Lalit Modi ,india, vijay mally , fugitives

- ವಿಜಯ್‌ ಹಜಾರೆ ಏಕದಿನ: ತಮಿಳುನಾಡು ವಿರುದ್ಧ 4 ವಿಕೆಟ್‌ ಜಯ । ತ.ನಾಡು 288

- ಶೆಟ್ಟಿಗೆ 4 ವಿಕೆಟ್‌ । ಕರ್ನಾಟಕ 293/6, ಶ್ರೀಜಿತ್‌ 77, ಮಯಾಂಕ್‌ 58, ಶ್ರೇಯಸ್‌ 55 ಅಹಮದಾಬಾದ್‌: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಸೋಮವಾರ ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಸಾಧಿಸಿದ ಕರ್ನಾಟಕ, ಎಲೈಟ್‌ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು, 49.5 ಓವರಲ್ಲಿ 288 ರನ್‌ಗೆ ಆಲೌಟ್‌ ಆಯಿತು. ನಾಯಕ ಎನ್‌.ಜಗದೀಶನ್‌ (65) ಹಾಗೂ ಪ್ರದೋಷ್‌ ರಂಜನ್‌ ಪಾಲ್‌ (57)ರ ಅರ್ಧಶತಕಗಳು ತಂಡಕ್ಕೆ ನೆರವಾಯಿತು. ಕೆಳ ಕ್ರಮಾಂಕದಲ್ಲಿ ಮೊಹಮದ್‌ ಅಲಿ(31) ಹಾಗೂ ಸಾಯಿ ಕಿಶೋರ್‌ (38)ರ ಹೋರಾಟ ತಂಡವನ್ನು 300ರ ಗಡಿಗೆ ಕೊಂಡೊಯ್ದಿತು. ರಾಜ್ಯದ ಪರ ಅಭಿಲಾಶ್‌ ಶೆಟ್ಟಿ 4, ಶ್ರೀಶಾ ಆಚಾರ್‌ ಹಾಗೂ ವಿದ್ಯಾಧರ್‌ ಪಾಟೀಲ್‌ ತಲಾ 2 ವಿಕೆಟ್‌ ಕಬಳಿಸಿದರು. ಭಾರತ ತಂಡದ ವೇಗಿ ಪ್ರಸಿದ್ಧ್‌ ಕೃಷ್ಣ 10 ಓವರಲ್ಲಿ 60 ರನ್‌ ನೀಡಿ ವಿಕೆಟ್‌ ಪಡೆಯಲು ವಿಫಲರಾದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ 5ನೇ ಓವರಲ್ಲೇ ದೇವದತ್‌ ಪಡಿಕ್ಕಲ್‌ ವಿಕೆಟ್‌ ಕಳೆದುಕೊಂಡಿತು. ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಪಡಿಕ್ಕಲ್‌ ಈ ಪಂದ್ಯದಲ್ಲಿ 22 ರನ್‌ಗೆ ಔಟಾದರು. ಕರುಣ್‌ ನಾಯರ್‌ (17), ಆರ್‌.ಸ್ಮರಣ್‌ (15)ರಿಂದಲೂ ದೊಡ್ಡ ಇನ್ನಿಂಗ್ಸ್‌ ಮೂಡಿಬರಲಿಲ್ಲ. 94 ರನ್‌ಗೆ ರಾಜ್ಯ ತಂಡ 3 ವಿಕೆಟ್‌ ಕಳೆದುಕೊಂಡಿತು.

ನಾಯಕ ಮಯಾಂಕ್‌ ಅಗರ್‌ವಾಲ್‌ 58 ರನ್‌ ಗಳಿಸಿ ಔಟಾದಾಗ ತಂಡದ ಮೊತ್ತ 136. ಕೊಂಚ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕೆ.ಎಲ್‌.ಶ್ರೀಜಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ಆಸರೆಯಾದರು. ಇವರಿಬ್ಬರು 5ನೇ ವಿಕೆಟ್‌ಗೆ 116 ರನ್‌ ಸೇರಿಸಿ ತಂಡವನ್ನು ಜಯದ ಹೊಸ್ತಿಲು ತಲುಪಿಸಿದರು. ಶ್ರೀಜಿತ್‌ 77, ಶ್ರೇಯಸ್‌ 55 ರನ್‌ ಗಳಿಸಿ ಸತತ 2 ಎಸೆತಗಳಲ್ಲಿ ಔಟಾದಾಗ ತಂಡಕ್ಕೆ ಗೆಲ್ಲಲು ಇನ್ನೂ 37 ರನ್‌ ಬೇಕಿತ್ತು. ಆಗ ಅಭಿನವ್‌ ಮನೋಹರ್‌ (20*) ಹಾಗೂ ವಿದ್ಯಾಧರ್‌ ಪಾಟೀಲ್‌ (17*) ಮುರಿಯದ 7ನೇ ವಿಕೆಟ್‌ಗೆ 41 ರನ್‌ ಸೇರಿಸಿ ತಂಡವನ್ನು ಇನ್ನೂ 2.5 ಓವರ್‌ ಬಾಕಿ ಇರುವಂತೆಯೇ ಗೆಲ್ಲಿಸಿದರು. ಸ್ಕೋರ್‌: ತಮಿಳುನಾಡು 49.5 ಓವರಲ್ಲಿ 288/10 (ಜಗದೀಶನ್‌ 65, ಪ್ರದೋಷ್‌ 57, ಅಭಿಲಾಶ್‌ 4-57), ಕರ್ನಾಟಕ 47.1 ಓವರಲ್ಲಿ 293/6 (ಶ್ರೀಜಿತ್‌ 77, ಮಯಾಂಕ್‌ 58, ಶ್ರೇಯಸ್‌ 55, ಸಾಯಿ ಕಿಶೋರ್‌ 1-51)