ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಾಹುಲ್‌ ಅಲ್ಲ : 2019ರಿಂದಲೂ ತಂಡದಲ್ಲಿರುವ ಆಟಗಾರನಿಗೆ ಹುದ್ದೆ

KannadaprabhaNewsNetwork | Updated : Mar 15 2025, 04:26 AM IST

ಸಾರಾಂಶ

ರಿಷಭ್‌ರಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ನಾಯಕನ ಘೋಷಿಸಿದ ಫ್ರಾಂಚೈಸಿ. 2021ರಿಂದ 2024ರ ವರೆಗೆ ರಿಷಭ್‌ ಪಂತ್‌ ಡೆಲ್ಲಿ ನಾಯಕರಾಗಿದ್ದರು. ಕಳೆದ ವರ್ಷ ಅವರನ್ನು ತಂಡ ರಿಟೈನ್‌ ಮಾಡಿಕೊಂಡಿರಲಿಲ್ಲ.

ನವದೆಹಲಿ: ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನೂತನ ನಾಯಕನಾಗಿ ತಾರಾ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ನೇಮಕಗೊಂಡಿದ್ದಾರೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ನಾಯಕನ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದರೂ, ನಾಯಕತ್ವ ವಹಿಸಲು ಅವರು ನಿರಾಕರಿಸಿದ ಕಾರಣ ಅಕ್ಷರ್‌ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

2019ರಿಂದಲೂ ಡೆಲ್ಲಿ ತಂಡದಲ್ಲಿರುವ 31 ವರ್ಷದ ಅಕ್ಷರ್‌ರನ್ನು ಇತ್ತೀಚೆಗೆ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಯು 16.50 ಕೋಟಿ ರು. ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. ಅವರು ಡೆಲ್ಲಿ ಪರ 82 ಪಂದ್ಯ ಆಡಿದ್ದು, 62 ವಿಕೆಟ್‌ ಪಡೆದು, 967 ರನ್‌ ಕಲೆಹಾಕಿದ್ದಾರೆ. ಅವರಿಗೆ ಮುಷ್ತಾಕ್‌ ಅಲಿ ಟಿ20, ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಗುಜರಾತ್‌ ತಂಡವನ್ನು ಮುನ್ನಡೆಸಿದ ಅನುಭವವಿದೆ.  

ಅವರು ಭಾರತ ಟಿ20 ತಂಡಕ್ಕೆ ಉಪನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ.2021ರಿಂದ 2024ರ ವರೆಗೆ ರಿಷಭ್‌ ಪಂತ್‌ ಡೆಲ್ಲಿ ನಾಯಕರಾಗಿದ್ದರು. ಕಳೆದ ವರ್ಷ ಅವರನ್ನು ತಂಡ ರಿಟೈನ್‌ ಮಾಡಿಕೊಂಡಿರಲಿಲ್ಲ. ಬಳಿಕ ಹರಾಜಿನಲ್ಲಿ ಕೆ.ಎಲ್‌.ರಾಹುಲ್‌ರನ್ನು ಡೆಲ್ಲಿ ₹14 ಕೋಟಿ ನೀಡಿ ಖರೀದಿಸಿತ್ತು. ಅವರನ್ನೇ ನಾಯಕನಾಗಿ ನೇಮಿಸುವ ನಿರೀಕ್ಷೆ ಇತ್ತಾದರೂ, ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ರಾಹುಲ್ ಆಫರ್‌ ತಿರಸ್ಕರಿಸಿದ್ದರು ಎನ್ನಲಾಗಿದೆ.

18 ವರ್ಷದಲ್ಲಿ 14ನೇ ನಾಯಕ

ಅಕ್ಷರ್‌ ಡೆಲ್ಲಿ ತಂಡದ 14ನೇ ನಾಯಕ. 2008ರಲ್ಲಿ ವಿರೇಂದ್ರ ಸೆಹ್ವಾಗ್‌ ನಾಯಕತ್ವ ವಹಿಸಿಕೊಂಡಿದ್ದರು. ಆ ಬಳಿಕ ಇನ್ನೂ 12 ಮಂದಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಸೆಹ್ವಾಗ್‌(52 ಪಂದ್ಯ), ರಿಷಭ್‌(43), ಶ್ರೇಯಸ್‌ ಅಯ್ಯರ್‌(41) ಡೆಲ್ಲಿ ತಂಡಕ್ಕೆ ಅತಿ ಹೆಚ್ಚು ಬಾರಿ ನಾಯಕತ್ವ ವಹಿಸಿದ ಆಟಗಾರರು.

ಎಲ್ಲಾ 10 ತಂಡಕ್ಕೂ ನಾಯಕರ ಘೋಷಣೆ

ಈ ಬಾರಿ ಐಪಿಎಲ್‌ನ ಎಲ್ಲಾ 10 ತಂಡಗಳಿಗೂ ನಾಯಕರ ಘೋಷಣೆಯಾಗಿದೆ. ಭಾರತದ 9, ಆಸ್ಟ್ರೇಲಿಯಾದ ಓರ್ವ ನಾಯಕರಾಗಿದ್ದಾರೆ. ಈ ಪೈಕಿ 5 ತಂಡಗಳಿಗೆ ಈ ಬಾರಿ ಹೊಸ ನಾಯಕನ ನೇಮಕವಾಗಿದೆ. ಆರ್‌ಸಿಬಿಗೆ ರಜತ್‌ ಪಾಟೀದಾರ್‌, ಕೆಕೆಆರ್‌ಗೆ ರಹಾನೆ, ಡೆಲ್ಲಿಗೆ ಅಕ್ಷರ್‌, ಲಖನೌಗೆ ರಿಷಭ್‌ ಪಂತ್‌, ಪಂಜಾಬ್‌ಗೆ ಶ್ರೇಯಸ್‌ ಅಯ್ಯರ್‌ ನಾಯಕತ್ವ ವಹಿಸಲಿದ್ದಾರೆ. ಉಳಿದಂತೆ ಚೆನ್ನೈಗೆ ಋತುರಾಜ್‌ ಗಾಯಕ್ವಾಡ್‌, ಮುಂಬೈಗೆ ಹಾರ್ದಿಕ್‌, ಗುಜರಾತ್‌ಗೆ ಶುಭ್‌ಮನ್‌ ಗಿಲ್‌, ರಾಜಸ್ಥಾನಕ್ಕೆ ಸಂಜು ಸ್ಯಾಮ್ಸನ್‌, ಸನ್‌ರೈಸರ್ಸ್‌ಗೆ ಪ್ಯಾಟ್‌ ಕಮಿನ್ಸ್‌ ನಾಯಕರಾಗಿ ಮುಂದುವರಿಯಲಿದ್ದಾರೆ.

Share this article