ಸಬಲೆಂಕಾಗೆ ಆಘಾತ ನೀಡಿದ ಮ್ಯಾಡಿಸನ್‌ ಕೀಸ್‌ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ರಾಣಿ

KannadaprabhaNewsNetwork |  
Published : Jan 26, 2025, 01:31 AM ISTUpdated : Jan 26, 2025, 04:18 AM IST
ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದ ಅಮೆರಿಕದ ಮ್ಯಾಡಿಸನ್‌ ಕೀಸ್‌, ರನ್ನರ್‌-ಅಪ್‌ ಪ್ರಶಸ್ತಿ ಜಯಿಸಿದ ಅರೈನಾ ಸಬಲೆಂಕಾ.  | Kannada Prabha

ಸಾರಾಂಶ

ಸಬಲೆಂಕಾಗೆ ಆಘಾತ ನೀಡಿದ ಮ್ಯಾಡಿಸನ್‌. ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆದ್ದ ಅಮೆರಿಕ ಆಟಗಾರ್ತಿ. ಹ್ಯಾಟ್ರಿಕ್‌ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆಲ್ಲುವ ಸಬಲೆಂಕಾ ಕನಸು ಭಗ್ನ.

ಮೆಲ್ಬರ್ನ್‌: ಛಲ, ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅಮೆರಿಕದ ಟೆನಿಸ್‌ ಆಟಗಾರ್ತಿ ಮ್ಯಾಡಿಸನ್‌ ಕೀಸ್‌ ತೋರಿಸಿಕೊಟ್ಟಿದ್ದಾರೆ. 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿದ್ದ ಮ್ಯಾಡಿಸನ್‌, ಶನಿವಾರ ಆಸ್ಟ್ರೇಲಿಯನ್‌ ಓಪನ್‌ ಮಹಿಳಾ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

46ನೇ ಬಾರಿಗೆ ಗ್ರ್ಯಾನ್‌ ಸ್ಲಾಂನಲ್ಲಿ ಆಡಿದ ಮ್ಯಾಡಿಸನ್‌, 2023, 2024ರಲ್ಲಿ ‘ಆಸ್ಟ್ರೇಲಿಯನ್‌ ರಾಣಿ’ಯಾಗಿದ್ದ ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ ಫೈನಲ್‌ನಲ್ಲಿ 6-3, 2-6, 7-5 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.

ವಿಶ್ವ ನಂ.1 ಸಬಲೆಂಕಾ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದ ಕೀಸ್‌, ಸೆಮೀಸ್‌ನಲ್ಲಿ ವಿಶ್ವ ನಂ.2 ಇಗಾ ಸ್ವಿಯಾಟೆಕ್‌ ವಿರುದ್ಧ ಜಯಿಸಿದ್ದರು. ಇದರೊಂದಿಗೆ 2005ರಲ್ಲಿ ಸೆರೆನಾ ವಿಲಿಯಮ್ಸ್‌ ಬಳಿಕ ಮೆಲ್ಬರ್ನ್‌ ಪಾರ್ಕ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-2 ಸ್ಥಾನದಲ್ಲಿರುವ ಆಟಗಾರ್ತಿಯರಿಬ್ಬರನ್ನೂ ಸೋಲಿಸಿದ ಮೊದಲ ಆಟಗಾರ್ತಿ ಎನಿಸಿದರು.

ಫೈನಲ್‌ಗೂ ಮುನ್ನ ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಕೀಸ್‌, ಈ ಟೂರ್ನಿಯಲ್ಲಿ 19ನೇ ಶ್ರೇಯಾಂಕ ಪಡೆದಿದ್ದರು. 2017ರ ಯುಎಸ್‌ ಓಪನ್‌ನ ಫೈನಲ್‌ನಲ್ಲಿ ಆಡಿದ್ದ ಕೀಸ್‌, ಆ ನಂತರ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದು ಇದೇ ಮೊದಲು.

ಶನಿವಾರ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ, ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಸಬಲೆಂಕಾ ವಿರುದ್ಧ ಕೀಸ್‌ ಅಮೋಘ ಆಟ ತೋರಿದರು.

ಮೊದಲ ಸೆಟ್‌ ಗೆದ್ದು ಆರಂಭಿಕ ಮುನ್ನಡೆ ಪಡೆದ ಮ್ಯಾಡಿಸನ್‌ಗೆ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳಲು ಸಬಲೆಂಕಾ ಸಿದ್ಧರಿರಲಿಲ್ಲ. 2ನೇ ಸೆಟ್‌ ಬೆಲಾರುಸ್‌ ಆಟಗಾರ್ತಿ ಪಾಲಾದ ಬಳಿಕ ಚಾಂಪಿಯನ್‌ ಯಾರು ಎನ್ನುವುದನ್ನು ತಿಳಿದುಕೊಳ್ಳಲು 3ನೇ ಸೆಟ್‌ ಮುಗಿಯುವ ವರೆಗೂ ಕಾಯಬೇಕಾಯಿತು. ಅಂತಿಮ ಸೆಟ್‌ನಲ್ಲೂ ಇಬ್ಬರೂ ಆಟಗಾರ್ತಿಯರು ಭರ್ಜರಿ ಪೈಪೋಟಿ ನಡೆಸಿದರು. ಆದರೆ ಕೊನೆಗೆ ಸೆಟ್‌ ತಮ್ಮದಾಗಿಸಿಕೊಂಡ ಕೀಸ್‌, ಪಂದ್ಯ ಗೆದ್ದು ಭಾವುಕರಾದರು.

₹19.05 ಕೋಟಿ

ಚಾಂಪಿಯನ್ ಮ್ಯಾಡಿಸನ್‌ ಕೀಸ್‌ಗೆ ಸಿಕ್ಕ ಬಹುಮಾನ ಮೊತ್ತ. ₹10.34 ಕೋಟಿ

ರನ್ನರ್‌-ಅಪ್‌ ಸಬಲೆಂಕಾಗೆ ಸಿಕ್ಕ ಬಹುಮಾನ ಮೊತ್ತ.

 ಇಂದು ಸಿನ್ನರ್‌ vs ಜ್ವೆರೆವ್‌ ಫೈನಲ್‌

ಪುರುಷರ ಸಿಂಗಲ್ಸ್‌ ಫೈನಲ್‌ ಭಾನುವಾರ ನಡೆಯಲಿದ್ದು, ಪ್ರಶಸ್ತಿಗಾಗಿ ವಿಶ್ವ ನಂ.1 ಆಟಗಾರ ಇಟಲಿಯ ಯಾನ್ನಿಕ್‌ ಸಿನ್ನರ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸೆಣಸಲಿದ್ದಾರೆ. ಹಾಲಿ ಚಾಂಪಿಯನ್‌ ಸಿನ್ನರ್‌ ಸತತ 2ನೇ ಆಸ್ಟ್ರೇಲಿಯನ್‌ ಓಪನ್‌ ಹಾಗೂ ಒಟ್ಟಾರೆ 3ನೇ ಗ್ರ್ಯಾನ್‌ ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದರೆ, 3ನೇ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿರುವ ಜ್ವೆರೆವ್‌ ಚೊಚ್ಚಲ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ಸಿನ್ನರ್‌ ಹಾಗೂ ಜ್ವೆರೆವ್‌ ಎಟಿಪಿ ಟೂರ್ನಿಗಳಲ್ಲಿ ಈವರೆಗೂ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಜ್ವೆರೆವ್‌ 4 ಪಂದ್ಯಗಳಲ್ಲಿ ಗೆದ್ದರೆ, ಸಿನ್ನರ್‌ಗೆ 2 ಪಂದ್ಯದಲ್ಲಿ ಜಯ ಸಿಕ್ಕಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!