ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ಆತ್ಮವಿಶ್ವಾಸ ಹೆಚ್ಚಿಸಿದೆ. 5 ಪಂದ್ಯಗಳ ಸರಣಿಯನ್ನು ಭಾರತ 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ.

 ತಿರುವನಂತಪುರಂ: ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ಆತ್ಮವಿಶ್ವಾಸ ಹೆಚ್ಚಿಸಿದೆ. 5 ಪಂದ್ಯಗಳ ಸರಣಿಯನ್ನು ಭಾರತ 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ.

ಮಂಗಳವಾರ ಇಲ್ಲಿ ನಡೆದ 5ನೇ ಹಾಗೂ ಕೊನೆ ಪಂದ್ಯದಲ್ಲಿ ಭಾರತ 15 ರನ್‌ಗಳ ಗೆಲುವು ಸಾಧಿಸಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, ತಾಳ್ಮೆ ಕಳೆದುಕೊಳ್ಳದ ಭಾರತ ಪಂದ್ಯವನ್ನು ತನ್ನದಾಗಿಸಿಕೊಂಡಿತು.

77 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ರ ಆಕರ್ಷಕ ಅರ್ಧಶತಕ ಆಸರೆಯಾಯಿತು. ನಿರ್ಣಾಯಕ ಹಂತದಲ್ಲಿ ಹರ್ಮನ್‌ ವಿಕೆಟ್‌ ಕಳೆದುಕೊಂಡ ಬಳಿಕ ಅರುಂಧತಿ ರೆಡ್ಡಿ ಅವರ ಸ್ಫೋಟಕ ಆಟ ಭಾರತವನ್ನು ಸುರಕ್ಷಿತ ಮೊತ್ತ ತಲುಪಿಸಿತು. 20 ಓವರಲ್ಲಿ 7 ವಿಕೆಟ್‌ ನಷ್ಟಕ್ಕೆ ಭಾರತ 175 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭದ ಹೊರತಾಗಿಯೂ 20 ಓವರಲ್ಲಿ 7 ವಿಕೆಟ್‌ಗೆ 160 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸಿಡಿಯದ ಶಫಾಲಿ: ಸ್ಮೃತಿ ಮಂಧನಾಗೆ ವಿಶ್ರಾಂತಿ ನೀಡಿದ್ದರಿಂದ ಶಫಾಲಿ ವರ್ಮಾ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಆದರೆ ಶಫಾಲಿ ಕೇವಲ 5 ರನ್‌ ಗಳಿಸಿ ಔಟಾದರು. ಪಾದಾರ್ಪಣೆ ಮಾಡಿದ ಕಮಲಿನಿ 12 ರನ್‌ಗೆ ವಿಕೆಟ್‌ ಕಳೆದುಕೊಂಡರು. ಹರ್ಲೀನ್‌ರ ಆಟ 13 ರನ್‌ ಗೆ ಕೊನೆಗೊಂಡಿತು. ರಿಚಾ 5, ದೀಪ್ತಿ 7 ರನ್‌ಗೆ ಪೆವಿಲಿಯನ್‌ ಸೇರಿದರು. 11ನೇ ಓವರಲ್ಲಿ 77 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ನೆರವಾಗಿದ್ದು ನಾಯಕಿ ಹರ್ಮನ್‌ಪ್ರೀತ್‌. 6ನೇ ವಿಕೆಟ್‌ಗೆ ಅಮನ್‌ಜೋತ್‌ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟಿದ ಹರ್ಮನ್‌ಪ್ರೀತ್‌, 43 ಎಸೆತದಲ್ಲಿ 68 ರನ್ ಸಿಡಿಸಿದರು. ಅಮನ್‌ಜೋತ್ 21 ರನ್‌ ಗಳಿಸಿ 17ನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 18ನೇ ಓವರ್‌ನ 4ನೇ ಎಸೆತದಲ್ಲಿ ಹರ್ಮನ್‌ ವಿಕೆಟ್‌ ಪತನಗೊಂಡಾಗ ತಂಡದ ಮೊತ್ತ 142 ರನ್‌. ಆ ಹಂತದಲ್ಲಿ ಅರುಂಧತಿ ರೆಡ್ಡಿ ಅವರ ಸ್ಫೋಟಕ ಆಟ, ಭಾರತ ದೊಡ್ಡ ಮೊತ್ತ ಕಲೆಹಾಕಲು ಕಾರಣವಾಯಿತು.

11 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 27 ರನ್‌ ಸಿಡಿಸಿದ ರೆಡ್ಡಿ, ಮುರಿಯದ 8ನೇ ವಿಕೆಟ್‌ಗೆ ಸ್ನೇಹ ರಾಣಾ ಜೊತೆ 14 ಎಸೆತದಲ್ಲಿ 33 ರನ್‌ ಸೇರಿಸಿದರು.

ಲಂಕಾ ಹೋರಾಟ: ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ್ದ ಶ್ರೀಲಂಕಾ, ಭಾರತ ನೀಡಿದ 176 ರನ್‌ ಗುರಿ ಬೆನ್ನತ್ತುವ ವಿಶ್ವಾಸ ಪ್ರದರ್ಶಿಸಿತು. ಹಾಸಿನಿ ಪರೇರಾ 65 ಹಾಗೂ ಇಮೀಶಾ ದುಲಾನಿ 50 ರನ್‌ ಗಳಿಸಿದ್ದನ್ನು ಹೊರತುಪಡಿಸಿ ಲಂಕಾದ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಭಾರತ ಪರ 6 ಬೌಲರ್‌ಗಳು ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 20 ಓವರಲ್ಲಿ 175/7 (ಹರ್ಮನ್‌ಪ್ರೀತ್‌ 68, ಅರುಂಧತಿ 27*, ಕವಿಶಾ 2-11), ಶ್ರೀಲಂಕಾ 20 ಓವರಲ್ಲಿ 160/7 (ಹಾಸಿನಿ 65, ಇಮೀಶಾ 50, ದೀಪ್ತಿ 1-28)

ತವರಿನಲ್ಲಿ ಮೊದಲ 5-0 ಕ್ಲೀನ್‌ಸ್ವೀಪ್‌!

ಭಾರತ ತಂಡ ತವರಿನಲ್ಲಿ ಮೊದಲ ಬಾರಿಗೆ 5 ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ತವರಿನಾಚೆ ಭಾರತ 2 ಬಾರಿ ಈ ಸಾಧನೆ ಮಾಡಿದೆ. 2019ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ, 2024ರಲ್ಲಿ ಬಾಂಗ್ಲಾದೇಶದಲ್ಲಿ 5-0 ಅಂತರದಲ್ಲಿ ಸರಣಿ ಗೆದ್ದಿತ್ತು.

ಮಹಿಳಾ ಅಂ.ರಾ. ಟಿ20ಯಲ್ಲಿ ಗರಿಷ್ಠ ವಿಕೆಟ್‌: ದೀಪ್ತಿ ನಂ.1!

ಮಹಿಳೆಯರ ಅಂ.ರಾ. ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ದೀಪ್ತಿ 1 ವಿಕೆಟ್‌ ಕಬಳಿಸುವ ಮೂಲಕ ತಮ್ಮ ಒಟ್ಟು ವಿಕೆಟ್‌ ಸಂಖ್ಯೆಯನ್ನು 152ಕ್ಕೆ ಹೆಚ್ಚಿಸಿಕೊಂಡರು. 151 ವಿಕೆಟ್‌ ಪಡೆದಿರುವ ಆಸ್ಟ್ರೇಲಿಯಾದ ಮೆಗನ್‌ ಶ್ಯುಟ್‌ರನ್ನು ಹಿಂದಿಕ್ಕಿದರು. ಪಾಕ್‌ನ ನಿದಾ ದರ್ 144 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.