ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ಗೆ ಕಾಲಿಡಲು 9ರ ಅತಿಕಾ ಮೀರ್‌ ಉತ್ಸುಕ!

KannadaprabhaNewsNetwork |  
Published : Jun 08, 2024, 12:30 AM ISTUpdated : Jun 08, 2024, 04:48 AM IST
ಅತಿಕಾ ಮೀರ್ | Kannada Prabha

ಸಾರಾಂಶ

- ಪಾದಾರ್ಪಣಾ ಆವೃತ್ತಿಯಲ್ಲೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಾಶ್ಮೀರದ ಬಾಲಕಿ. 7 ರಿಂದ 12 ವರ್ಷದೊಳಗಿನವರ ವಿಭಾಗದಲ್ಲಿ ಅತಿಕಾ, ಎಂಸ್ಪೋರ್ಟ್ ರೇಸಿಂಗ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಬೆಂಗಳೂರು: ಭಾರತದ ನೂತನ ರೇಸಿಂಗ್‌ ಪ್ರತಿಭೆ, 9 ವರ್ಷ ವಯಸ್ಸಿನ ಅತಿಕಾ ಮೀರ್‌ ಈ ವಾರಾಂತ್ಯದಲ್ಲಿ ಬೆಂಗಳೂರಿನ ಮೆಕೊ ಕಾರ್ಟೊಪಿಯಾದಲ್ಲಿ ನಡೆಯಲಿರುವ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ ರೊಟಾಕ್ಸ್‌ ಮ್ಯಾಕ್ಸ್‌ 2024ರಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.

ಅಂತಾರಾಷ್ಟ್ರೀಯ ಆಟೋಮೊಬೈಲ್‌ ಫೆಡರೇಶನ್‌ (ಎಫ್‌ಐಎ) ಹಾಗೂ ಅಂತಾರಾಷ್ಟ್ರೀಯ ಕಾರ್ಟಿಂಗ್‌ ಆಯೋಗ (ಸಿಐಕೆ) ಪ್ರಕಾರ 10 ವರ್ಷದೊಳಗಿನ ಮಹಿಳಾ ರೇಸರ್‌ಗಳ ಪೈಕಿ ಯಾವುದೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಅತಿಕಾ, 2022ರಲ್ಲೇ ತಮಗೆ 7 ವರ್ಷ ವಯಸ್ಸಿದ್ದಾಗ ಚಾಂಪಿಯನ್‌ಶಿಪ್‌ನ ಎರಡು ರೇಸ್‌ಗಳಲ್ಲಿ ಪಾಲ್ಗೊಂಡಿದ್ದರು.

ಕಾಶ್ಮೀರದ ಬಾಲಕಿ ಇದೇ ಮೊದಲ ಬಾರಿಗೆ ಚಾಂಪಿಯನ್‌ಶಿಪ್‌ನ ಎಲ್ಲಾ 5 ರೇಸ್‌ಗಳಲ್ಲೂ ಸ್ಪರ್ಧಿಸಲಿದ್ದಾರೆ. 7 ರಿಂದ 12 ವರ್ಷದೊಳಗಿನವರ ವಿಭಾಗದಲ್ಲಿ ಅತಿಕಾ, ಎಂಸ್ಪೋರ್ಟ್ ರೇಸಿಂಗ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

‘ಬಹಳ ಸ್ಪರ್ಧಾತ್ಮಕತೆಯಿಂದ ಕೂಡಿರಲಿರುವ ಭಾರತೀಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಬಹಳ ಉತ್ಸುಕತೆಯಿಂದ ನಾವು ಕಾಯುತ್ತಿದ್ದೇವೆ’ ಎಂದು ಭಾರತದ ಮೊದಲ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌, ಮಾಜಿ ಫಾರ್ಮುಲಾ ಏಷ್ಯಾ ರೇಸರ್‌ ಆಗಿರುವ ಅತಿಕಾರ ತಂದೆ ಆಸಿಫ್‌ ಮೀರ್‌ ಹೇಳಿದ್ದಾರೆ.

ಅತಿಕಾ ಈಗಾಗಲೇ ಕಾಶ್ಮೀರದಲ್ಲಿ ರೇಸಿಂಗ್‌ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ದುಬೈನಲ್ಲಿ ನೆಲೆಸಿರುವ ಅವರು, ಅಲ್ಲಿನ ಜಾರ್ಜ್‌ ಗಿಬ್ಬೊನ್ಸ್‌ ಮೋಟಾರ್‌ಸ್ಪೋರ್ಟ್ಸ್‌ನೊಂದಿಗೆ ಅಭ್ಯಾಸ ನಡೆಸುತ್ತಾರೆ. ಅತಿಕಾ ಯುರೋಪಿಯನ್‌ ಹಾಗೂ ಯುಎಇ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ಗಳಲ್ಲೂ ಸ್ಪರ್ಧಿಸಿ ಈಗಾಗಲೇ ಯಶಸ್ಸು ಗಳಿಸಿದ್ದಾರೆ.

‘ಅತಿಕಾಳನ್ನು ಭಾರತಕ್ಕೆ ಮರಳಿ ಸ್ವಾಗತಿಸಲು ಎಂಸ್ಪೋರ್ಟ್‌ ಬಹಳ ಸಂತೋಷ ಪಡುತ್ತದೆ. ಆಕೆ ಈಗಾಗಲೇ ಸಾಕಷ್ಟು ಅನುಭವ ಗಳಿಸಿದ್ದು, ಈ ಬಾರಿ ಮೈಕ್ರೋ ಮ್ಯಾಕ್ಸ್‌ ವಿಭಾಗದಲ್ಲಿ ಪ್ರಶಸ್ತಿ ರೇಸ್‌ನಲ್ಲಿ ಸಹಜವಾಗಿಯೇ ಮುಂಚೂಣಿಯಲ್ಲಿ ಇರಲಿದ್ದಾರೆ. ನಾವು ಖಂಡಿತವಾಗಿಯೂ ಜೊತೆಗಾಗಿ ಯಶಸ್ಸು ಕಾಣಲಿದ್ದೇವೆ ಎನ್ನುವ ವಿಶ್ವಾಸವಿದೆ’ ಎಂದು ಎಂಸ್ಪೋರ್ಟ್‌ನ ಮುಖ್ಯಸ್ಥ ಅರ್ಮಾನ್‌ ಎಬ್ರಾಹಿಂ ತಿಳಿಸಿದ್ದಾರೆ.

ಅತಿಕಾ ತಮಗೆ 6 ವರ್ಷವಿದ್ದಾಗಲೇ ಕಾರ್ಟಿಂಗ್‌ ಆರಂಭಿಸಿದ್ದರು. 2021ರಲ್ಲಿ ಅವರು ಮೊದಲ ಸ್ಪರ್ಧಾತ್ಮಕ ರೇಸ್‌ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

ಮೈಕ್ರೋ ಮ್ಯಾಕ್ಸ್‌ ಹಾಗೂ ಮಿನಿ ಎಕ್ಸ್‌30 ವಿಭಾಗಗಳಲ್ಲಿ ಸ್ಪರ್ಧಿಸುವ ಅತಿಕಾ, ಸದ್ಯ ಯುಎಇ ಐಎಎಂಇ ರಾಷ್ಟ್ರೀಯ ಚಾಂಪಿಯನ್‌ಶಿಪ್‌, ಮೆನಾ ಕಪ್‌ಗಳಲ್ಲಿ ರನ್ನರ್‌-ಅಪ್‌ ಆಗಿದ್ದಾರೆ. ಡಿಎಎಂಸಿ ಕಪ್‌ನಲ್ಲಿ 3ನೇ ಸ್ಥಾನ ಗಳಿಸಿದ್ದು ಸೇರಿ ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ.

ಅತಿಕಾ ಯುಎಇ ಐಎಎಂಇ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ (ಮಿನಿ ಆರ್‌ ವಿಭಾಗ)ದಲ್ಲಿ ರೇಸ್‌ ವಿಜೇತೆಯಾಗಿದ್ದು, ಹಲವು ರೇಸ್‌ಗಳಲ್ಲಿ ಪೋಲ್‌ ಪೊಸಿಷನ್‌ ಪಡೆದಿದ್ದಾರೆ. ಅಲ್ಲದೇ ಅತಿವೇಗದ ಲ್ಯಾಪ್‌ ಹಾಗೂ ಲ್ಯಾಪ್‌ ದಾಖಲೆಗಳನ್ನೂ ಹೊಂದಿದ್ದಾರೆ.

‘ನನಗೆ ಕೇವಲ 3 ವರ್ಷ ವಯಸ್ಸಿದ್ದಾಗಿನಿಂದಲೇ ನಮ್ಮ ತಂದೆ ರೇಸ್‌ನಲ್ಲಿ ಪಾಲ್ಗೊಳ್ಳುವುದನ್ನು ನಾನು ನೋಡಿದ್ದೇನೆ. ಅವರೊಂದಿಗೆ ನಾನು ಡ್ರೈವಿಂಗ್‌ ಟೆಕ್ನಿಕ್‌ಗಳನ್ನು ಹಾಗೂ ರೇಸಿಂಗ್‌ ಬಗ್ಗೆ ಚರ್ಚೆ ನಡೆಸುತ್ತೇನೆ. ಭಾರತೀಯ ರಾಷ್ಟ್ರೀಯ ರೇಸಿಂಗ್‌ನಲ್ಲಿ ಪಾಲ್ಗೊಳ್ಳುವುದು ನನಗೆ ಬಹಳ ಹೆಮ್ಮೆ ತಂದಿದೆ. 2022ರಲ್ಲಿ ಭಾರತದಲ್ಲೇ ನಾನು ಮೈಕ್ರೋ ಮ್ಯಾಕ್ಸ್‌ ವಿಭಾಗದಲ್ಲಿ ನನ್ನ ಮೊದಲ ರೇಸ್‌ನಲ್ಲಿ ಪಾಲ್ಗೊಂಡಿದ್ದೆ’ ಎಂದು ಅತಿಕಾ ಹೇಳಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ ಮುನ್ನ ಭಾರತಕ್ಕೆ ಕೊನೆ ಚಾಲೆಂಜ್‌
ಭಾರತಕ್ಕೆ ಬರದಿದ್ದರೆ ವಿಶ್ವಕಪ್‌ನಿಂದ ಹೊರಕ್ಕೆ : ಬಾಂಗ್ಲಾಗೆ ಐಸಿಸಿ ಎಚ್ಚರಿಕೆ