- ಭಾರತೀಯ ವೇಗಿಗಳ ದಾಳಿಗೆ ಬೆಚ್ಚಿದ ದಕ್ಷಿಣ ಆಫ್ರಿಕಾ 116 ರನ್‌ಗೆ ಆಲೌಟ್- ಅರ್ಶ್‌ದೀಪ್ ಸಿಂಗ್‌ಗೆ ಚೊಚ್ಚಲ 5 ವಿಕೆಟ್ ಗೊಂಚಲು, 4 ವಿಕೆಟ್ ಕಿತ್ತ ಆವೇಶ್ ಖಾನ್- ಪಾದಾರ್ಪಣಾ ಪಂದ್ಯದಲ್ಲಿ ಸಾಯಿ ಸುದರ್ಶನ್ ಫಿಫ್ಟಿ, ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ- 16.4 ಓವರಲ್ಲೇ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದ ಟೀಂ ಇಂಡಿಯಾಜೋಹಾನ್ಸ್‌ಬರ್ಗ್: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ 50 ಓವರ್‌ಗಳನ್ನೂ ಕಾಣದೆ ಮುಕ್ತಾಯಗೊಂಡಿತು.ಭಾರತೀಯ ವೇಗಿಗಳಾದ ಅರ್ಶ್‌ದೀಪ್ ಸಿಂಗ್ ಹಾಗೂ ಆವೇಶ್ ಖಾನ್‌ರ ಮಾರಕ ದಾಳಿ, ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿದ ಸಾಯಿ ಸುರ್ದಶನ್ ಹಾಗೂ ಶ್ರೇಯಸ್ ಅಯ್ಯರ್‌ರ ಅರ್ಧಶತಕಗಳು ಭಾರತಕ್ಕೆ 8 ವಿಕೆಟ್ ಸುಲಭ ಜಯ ತಂದುಕೊಟ್ಟವು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.ದಕ್ಷಿಣ ಆಫ್ರಿಕಾ 27.3 ಓವರಲ್ಲಿ 116 ರನ್‌ಗೆ ಆಲೌಟ್ ಆದರೆ, ಭಾರತ 16.4 ಓವರಲ್ಲೇ ಜಯಭೇರಿ ಬಾರಿಸಿತು. ಒಟ್ಟಾರೆ ಇಡೀ ಪಂದ್ಯದಲ್ಲಿ ನಡೆದಿದ್ದು 44.1 ಓವರ್ ಆಟ ಮಾತ್ರ. ಇದರಿಂದಾಗಿ ಭಾನುವಾರ ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.ಸುಲಭ ಗುರಿ ಬೆನ್ನತ್ತಲು ಇಳಿದ ಭಾರತ, ಋತುರಾಜ್ ಗಾಯಕ್ವಾಡ್ (05)ರ ವಿಕೆಟನ್ನು ಬೇಗ ಕಳೆದುಕೊಂಡಿತು. ಆದರೆ ಸುದರ್ಶನ್ ಹಾಗೂ ಶ್ರೇಯಸ್ ದ.ಆಫ್ರಿಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.ತಾವೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ಜರಿ ಆರಂಭ ಪಡೆದ ಸುದರ್ಶನ್ 43 ಎಸೆತದಲ್ಲಿ 9 ಬೌಂಡರಿ ಸಹಿತ 55 ರನ್ ಗಳಿಸಿ ಔಟಾಗದೆ ಉಳಿದರೆ, ಶ್ರೇಯಸ್ 45 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 52 ರನ್ ಗಳಿಸಿ, ಗೆಲುವಿಗೆ ಕೇವಲ 6 ರನ್ ಬೇಕಿದ್ದಾಗ ಔಟಾದರು.ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುವ ಸಲುವಾಗಿ ಶ್ರೇಯಸ್ ಮುಂದಿನ 2 ಏಕದಿನ ಪಂದ್ಯಗಳನ್ನು ಆಡುವುದಿಲ್ಲ ಎಂದು ತಿಳಿದುಬಂದಿದ್ದು, ಈ ಅರ್ಧಶತಕ ಅವರ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.ಮಾರಕ ದಾಳಿ: ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಆಡಿದ 3 ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದ ಅರ್ಶ್‌ದೀಪ್ ತಮ್ಮ ಮೊದಲ ಓವರಲ್ಲೇ ದ.ಆಫ್ರಿಕಾಕ್ಕೆ ಡಬಲ್ ಆಘಾತ ನೀಡಿದರು.ಅಪಾಯಕಾರಿ ದಾಂಡಿಗರಾದ ರೀಜಾ ಹೆಂಡ್ರಿಕ್ಸ್ (00) ಹಾಗೂ ರಾಸ್ಸಿ ವಾನ್ ಡೆರ್ ಡುಸ್ಸೆನ್ (00)ಗೆ ಖಾತೆ ತೆರೆಯಲು ಎಡಗೈ ವೇಗಿ ಬಿಡಲಿಲ್ಲ. 3 ರನ್‌ಗೆ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಆತಿಥೇಯರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಟೋನಿ ಡಿ ಜೊರ್ಜಿ (28) ಹಾಗೂ ಹೈನ್ರಿಚ್ ಕ್ಲಾಸೆನ್ (06) ಸಹ ಅರ್ಶ್‌ದೀಪ್‌ರ ಮಾರಕ ಬೌಲಿಂಗ್‌ಗೆ ಬಲಿಯಾದರು.ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವಿರುವ ಏಡನ್ ಮಾರ್ಕ್‌ರಮ್ (12), ಡೇವಿಡ್ ಮಿಲ್ಲರ್ (02)ರನ್ನು ಪೆವಿಲಿಯನ್‌ಗಟ್ಟಿದ ಆವೇಶ್, ಮತ್ತೆರಡು ವಿಕೆಟ್ ಕಿತ್ತರು.ಆ್ಯಂಡಿಲೆ ಫೆಲುಕ್ವಾಯೋ (33) ಹೋರಾಟ, ದ.ಆಫ್ರಿಕಾವನ್ನು 100 ರನ್ ಗಡಿ ದಾಟಿಸಿತು. ಇಲ್ಲವಾಗಿದ್ದರೆ, ಭಾರತ ವಿರುದ್ಧ ಸತತ 3ನೇ ಪಂದ್ಯದಲ್ಲಿ ದ.ಆಫ್ರಿಕಾ 100ರೊಳಗೆ ಆಲೌಟ್ ಆಗುತ್ತಿತ್ತು. 10 ವೈಡ್ ಸೇರಿ 13 ಇತರೆ ರನ್ ದ.ಆಫ್ರಿಕಾದ ಖಾತೆಗೆ ಸೇರ್ಪಡೆಗೊಂಡಿತು.ಸ್ಕೋರ್: ದ.ಆಫ್ರಿಕಾ 27.3 ಓವರಲ್ಲಿ 116/10 (ಫೆಲುಕ್ವಾಯೋ 33, ಟೋನಿ 28, ಅರ್ಶ್‌ದೀಪ್ 5-37, ಆವೇಶ್ 4-27, ಕುಲ್ದೀಪ್ 1-3), ಭಾರತ 16.4 ಓವರಲ್ಲಿ 117/2 (ಸುದರ್ಶನ್ 55*, ಶ್ರೇಯಸ್ 52, ಮುಲ್ಡರ್ 1-26) ಪಂದ್ಯಶ್ರೇಷ್ಠ: ಅರ್ಶ್‌ದೀಪ್ ಸಿಂಗ್‌ಟರ್ನಿಂಗ್ ಪಾಯಿಂಟ್52 ರನ್‌ಗೆ 4 ವಿಕೆಟ್ ಕಳೆದುಕೊಂಡರೂ, ಮಾರ್ಕ್‌ರಮ್ ಹಾಗೂ ಮಿಲ್ಲರ್ ನಡುವೆ ದೊಡ್ಡ ಜೊತೆಯಾಟ ಮೂಡಿಬಂದಿದ್ದರೆ ದ.ಆಫ್ರಿಕಾಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸುವ ಅವಕಾಶ ಇರುತಿತ್ತು. ಆದರೆ 3 ಓವರ್ ಅಂತರದಲ್ಲಿ ಮಾರ್ಕ್‌ರಮ್ ಹಾಗೂ ಮಿಲ್ಲರ್ ಇಬ್ಬರೂ ಔಟಾಗಿದ್ದು ದ.ಆಫ್ರಿಕಾವನ್ನು ಪುಟಿದೇಳಲು ಸಾಧ್ಯವಾಗದ ಸ್ಥಿತಿ (58 ರನ್‌ಗೆ 7 ವಿಕೆಟ್) ತಲುಪಿಸಿತು.ತವರಲ್ಲಿ ದ.ಆಫ್ರಿಕಾ ಕನಿಷ್ಠ ಮೊತ್ತ!116 ರನ್ ಏಕದಿನ ಕ್ರಿಕೆಟ್‌ನಲ್ಲಿ ದ.ಆಫ್ರಿಕಾ ತನ್ನ ತವರಿನಲ್ಲಿ ದಾಖಲಿಸಿದ ಕನಿಷ್ಠ ಮೊತ್ತ. ಇದಕ್ಕೂ ಮೊದಲಿನ ಕನಿಷ್ಠ ಮೊತ್ತ ಭಾರತ ವಿರುದ್ಧವೇ ದಾಖಲಾಗಿತ್ತು. 2018ರಲ್ಲಿ ಸೆಂಚುರಿಯನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ದ.ಆಫ್ರಿಕಾ 118 ರನ್ ಗಳಿಸಿತ್ತು.ಭಾರತ ಪರ ಆಡಿದ 400ನೇ ಕ್ರಿಕೆಟಿಗ ಸಾಯಿ ಸುದರ್ಶನ್‌ಜೋಹಾನ್ಸ್‌ಬರ್ಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 400ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಸಾಯಿ ಸುದರ್ಶನ್ ಪಾತ್ರರಾದರು.ಭಾನುವಾರ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಅವರು ಪಾದಾರ್ಪಣೆ ಮಾಡಿದರು. 1961ರಲ್ಲಿ ಬಾಲೂ ಗುಪ್ತೆ ಭಾರತ ಪರ ಆಡಿದ 100ನೇ ಆಟಗಾರ ಎನ್ನುವ ಖ್ಯಾತಿ ಪಡೆದರೆ, 1990ರಲ್ಲಿ ಗುರುಶರಣ್ ಸಿಂಗ್ 200ನೇ ಆಟಗಾರ ಎನ್ನುವ ಹಿರಿಮೆ ಗಳಿಸಿದ್ದರು.2008ರಲ್ಲಿ ಮನ್‌ಪ್ರೀತ್ ಗೋನಿ ಭಾರತದ ಕ್ಯಾಪ್ ಪಡೆದ 300ನೇ ಆಟಗಾರ ಎನಿಸಿದ್ದರು.ಭಾರತೀಯ ವೇಗಿಗಳಿಂದ ಈ ವರ್ಷ 8 ಬಾರಿ 5 ವಿಕೆಟ್ ಗೊಂಚಲು2023ರಲ್ಲಿ ಭಾರತೀಯ ಬೌಲರ್‌ಗಳು ಏಕದಿನದಲ್ಲಿ ಒಟ್ಟು 8 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಇದೊಂದು ದಾಖಲೆ. 1990ರಲ್ಲಿ ಪಾಕ್, 2004ರಲ್ಲಿ ಆಸೀಸ್, 2008ರಲ್ಲಿ ಲಂಕಾದ ಬೌಲರ್‌ಗಳು ತಲಾ 6 ಬಾರಿ ಈ ಸಾಧನೆ ಮಾಡಿದ್ದರು.