ಟಿ20 ವಿಶ್ವಕಪ್‌ಗೂ ಮುನ್ನ ಬಹಿಷ್ಕಾರದ ಹೈಡ್ರಾಮಾ ಮಾಡಿದ್ದ ಪಾಕಿಸ್ತಾನಕ್ಕೆ ಈಗ ಟೀಮ್‌ ಇಂಡಿಯಾ ಮುಟ್ಟಿನೋಡುವಂತೆ ಉತ್ತರ ನೀಡಿದೆ. ವಿಶ್ವಕಪ್‌ ಪಂದ್ಯಗಳಲ್ಲಿ ಯಾವತ್ತೂ ಭಾರತಕ್ಕೆ ಸವಾಲಾಗದ ಪಾಕ್‌ ತಂಡ, ಭಾನುವಾರ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲೂ ಸುಲಭದಲ್ಲಿ ಮಂಡಿಯೂರಿತು

ಕೊಲಂಬೊ: ಟಿ20 ವಿಶ್ವಕಪ್‌ಗೂ ಮುನ್ನ ಬಹಿಷ್ಕಾರದ ಹೈಡ್ರಾಮಾ ಮಾಡಿದ್ದ ಪಾಕಿಸ್ತಾನಕ್ಕೆ ಈಗ ಟೀಮ್‌ ಇಂಡಿಯಾ ಮುಟ್ಟಿನೋಡುವಂತೆ ಉತ್ತರ ನೀಡಿದೆ. ವಿಶ್ವಕಪ್‌ ಪಂದ್ಯಗಳಲ್ಲಿ ಯಾವತ್ತೂ ಭಾರತಕ್ಕೆ ಸವಾಲಾಗದ ಪಾಕ್‌ ತಂಡ, ಭಾನುವಾರ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲೂ ಸುಲಭದಲ್ಲಿ ಮಂಡಿಯೂರಿತು. ಇದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ತನ್ನದಾಗಿಸಿಕೊಂಡ ಭಾರತ ಸೂಪರ್‌-8 ಹಂತ ಪ್ರವೇಶಿಸಿದೆ.

ತನ್ನ ಸ್ಪಿನ್‌ ಅಸ್ತ್ರದ ಮೂಲಕ ಭಾರತೀಯರನ್ನು ಕಟ್ಟಿಹಾಕಬಹುದು ಅಂದುಕೊಂಡಿದ್ದ ಪಾಕಿಸ್ತಾನ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ಇಶಾನ್‌ ಕಿಶನ್‌ ಅಬ್ಬರ, ಇತರ ಬ್ಯಾಟರ್‌ಗಳ ಸಮಯೋಚಿತ ಆಟದ ನೆರವಿನಿಂದ ಭಾರತ 7 ವಿಕೆಟ್‌ಗೆ 175 ರನ್‌ ಕಲೆಹಾಕಿತು. ಈ ಮೊತ್ತ ಕಡಿಮೆಯಾಯಿತೇ ಎಂದು ಅಭಿಮಾನಿಗಳು ಚಿಂತೆಗೀಡಾದರೂ, ಭಾರತೀಯ ಬೌಲರ್‌ಗಳು ಅದಕ್ಕೆ ಆಸ್ಪದ ಕೊಡಲಿಲ್ಲ. ಪಾಕಿಸ್ತಾನವನ್ನು 18 ಓವರ್‌ಗಳಲ್ಲಿ 114 ರನ್‌ಗೆ ಆಲೌಟ್‌ ಮಾಡಿ 61 ರನ್‌ಗಳಲ್ಲಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು.

ಇಶಾನ್‌ ಆರ್ಭಟ:

ಮೊದಲ ಓವರ್‌ನಲ್ಲೇ ಅಭಿಷೇಕ್‌ ಶರ್ಮಾ ಸೊನ್ನೆಗೆ ಔಟಾದಾಗ ಭಾರತದ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಆದರೆ 2ನೇ ಓವರ್‌ನಿಂದ ಅಬ್ಬರಿಸಲು ಶುರುವಿಟ್ಟ ಇಶಾನ್‌ ಕಿಶನ್‌ ತಂಡಕ್ಕೆ ಚೇತರಿಕೆ ನೀಡಿದರು. ಪವರ್‌-ಪ್ಲೇನಲ್ಲಿ ತಂಡದ ಸ್ಕೋರ್‌ 1 ವಿಕೆಟ್‌ಗೆ 52. ಕೇವಲ 27 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಇಶಾನ್‌, 9ನೇ ಓವರ್‌ನಲ್ಲೇ ನಿರ್ಗಮಿಸಿದರು. ಅವರು 40 ಎಸೆತಕ್ಕೆ 77 ರನ್‌ ಗಳಿಸಿದರು. ಇಶಾನ್‌ ನಿರ್ಗಮನದ ಬಳಿಕ ತಂಡದ ರನ್‌ ವೇಗ ಕುಸಿಯಿತು. ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಜವಾಬ್ದಾರಿಯುವ ಆಟದ ಮೂಲಕ ತಂಡವನ್ನು ಕಾಪಾಡಿದರು. ತಿಲಕ್‌ 24 ಎಸೆತಕ್ಕೆ 25, ಸೂರ್ಯಕುಮಾರ್‌ 29 ಎಸೆತಕ್ಕೆ 32 ರನ್‌ ಗಳಿಸಿದರು. 9-17 ಓವರ್‌ ನಡುವೆ ಕೇಔಲ 58 ರನ್‌ ಗಳಿಸಿದ ಭಾರತ, ಕೊನೆ 3 ಓವರ್‌ನಲ್ಲಿ 35 ರನ್‌ ದೋಚಿತು. ಶಿವಂ ದುಬೆ 17 ಎಸೆತಕ್ಕೆ 27 ರನ್ ಕೊಡುಗೆ ನೀಡಿದರು.

ಪಾಕಿಸ್ತಾನ ನಿರುತ್ತರ:

ಪಾಕ್‌ನ ಪತನಕ್ಕೆ ಹಾರ್ದಿಕ್‌ ಪಾಂಡ್ಯ ಮೊದಲ ಓವರ್‌ನಲ್ಲೇ ನಾಂದಿ ಹಾಡಿದರು. ಫರ್ಹಾನ್‌ ಸೊನ್ನೆಗೆ ಔಟಾದರು. 2ನೇ ಓವರ್‌ನಲ್ಲಿ ಸೈಮ್‌ ಅಯೂಬ್‌ ಹಾಗೂ ನಾಯಕ ಸಲ್ಮಾನ್‌ ಆಘಾಗೆ ಪೆವಿಲಿಯನ್‌ ಹಾದಿ ತೋರಿಸಿಕೊಟ್ಟ ಬೂಮ್ರಾ, ಪಾಕ್‌ ಚೇತರಿಸಿಕೊಳ್ಳದಂತೆ ನೋಡಿಕೊಂಡರು. ಬಾಬರ್‌ ಆಜಂ(5) 5ನೇ ಓವರ್‌ನಲ್ಲಿ ಔಟಾದ ಬಳಿಕ ಪಾಕ್‌ಗೇ ಏಕೈಕ ಆಸರೆಯಾಗಿದ್ದು ಉಸ್ಮಾನ್‌ ಖಾನ್‌. ಅವರು 34 ಎಸೆತಕ್ಕೆ 44 ರನ್‌ ಸಿಡಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಪೆವಿಲಿಯನ್ ಪರೇಡ್‌ ನಡೆಸಿದ ತಂಡ ಯಾವುದೇ ಹೋರಾಟ ನಡೆಸದೆ ಸೋಲೊಪ್ಪಿಕೊಂಡಿತು. ಹಾರ್ದಿಕ್‌, ಬೂಮ್ರಾ, ಅಕ್ಷರ್‌, ವರುಣ್‌ ತಲಾ 2 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 175/7 (ಇಶಾನ್‌ 77, ಸೂರ್ಯ 32, ಶಿವಂ ದುಬೆ 27, ತಿಲಕ್‌ 25, ಸೈಮ್‌ ಅಯೂಬ್‌ -25), ಪಾಕಿಸ್ತಾನ 18 ಓವರ್‌ಗಳಲ್ಲಿ 114/10 (ಉಸ್ಮಾನ್‌ 44, ಶಾಹೀನ್‌ 23, ಹಾರ್ದಿಕ್‌ 2-16, ಬೂಮ್ರಾ 2-17, ವರುಣ್‌ 2-17, ಅಕ್ಷರ್‌ 2-29)

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌

ಪಾಕಿಸ್ತಾನದ ವಿರುದ್ಧ

ಭಾರತಕ್ಕೆ 16-1 ಲೀಡ್‌

ಭಾರತ ತಂಡ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ 8ನೇ ಗೆಲುವು ಸಾಧಿಸಿದೆ. ಆಡಿರುವ 9 ಪಂದ್ಯಗಳ ಪೈಕಿ ಭಾರತ ಒಮ್ಮೆ ಮಾತ್ರ ಸೋತಿದೆ. ಇನ್ನು ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ಒಟ್ಟಾಗಿ ಭಾರತ ತಂಡ ಪಾಕ್‌ ವಿರುದ್ಧ ದಾಖಲೆಯನ್ನು 16-1ಕ್ಕೆ ಹೆಚ್ಚಿಸಿದೆ. ಏಕದಿನ ವಿಶ್ವಕಪ್‌ನಲ್ಲಿ ಎಲ್ಲಾ 8ರಲ್ಲೂ ಭಾರತ ಗೆದ್ದಿದೆ.