ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿ ಐತಿಹಾಸಿಕ 25ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಪಡೆವ ಕನಸು ಭಗ್ನ

KannadaprabhaNewsNetwork | Updated : Jan 25 2025, 08:29 AM IST

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿ ಐತಿಹಾಸಿಕ 25ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಎತ್ತಿಹಿಡಿಯವ ದಿಗ್ಗಜ ಟೆನಿಸಿಗ ನೋವಾಕ್‌ ಜೋಕೋವಿಚ್‌ರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ

ಮೆಲ್ಬರ್ನ್‌: ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿ ಐತಿಹಾಸಿಕ 25ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಎತ್ತಿಹಿಡಿಯವ ದಿಗ್ಗಜ ಟೆನಿಸಿಗ ನೋವಾಕ್‌ ಜೋಕೋವಿಚ್‌ರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಶುಕ್ರವಾರ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸುತ್ತಿದ್ದಾಗ ನೋವಾಕ್‌ರ ಎಡಗಾಲಿನ ಗಾಯ ಉಲ್ಭಣಿಸಿ ತೀವ್ರ ನೋವಿಗೆ ಒಳಗಾದ ಕಾರಣ, ಪಂದ್ಯದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದರು. ಮೊದಲ ಸೆಟ್‌ 7-5ರಲ್ಲಿ ಜ್ವೆರೆವ್‌ ಪಾಲಾಗಿತ್ತು.

ಕಳೆದ ವರ್ಷ ಫ್ರೆಂಚ್‌ ಓಪನ್‌ನ ಕ್ವಾರ್ಟರ್‌ ಫೈನಲ್‌ ವೇಳೆ ಮಂಡಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಜೋಕೋವಿಚ್‌, ಶಸ್ತ್ರಚಿಕಿತ್ಸೆಗೆ ಒಳಗಾಗಿ 2 ತಿಂಗಳು ವಿಶ್ರಾಂತಿ ಪಡೆದಿದ್ದರು. ಟೆನಿಸ್‌ಗೆ ಮರಳಿದ ಬಳಿಕ ಅತ್ಯುತ್ತಮ ಲಯ ಪ್ರದರ್ಶಿಸಿದ್ದ ಜೋಕೋ, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದರು. ಆದರೆ, ಕಾರ್ಲೋಸ್‌ ಆಲ್ಕರಜ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಆಡುವಾಗಲೇ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಜೋಕೋ, ತಮಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಸೆಮೀಸ್‌ನಲ್ಲಿ ಮೊದಲ ಸೆಟ್‌ ಗೆದ್ದಿದ್ದರೂ ಪಂದ್ಯದಲ್ಲಿ ಮುಂದುವರಿಯಲು ತಮಗೆ ಆಗುತ್ತಿರಲಿಲ್ಲ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು. ಇನ್ನು, ಜ್ವೆರೆವ್‌ 3ನೇ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಸತತ 2ನೇ ಬಾರಿ

ಫೈನಲ್‌ಗೆ ಸಿನ್ನರ್

ವಿಶ್ವ ನಂ.1 ಆಟಗಾರ, ಇಟಲಿಯ ಯಾನ್ನಿಕ್‌ ಸಿನ್ನರ್‌ ಸತತ 2ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅಮೆರಿಕದ ಬೆನ್‌ ಶೆಲ್ಟನ್‌ ವಿರುದ್ಧ 7-6(7/2), 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಸತತ 20 ಗ್ರ್ಯಾನ್‌ ಸ್ಲಾಂ ಪಂದ್ಯಗಳನ್ನು ಗೆದ್ದಿರುವ ಸಿನ್ನರ್‌, ಫೈನಲ್‌ನಲ್ಲೂ ಜಯಭೇರಿ ಬಾರಿಸಿ ಸತತ 2ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಕಿರೀಟ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದ್ದಾರೆ. ಇಂದು ಫೈನಲ್‌ನಲ್ಲಿ

ಸಬಲೆಂಕಾ vs ಕೀಸ್‌

ಆಸ್ಟ್ರೇಲಿಯಾ ಓಪನ್‌ನ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಶನಿವಾರ ಹಾಲಿ ಚಾಂಪಿಯನ್‌ ಬೆಲಾರುಸ್‌ನ ಅರೈನಾ ಸಬಲೆಂಕಾ ಹಾಗೂ ಅಮೆರಿಕದ ಮ್ಯಾಡಿಸನ್‌ ಕೀಸ್‌ ಸೆಣಸಲಿದ್ದಾರೆ. 2023, 2024ರಲ್ಲಿ ಚಾಂಪಿಯನ್‌ ಆಗಿದ್ದ ಸಬಲೆಂಕಾ, ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿರುವ ಮ್ಯಾಡಿಸನ್‌ ಚೊಚ್ಚಲ ಪ್ರಶಸ್ತಿ ಗೆಲ್ಲಲು ಕಾಯುತ್ತಿದ್ದಾರೆ.

Share this article