ಅನುಸ್ತುಪ್‌ ಶತಕ, ವೈಶಾಖ್‌ಗೆ 3 ವಿಕೆಟ್‌: ರಣಜಿಯಲ್ಲಿ ಕರ್ನಾಟಕ vs ಬಂಗಾಳ ಸಮಬಲದ ಹೋರಾಟ

KannadaprabhaNewsNetwork |  
Published : Nov 06, 2024, 11:58 PM ISTUpdated : Nov 06, 2024, 11:59 PM IST
ಕೌಶಿಕ್‌ಗೆ ಅಭಿನಂದನೆ | Kannada Prabha

ಸಾರಾಂಶ

ರಣಜಿ, ಬಂಗಾಳಕ್ಕೆ ನಾಯಕ ಅನುಸ್ತುಪ್‌ ಶತಕದ ಆಸರೆ. ಮೊದಲ ದಿನ 5 ವಿಕೆಟ್‌ಗೆ 249 ರನ್‌. ಶಾಬಾಜ್‌ ನದೀಂ, ಸುದೀಪ್‌ ಅರ್ಧಶತಕ. ವೇಗಿ ವಾಸುಕಿ ಕೌಶಿಕ್‌ಗೆ 3 ವಿಕೆಟ್‌

ನಾಸಿರ್‌ ಸಜಿಪಕನ್ನಡಪ್ರಭ ವಾರ್ತೆ ಬೆಂಗಳೂರುವಾಸುಕಿ ಕೌಶಿಕ್‌ ನಿಖರ ದಾಳಿ ನಡುವೆಯೂ ಬಂಗಾಳ ತಂಡಕ್ಕೆ ನಾಯಕ ಅನುಸ್ತುಪ್‌ ಮಜುಂದಾರ್‌ ಆಸರೆಯಾಗಿದ್ದು, ಆತಿಥೇಯ ಕರ್ನಾಟಕ ವಿರುದ್ಧ ಉತ್ತಮ ಆರಂಭ ಪಡೆದಿದೆ. ಬುಧವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬಂಗಾಳ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 249 ರನ್‌ ಕಲೆಹಾಕಿದೆ. ಮಂದ ಬೆಳಕಿನ ಕಾರಣ ಪಂದ್ಯ ಬೇಗನೇ ಸ್ಥಗಿತಗೊಂಡಿದ್ದು, ಮೊದಲ ದಿನ ಕೇವಲ 78 ಓವರ್‌ ನಡೆಯಿತು. ಕೊನೆ ಅವಧಿಯಲ್ಲಿ ಪ್ರಮುಖ 2 ವಿಕೆಟ್‌ ಕಿತ್ತ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಕೈ ತಪ್ಪದಂತೆ ನೋಡಿಕೊಂಡಿದ್ದು, 2ನೇ ದಿನ ಬಂಗಾಳವನ್ನು ಬೇಗನೇ ಆಲೌಟ್‌ ಮಾಡುವ ನಿರೀಕ್ಷೆಯಲ್ಲಿದೆ.ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ನಿರ್ಧಾರಕ್ಕೆ ಆರಂಭದಲ್ಲೇ ಯಶಸ್ಸು ಸಿಕ್ಕಿತು. ಕೇವಲ 21 ರನ್‌ ಗಳಿಸುವಷ್ಟರಲ್ಲೇ ತಂಡದ ಪ್ರಮುಖ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದ್ದರು. ಶುವಂ ದೇ ಖಾತೆ ತೆರೆಯುವ ಮೊದಲೇ ಕೌಶಿಕ್‌ ಎಸೆತದಲ್ಲಿ ಮನೀಶ್‌ ಪಾಂಡೆಗೆ ಕ್ಯಾಚ್‌ ನೀಡಿದರೆ, ಸುದೀಪ್‌ ಕುಮಾರ್‌ 5 ರನ್‌ ಗಳಿಸಿದ್ದಾಗ ಕೌಶಿಕ್‌ ಬೌಲಿಂಗ್‌ನಲ್ಲಿ ನಿಕಿನ್‌ ಜೋಸ್‌ ಪಡೆದ ಕ್ಯಾಚ್‌ಗೆ ಬಲಿಯಾದರು. ಆದರೆ ಬಂಗಾಳವನ್ನು ಕಾಪಾಡಿದ್ದು ನಾಯಕ ಅನುಸ್ತುಪ್‌ ಹಾಗೂ ಸುದೀಪ್‌ ಚಟರ್ಜಿ. 3ನೇ ವಿಕೆಟ್‌ಗೆ ಈ ಜೋಡಿ 100 ರನ್‌ ಜೊತೆಯಾಟವಾಡಿದರು. ಕರ್ನಾಟಕ ಬೌಲರ್‌ಗಳ ತಾಳ್ಮೆ ಪರಿಶೀಲಿಸುವ ರೀತಿ ಬ್ಯಾಟ್‌ ಬೀಸಿದ ಈ ಜೋಡಿಯನ್ನು ಬೇರ್ಪಡಿಸಿದ್ದು ಕೌಶಿಕ್‌. ಸುದೀಪ್‌ 55 ರನ್‌ ಗಳಿಸಿದ್ದಾಗ ವಿಕೆಟ್‌ ಕೀಪರ್‌ ಸುಜಯ್‌ ಸತೇರಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.ಈ ಹಂತದಲ್ಲಿ ಅನುಸ್ತುಪ್‌ಗೆ ಜೊತೆಯಾದ ಆಲ್ರೌಂಡರ್‌ ಶಾಬಾಜ್‌ ನದೀಂ ಬಂಗಾಳವನ್ನು ಮೇಲೆತ್ತಿದರು. 4ನೇ ವಿಕೆಟ್‌ಗೆ ಇಬ್ಬರ ನಡುವೆ 80 ರನ್‌ ಮೂಡಿಬಂತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19ನೇ ಶತಕ ಸಿಡಿಸಿ ಸಂಭ್ರಮಿಸಿದ ಕೆಲವೇ ಕ್ಷಣಗಳಲ್ಲಿ ಅನುಸ್ತುಪ್‌, ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 164 ಎಸೆತಗಳಲ್ಲಿ 101 ರನ್‌ ಸಿಡಿಸಿದ ಅನುಸ್ತುಪ್‌ ಅಂಪೈರ್‌ ನಿರ್ಧಾರಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಲೇ ಮೈದಾನ ತೊರೆದರು. ಬಳಿಕ ಕ್ರೀಸ್‌ಗೆ ಬಂದ ಅವಿಲಿನ್‌ ಘೋಷ್‌ 27 ಎಸೆತಗಳಲ್ಲಿ 22 ರನ್‌ ಸಿಡಿಸಿ ಔಟಾದರು. 54 ರನ್‌ ಗಳಿಸಿರುವ ಶಾಬಾಜ್‌ ನದೀಂ ಹಾಗೂ ವೃತ್ತಿಬದುಕಿನ ಕೊನೆ ಟೂರ್ನಿ ಆಡುತ್ತಿರುವ ವೃದ್ಧಿಮಾನ್‌ ಸಾಹ(ಔಟಾಗದೆ 6) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.ಚೊಚ್ಚಲ ಪಂದ್ಯವಾಡಿದ ಅಭಿಲಾಷ್‌ ಶೆಟ್ಟಿ, ಅವಿಲಿನ್‌ರನ್ನು ಔಟ್ ಮಾಡಿದರು. ಕರ್ನಾಟಕದ ಪರ ವಾಸುಕಿ ಕೌಶಿಕ್‌ಗೆ 3 ವಿಕೆಟ್‌ ಪಡೆದರು.ಸ್ಕೋರ್‌: ಬಂಗಾಳ 78 ಓವರಲ್ಲಿ 249/5(ಮೊದಲ ದಿನದಂತ್ಯಕ್ಕೆ) (ಅನುಸ್ತುಪ್‌ 101, ಸುದೀಪ್‌ 55, ಶಾಬಾಜ್ 54*, ಕೌಶಿಕ್‌ 3-29, ಅಭಿಲಾಶ್‌ 1-52, ಶ್ರೇಯಸ್‌ 1-66)

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!
ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌