ಇಂದು ಭಾರತ vs ಇಂಗ್ಲೆಂಡ್‌ 2ನೇ ಟಿ20 ಪಂದ್ಯ

KannadaprabhaNewsNetwork |  
Published : Jan 25, 2025, 01:01 AM IST
ತಾವು ಆಡಿದ ಬೆಳೆದ ಚೆಪಾಕ್‌ ಕ್ರೀಡಾಂಗಣದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿರುವ ವರುಣ್‌ ಚಕ್ರವರ್ತಿ.  | Kannada Prabha

ಸಾರಾಂಶ

ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ. ಮೊದಲ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ್ದ ಭಾರತಕ್ಕೆ ಮತ್ತೊಂದು ಜಯದ ಗುರಿ. ಮೊಹಮದ್‌ ಶಮಿಯ ಫಿಟ್ನೆಸ್‌ ಮೇಲೆ ಎಲ್ಲರ ಕಣ್ಣು.

ಚೆನ್ನೈ: ಇಂಗ್ಲೆಂಡ್‌ ವಿರುದ್ಧ ಮೊದಲ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿ ಜಯಭೇರಿ ಬಾರಿಸಿದ್ದ ಭಾರತ, ತನ್ನ ಜಯದ ಓಟವನ್ನು ಚೆನ್ನೈನಲ್ಲೂ ಮುಂದುವರಿಸಲು ಕಾತರಿಸುತ್ತಿದೆ. ಚೆಪಾಕ್‌ ಕ್ರೀಡಾಂಗಣದಲ್ಲಿ ಶನಿವಾರ 2ನೇ ಟಿ20 ಪಂದ್ಯ ನಡೆಯಲಿದ್ದು 5 ಪಂದ್ಯಗಳ ಸರಣಿಯಲ್ಲಿ ಭಾರತ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ತಮ್ಮ ಐಪಿಎಲ್‌ ತವರು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಕಾಡಿದ್ದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ತಾವು ಕ್ರಿಕೆಟ್‌ ಆಡಿ ಬೆಳೆದ ಚೆನ್ನೈನ ಚೆಪಾಕ್‌ನಲ್ಲಿ ಮೊದಲ ಬಾರಿಗೆ ಅಂ.ರಾ. ಪಂದ್ಯವನ್ನು ಆಡಲು ಉತ್ಸುಕಗೊಂಡಿದ್ದು, ಈ ಪಂದ್ಯದಲ್ಲೂ ಅವರೇ ಭಾರತದ ಟ್ರಂಪ್‌ ಕಾರ್ಡ್‌ ಎನಿಸಲಿದ್ದಾರೆ.

ದಿಗ್ಗಜ ಸ್ಪಿನ್ನರ್‌ ಆರ್‌.ಅಶ್ವಿನ್‌ ಇತ್ತೀಚೆಗೆ ತಮ್ಮ ಯೂಟ್ಯೂಬ್‌ನಲ್ಲಿ ‘ವರುಣ್‌ರನ್ನು ಇಂಗ್ಲೆಂಡ್‌ ಎಷ್ಟು ಸಮರ್ಥವಾಗಿ ಎದುರಿಸುತ್ತದೆ ಎನ್ನುವುದರ ಮೇಲೆ ಸರಣಿಯ ಫಲಿತಾಂಶ ನಿರ್ಧಾರವಾಗಲಿದೆ’ ಎಂದಿದ್ದರು. ಆ ಮಾತು ನಿಜವಾಗಬಹುದು ಎನ್ನುವ ಸುಳಿವು ಮೊದಲ ಪಂದ್ಯದಲ್ಲೇ ಸಿಕ್ಕಿತ್ತು.

ಇನ್ನು ವೇಗಿ ಮೊಹಮದ್‌ ಶಮಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೋ ಇಲ್ಲವೋ ಎನ್ನುವುದನ್ನು ಬಿಸಿಸಿಐ ಸ್ಪಷ್ಟಪಡಿಸುತ್ತಿಲ್ಲ. ಶುಕ್ರವಾರ ಶಮಿ ಮೈದಾನಕ್ಕಿಳಿದು ಯಾವುದೇ ತೊಂದರೆಯಿಲ್ಲದೆ ಬೌಲಿಂಗ್‌ ಅಭ್ಯಾಸ ನಡೆಸಿದರು. ಒಂದು ವೇಳೆ ಶನಿವಾರದ ಪಂದ್ಯದಲ್ಲಿ ಅವರು ಆಯ್ಕೆಗೆ ಲಭ್ಯರಿದ್ದರೆ, ನಿತೀಶ್‌ ರೆಡ್ಡಿ ಅಥವಾ ರವಿ ಬಿಷ್ಣೋಯ್‌ರನ್ನು ಹೊರಗಿಡುವ ಸಾಧ್ಯತೆ ಇದೆ. ಅಭಿಷೇಕ್‌ಗೆ ಗಾಯ: ಶುಕ್ರವಾರ ಕ್ಯಾಚಿಂಗ್‌ ಅಭ್ಯಾಸದ ವೇಳೆ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಮೊಣಕಾಲು ಉಳುಕಿಸಿಕೊಂಡು ಕುಂಟುತ್ತಲೇ ಮೈದಾನದಿಂದ ಹೊರನಡೆದರು. ಒಂದು ವೇಳೆ ಅವರು ಪಂದ್ಯಕ್ಕೆ ಅಲಭ್ಯರಾದರೆ, ಆಗ ವಾಷಿಂಗ್ಟನ್‌ ಸುಂದರ್‌ ಅಥವಾ ಧೃವ್‌ ಜುರೆಲ್‌ ಆಡಬಹುದು. ಆಗ ತಿಲಕ್‌ ವರ್ಮಾಗೆ ಆರಂಭಿಕನಾಗಿ ಬಡ್ತಿ ಸಿಗಬಹುದು. ಒತ್ತಡದಲ್ಲಿ ಇಂಗ್ಲೆಂಡ್‌: ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್‌, ಬೌಲಿಂಗ್‌ನಲ್ಲೂ ದುಬಾರಿಯಾಗಿತ್ತು. ಜೋಸ್‌ ಬಟ್ಲರ್‌ ಏಕಾಂಗಿ ಹೋರಾಟ ನಡೆಸಿದ್ದು. ಜೇಕಬ್‌ ಬೆಥ್‌ಹೆಲ್‌, ಹ್ಯಾರಿ ಬ್ರೂಕ್‌ರಂಥ ತಜ್ಞ ಬ್ಯಾಟರ್‌ಗಳಿಂದ ಬಟ್ಲರ್‌ಗೆ ಸೂಕ್ತ ಬೆಂಬಲದ ಅಗತ್ಯವಿದೆ. ಆದರೆ ಬೆಥ್‌ಹೆಲ್‌ ಅನಾರೋಗ್ಯದ ಬಳಲುತ್ತಿದ್ದು, ಶುಕ್ರವಾರ ಅಭ್ಯಾಸ ನಡೆಸಿಲ್ಲ. ಅವರು ಚೇತರಿಸಿಕೊಳ್ಳದೆ ಇದ್ದರೆ, ಆಗ ವಿಕೆಟ್‌ ಕೀಪರ್‌ ಜೇಮಿ ಸ್ಮಿತ್‌ ಕಣಕ್ಕಿಳಿಯಬಹುದು.

ಇನ್ನು ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಗಸ್‌ ಆ್ಯಟ್ಕಿನ್ಸನ್‌ ಬದಲು ಬ್ರೈಡನ್‌ ಕಾರ್ಸ್‌ ಆಡಲಿದ್ದಾರೆ ಎಂದು ಇಂಗ್ಲೆಂಡ್‌ ತಂಡ ತಿಳಿಸಿದೆ.

ಆಲ್ರೌಂಡರ್‌ ಜೇಮಿ ಓವರ್‌ಟನ್‌ ಮೇಲೆ ಚೆನ್ನೈನ ಅಭಿಮಾನಿಗಳು ಕಣ್ಣಿಡಲಿದ್ದಾರೆ. ಓವರ್‌ಟನ್‌ ಮುಂಬರುವ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲಿದ್ದು, ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ಅವರ ಬ್ಯಾಟಿಂಗ್‌ ನೋಡಲು ಚೆನ್ನೈ ಅಭಿಮಾನಿಗಳು ಕಾತರಿಸುತ್ತಿದ್ದಾರೆ.ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌, ಸ್ಯಾಮ್ಸನ್‌, ಸೂರ್ಯ(ನಾಯಕ), ತಿಲಕ್‌, ಹಾರ್ದಿಕ್‌, ರಿಂಕು, ನಿತೀಶ್‌, ಅಕ್ಷರ್‌, ಬಿಷ್ಣೋಯ್‌/ಶಮಿ, ಅರ್ಶ್‌ದೀಪ್‌, ವರುಣ್‌. ಇಂಗ್ಲೆಂಡ್‌: ಸಾಲ್ಟ್‌, ಡಕೆಟ್‌, ಬಟ್ಲರ್‌ (ನಾಯಕ), ಬ್ರೂಕ್‌, ಲಿವಿಂಗ್‌ಸ್ಟೋನ್‌, ಬೆಥ್‌ಹೆಲ್‌/ಸ್ಮಿತ್‌, ಓವರ್‌ಟನ್‌, ಕಾರ್ಸ್‌, ಆರ್ಚರ್‌, ರಶೀದ್‌, ವುಡ್‌.ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ