್ದಾರೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್

