ಗಯಾನಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮಂಗಳವಾರ ಉಗಾಂಡ ವಿರುದ್ಧ ಪಂದ್ಯದಲ್ಲಿ ಆಫ್ಘನ್ 125 ರನ್ ಜಯಭೇರಿ ಬಾರಿಸಿತು.ಮೊದಲು ಬ್ಯಾಟ್ ಮಾಡಿದ ಆಫ್ಘನ್, ರಹ್ಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 183 ರನ್ ಕಲೆಹಾಕಿತು. ಈ ಜೋಡಿ ಮೊದಲ ವಿಕೆಟ್‌ಗೆ 14.3 ಓವರಲ್ಲಿ 154 ರನ್ ಜೊತೆಯಾಟವಾಡಿತು. ಆದರೆ 76 ರನ್ ಗಳಿಸಿದ್ದ ಗುರ್ಬಾಜ್ ಹಾಗೂ 70 ರನ್ ಸಿಡಿಸಿದ ಜದ್ರಾನ್ 5 ಎಸೆತಗಳ ಅಂತರದಲ್ಲಿ ಪೆವಿಲಿಯನ್ ಸೇರಿದರು. ಆ ಬಳಿಕ ತಂಡ ಹಿನ್ನಡೆ ಅನುಭವಿಸಿದರೂ, 180ರ ಗಡಿ ದಾಟಿತು. ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಉಗಾಂಡ ಬೃಹತ್ ಗುರಿ ನೋಡಿಯೇ ಕಂಗಾಲಾಯಿತು. ಆಫ್ಘನ್ ನಿಖರ ದಾಳಿಗೆ ತತ್ತರಿಸಿದ ತಂಡ 16 ಓವರಲ್ಲಿ 58 ರನ್‌ಗೆ ಗಂಟುಮೂಟೆ ಕಟ್ಟಿತು. ರಿಯಾಜತ್ ಅಲಿ(11), ರಾಬಿನ್ಸನ್ ಒಬುಯಾ(14) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಫಜಲ್‌ಹಕ್ ಫಾರೂಕಿ 4 ಓವರಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿದರು. ನವೀನ್, ರಶೀದ್ ತಲಾ 2 ವಿಕೆಟ್ ಪಡೆದರು.ಸ್ಕೋರ್: ಅಫ್ಘಾನಿಸ್ತಾನ 20 ಓವರಲ್ಲಿ 183/5 (ಗುರ್ಬಾಜ್ 76, ಜದ್ರಾನ್ 70, ಮಸಾಬ 2-21), ಉಗಾಂಡ 16 ಓವರಲ್ಲಿ 58/10 (ರಾಬಿನ್ಸನ್ 14, ಫಾರೂಕಿ 5-9, 2-4) ಪಂದ್ಯಶ್ರೇಷ್ಠ: ಫಜಲ್‌ಹಕ್ ಫಾರೂಖಿ.
04ನೇ ಕನಿಷ್ಠ: ಉಗಾಂಡ 58 ರನ್‌ಗೆ ಆಲೌಟಾಗಿದ್ದು ಟಿ20 ವಿಶ್ವಕಪ್‌ನಲ್ಲಿ 4ನೇ ಅತಿ ಕನಿಷ್ಠ. 2014ರಲ್ಲಿ ಲಂಕಾ ವಿರುದ್ಧ ನೆದರ್‌ಲೆಂಡ್ಸ್ 39, 2021ರಲ್ಲಿ ಲಂಕಾ ವಿರುದ್ಧ ನೆದರ್‌ಲೆಂಡ್ಸ್ 44, ಇಂಗ್ಲೆಂಡ್ ವಿರುದ್ಧ ವಿಂಡೀಸ್ 55 ರನ್‌ಗೆ ಆಲೌಟಾಗಿತ್ತು.