ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅರೈನಾ ಸಬಲೆಂಕಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಅವರು ಕಳೆದ ಬಾರಿ ಫೈನಲ್‌ನ ಸೋಲು ಮರೆತು ಚೊಚ್ಚಲ ಬಾರಿ ಯುಎಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಶನಿವಾರ ಮಧ್ಯರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವ ನಂ.2 ಸಬಲೆಂಕಾ, ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 7-5, 7-5 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 2 ಸೆಟ್‌ಗಳಲ್ಲೂ ವಿಶ್ವ ನಂ.6 ಪೆಗುಲಾ ಉತ್ತಮ ಹೋರಾಟ ಪ್ರದರ್ಶಿಸಿದರಾದರೂ, ಸಬಲೆಂಕಾರ ಪ್ರಬಲ ಹೊಡೆತಗಳ ಮುಂದೆ ಮಂಡಿಯೂರಬೇಕಾಯಿತು. ತವರಿನ ಅಭಿಮಾನಿಗಳ ಭಾರಿ ಬೆಂಬಲ ಪೆಗುಲಾಗೆ ಲಭಿಸಿದರೂ, ಒತ್ತಡ ನಿಭಾಯಿಸಲು ಯಶಸ್ವಿಯಾದ 26 ವರ್ಷದ ಸಬಲೆಂಕಾ ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟರು.ಇದರೊಂದಿಗೆ ಸಬಲೆಂಕಾ ತಮ್ಮ ಸತತ ಗೆಲುವಿನ ಓಟವನ್ನು 12ಕ್ಕೆ ಹೆಚ್ಚಿಸಿದರು. ಅತ್ತ ಪೆಗುಲಾ ಕಳೆದ 17 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಸೋತಿದ್ದಾರೆ. ಈ ಎರಡು ಸೋಲುಗಳು ಕೂಡಾ ಸಬಲೆಂಕಾ ವಿರುದ್ಧವೇ ಬಂದಿದೆ ಎಂಬುದು ಗಮನಾರ್ಹ. ಪೆಗುಲಾ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್ ಆಡಿದ್ದು, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಅವರು ಈ ಹಿಂದೆ ಯುಎಸ್ ಓಪನ್‌ನಲ್ಲಿ ಒಮ್ಮೆಯೂ ಸೆಮಿಫೈನಲ್ ಪ್ರವೇಶಿಸಿರಲಿಲ್ಲ.
ಒಂದೂವರೆ ವರ್ಷದಲ್ಲಿ 3ನೇ ಗ್ರ್ಯಾನ್‌ಸ್ಲಾಂ ಕಿರೀಟಸಬಲೆಂಕಾ ಕಳೆದ ಒಂದೂವರೆ ವರ್ಷದಲ್ಲಿ 3 ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಅವರು, 2024ರಲ್ಲೂ ಪ್ರಶಸ್ತಿ ಉಳಿಸಿಕೊಂಡಿದ್ದರು. ಈಗ ಯುಎಸ್ ಓಪನ್‌ನಲ್ಲಿ ಗೆದ್ದಿದ್ದಾರೆ. ಉಳಿದ 2 ಗ್ರ್ಯಾನ್‌ಸ್ಲಾಂಗಳಾದ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ಈವರೆಗೂ ಅವರು ಫೈನಲ್ ಪ್ರವೇಶಿಸಿಲ್ಲ. 4 ಬಾರಿ ಫೈನಲ್, 3 ಬಾರಿ ಟ್ರೋಫಿ
ಸಬಲೆಂಕಾ 4ನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್ ಆಡಿದರು. ಈ ಪೈಕಿ 3ರಲ್ಲಿ ಟ್ರೋಫಿ ಗೆದ್ದಿದ್ದಾರೆ. ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಫೈನಲ್‌ಗೇರಿದ್ದ ಅವರು, ಅಮೆರಿಕದ ಕೊಕೊ ಗಾಫ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.₹30.23 ಕೋಟಿ: ಚಾಂಪಿಯನ್ ಅರೈನಾ ಸಬಲೆಂಕಾ 3,600,000 ಅಮೆರಿಕನ್ ಡಾಲರ್(ಅಂದಾಜು ₹30.23 ಕೋಟಿ) ನಗದು ಬಹುಮಾನ ಪಡೆದರು.₹15.11 ಕೋಟಿ: ರನ್ನರ್-ಅಪ್ ಪೆಗುಲಾ 1,800,000 ಅಮೆರಿಕನ್ ಡಾಲರ್(ಅಂದಾಜು ₹15.11 ಕೋಟಿ) ನಗದು ಪಡೆದರು.