ಸಾರಾಂಶ
ವಡೋದರ: ಕರ್ನಾಟಕ ತಂಡ ರಾಷ್ಟ್ರೀಯ ಏಕದಿನ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ, ವಿಜಯ್ ಹಜಾರೆ ಟ್ರೋಫಿ ರಾಜ್ಯ ತಂಡದ ಪಾಲಾಯಿತು. ಇಲ್ಲಿನ ಕೊಟಂಬಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಕರ್ನಾಟಕಕ್ಕೆ 36 ರನ್‌ಗಳ ರೋಚಕ ಗೆಲುವು ದೊರೆಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕರ್ನಾಟಕಕ್ಕೆ ಆರ್.ಸ್ಮರಣ್‌ರ ಅಮೋಘ ಶತಕ, ಅಭಿನವ್ ಮನೋಹರ್ ಹಾಗೂ ಕೆ.ಎಲ್.ಶ್ರೀಜಿತ್‌ರ ಆಕರ್ಷಕ ಅರ್ಧಶತಕಗಳು ನೆರವಾದವು. ಒಂದು ಹಂತದಲ್ಲಿ 67 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಈ ಮೂವರ ಆಟ ಆಸರೆಯಾಯಿತು.
50 ಓವರಲ್ಲಿ ರಾಜ್ಯ ತಂಡ 6 ವಿಕೆಟ್‌ಗೆ 348 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಧೃವ್ ಶೋರೆ ಅವರ ಹೋರಾಟದ ಶತಕ ಹಾಗೂ ಕೊನೆಯಲ್ಲಿ ಹರ್ಷ್ ದುಬೆಯ ಸ್ಫೋಟಕ ಆಟದ ಹೊರತಾಗಿಯೂ ವಿದರ್ಭ 48.2 ಓವರಲ್ಲಿ 312 ರನ್‌ಗೆ ಆಲೌಟ್ ಆಯಿತು. ಅದ್ಭುತ ಬ್ಯಾಟಿಂಗ್: ದೇವದತ್ ಪಡಿಕ್ಕಲ್(08), ಕೆ.ವಿ.ಅನೀಶ್ (21) ಹಾಗೂ ಮಯಾಂಕ್ ಅಗರ್‌ವಾಲ್ (32) ಔಟಾದಾಗ ತಂಡದ ಮೊತ್ತ 67 ರನ್. ಈ ಹಂತದಲ್ಲಿ ಜೊತೆಯಾದ ಸ್ಮರಣ್ ಹಾಗೂ ಶ್ರೀಜಿತ್ 4ನೇ ವಿಕೆಟ್‌ಗೆ 160 ರನ್ ಜೊತೆಯಾಟವಾಡಿದರು. ಇದು ಕರ್ನಾಟಕದ ಆತ್ಮವಿಶ್ವಾಸ ವೃದ್ಧಿಸಿತು.
ಶ್ರೀಜಿತ್ 74 ಎಸೆತದಲ್ಲಿ 78 ರನ್ ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ಅಭಿನವ್ ಮನೋಹರ್, ರಾಜ್ಯದ ರನ್ ಗಳಿಕೆಗೆ ವೇಗ ತುಂಬಿದರು. ಸ್ಮರಣ್ ಜೊತೆಗೂಡಿ ಕೇವಲ 68 ಎಸೆತದಲ್ಲಿ 106 ರನ್ ಸೇರಿಸಿದರು.
89 ಎಸೆತದಲ್ಲಿ ಶತಕ ಪೂರೈಸಿದ ಸ್ಮರಣ್ 92 ಎಸೆತದಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿ ಔಟಾದರೆ, ಅಭಿನವ್ 42 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 79 ರನ್ ಚಚ್ಚಿದರು. ಕೈಹಿಡಿಯದ ಕರುಣ್: ವಿದರ್ಭಕ್ಕೆ ಈ ಪಂದ್ಯದಲ್ಲಿ ನಾಯಕ ಕರುಣ್ ನಾಯರ್ ಆಸರೆಯಾಗಲಿಲ್ಲ. ಆರಂಭಿಕ ಆಟಗಾರ ಯಶ್ ರಾಥೋಡ್ ಔಟಾದ ಬಳಿಕ ಕ್ರೀಸ್‌ಗಿಳಿದ ಕರುಣ್ 27 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಧೃವ್ ಶೋರೆ ಹೋರಾಟ ಬಿಡಲಿಲ್ಲ. ಜಿತೇಶ್ ಶರ್ಮಾ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದ ಶೋರೆ, ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿದರು. 111 ಎಸೆತದಲ್ಲಿ 110 ರನ್ ಗಳಿಸಿದ ದಿಲ್ಲಿ ಮೂಲದ ಆಟಗಾರನನ್ನು ಪೆವಿಲಿಯನ್‌ಗಟ್ಟಿದ ಅಭಿಲಾಷ್ ಶೆಟ್ಟಿ ಕರ್ನಾಟಕ ಮೇಲುಗೈ ಸಾಧಿಸಲು ನೆರವಾದರು.
ಯುವ ಬ್ಯಾಟರ್ ಹರ್ಷ್ ದುಬೆಯ ಸ್ಫೋಟಕ ಆಟ ಕರ್ನಾಟಕಕ್ಕೆ ಕೊಂಚ ಆತಂಕ ಮೂಡಿಸಿತಾದರೂ, ಮಯಾಂಕ್ ಪಡೆಯನ್ನು ಟ್ರೋಫಿಯಿಂದ ದೂರವಿರಿಸಲು ಸಾಧ್ಯವಾಗಲಿಲ್ಲ. 30 ಎಸೆತದಲ್ಲಿ ಹರ್ಷ್ 63 ರನ್ ಗಳಿಸಿ ಗಮನ ಸೆಳೆದರು. ಸ್ಕೋರ್: ಕರ್ನಾಟಕ 50 ಓವರಲ್ಲಿ 348/6 (ಸ್ಮರಣ್ 101, ಅಭಿನವ್ 79, ಶ್ರೀಜಿತ್ 78, ನಚಿಕೇತ್ 2-68), ವಿದರ್ಭ 48.2 ಓವರಲ್ಲಿ 312/10 (ಧೃವ್ 110, ಹರ್ಷ್ 63, ಕೌಶಿಕ್ 3-47, ಅಭಿಲಾಷ್ 3-58, ಪ್ರಸಿದ್ಧ್ 3-84)
ಫೈನಲ್‌ಗೇರಿದಾಗಲೆಲ್ಲಾ ಟ್ರೋಫಿ ಗೆದ್ದ ಕರ್ನಾಟಕ!
ಕರ್ನಾಟಕ ತಂಡ 5 ಬಾರಿ ವಿಜಯ್ ಹಜಾರೆ ಫೈನಲ್ ಪ್ರವೇಶಿಸಿದ್ದು, ಎಲ್ಲ 5 ಬಾರಿಯೂ ಟ್ರೋಫಿ ಗೆದ್ದಿದೆ. ಇದಕ್ಕೂ ಮುನ್ನ 2013-14, 2014-15, 2017-18, 2019-20ರಲ್ಲಿ ರಾಜ್ಯ ತಂಡ ಚಾಂಪಿಯನ್ ಆಗಿತ್ತು.