ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದ ವೇಳೆ ವಿಚಿತ್ರವಾಗಿ ಸಂಭ್ರಮಿಸಿದ್ದಕ್ಕೆ ಲಖನೌ ಸ್ಪಿನ್ನರ್‌ ದಿಗ್ವೇಶ್‌ಗೆ ದಂಡ

KannadaprabhaNewsNetwork | Updated : Apr 03 2025, 05:00 AM IST

ಸಾರಾಂಶ

ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದ ವೇಳೆ ವಿಚಿತ್ರವಾಗಿ ಸಂಭ್ರಮಿಸಿದ್ದಕ್ಕೆ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಸ್ಪಿನ್ನರ್‌ ದಿಗ್ವೇಶ್‌ ರಾಠಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ.

ಲಖನೌ: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದ ವೇಳೆ ವಿಚಿತ್ರವಾಗಿ ಸಂಭ್ರಮಿಸಿದ್ದಕ್ಕೆ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಸ್ಪಿನ್ನರ್‌ ದಿಗ್ವೇಶ್‌ ರಾಠಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ. ಪಂಜಾಬ್‌ ಬ್ಯಾಟರ್‌ ಪ್ರಿಯಾನ್ಶ್‌ ಆರ್ಯ ಅವರು ದಿಗ್ವೇಶ್‌ ಎಸೆತದಲ್ಲಿ ಶಾರ್ದೂಲ್‌ ಠಾಕೂರ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದರು. ಕೂಡಲೇ ಪ್ರಿಯಾನ್ಶ್‌ ಬಳಿ ತೆರಳಿದ ದಿಗ್ವೇಶ್, ಅವರ ದೇಹಕ್ಕೆ ಕೈ ತಾಗಿಸಿದ್ದಲ್ಲದೇ ತಮ್ಮ ಕೈಯಲ್ಲಿ ಏನೋ ಬರೆಯುವಂತೆ ಸನ್ನೆ ಮಾಡಿ ಸಂಭ್ರಮಿಸಿದ್ದರು. 2019ರಲ್ಲಿ ಕೊಹ್ಲಿಯನ್ನು ಔಟ್‌ ಮಾಡಿದಾಗ ವಿಂಡೀಸ್‌ನ ಕೆಸ್ರಿಕ್‌ ವಿಲಿಯಮ್ಸ್‌ ಇದೇ ರೀತಿ ಸಂಭ್ರಮಿಸಿದ್ದರು.

ಇನ್ನು ರಾಯಲ್ಸ್‌ಗೆ ಸಂಜು ನಾಯಕ, ವಿಕೆಟ್ ಕೀಪರ್

ಬೆಂಗಳೂರು: ಕೈ ಬೆರಳಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಸಂಜು ಸ್ಯಾಮ್ಸನ್‌ ಈ ಐಪಿಎಲ್‌ನ ಮುಂದಿನ ಪಂದ್ಯಗಳಲ್ಲಿ ರಾಜಸ್ಥಾನ ಪರ ವಿಕೆಟ್‌ ಕೀಪಿಂಗ್‌ ಮಾಡಲಿದ್ದಾರೆ. ಜೊತೆಗೆ ತಂಡದ ನಾಯಕತ್ವದ ಹೊಣೆಗಾರಿಕೆಯನ್ನು ಮರಳಿ ಪಡೆಯಲಿದ್ದಾರೆ. 2021ರಿಂದ ತಂಡದ ನಾಯಕರಾಗಿರುವ ಸ್ಯಾಮ್ಸನ್‌, ಗಾಯದಿಂದಾಗಿ ಮೊದಲ 3 ಪಂದ್ಯಗಳಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿ ಕೇವಲ ಬ್ಯಾಟಿಂಗ್‌ ಮಾಡಿದ್ದರು. ಅವರ ಬದಲು ರಿಯಾನ್‌ ಪರಾಗ್‌ ನಾಯಕನಾಗಿದ್ದರೆ, ಧ್ರುವ್‌ ಜುರೆಲ್‌ ವಿಕೆಟ್‌ ಕೀಪರ್‌ ಕಾರ್ಯನಿರ್ವಹಿಸಿದ್ದರು. ಸದ್ಯ ಟೂರ್ನಿಯಲ್ಲಿ ವಿಕೆಟ್‌ ಕೀಪಿಂಗ್‌ ಮಾಡಲು ಸಂಜು ಸ್ಯಾಮ್ಸನ್‌ಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಅನುಮತಿ ನೀಡಿದೆ. ರಾಜಸ್ಥಾನ ಮುಂದಿನ ಪಂದ್ಯದಲ್ಲಿ ಏ.5ಕ್ಕೆ ಪಂಜಾಬ್‌ ವಿರುದ್ಧ ಆಡಲಿದೆ.

ಟಿ20 ರ್‍ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವರುಣ್‌

ದುಬೈ: ಭಾರತದ ತಾರಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಐಸಿಸಿ ಟಿ20 ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವರುಣ್‌ 706 ರೇಟಿಂಗ್‌ ಅಂಕಗಳನ್ನು ಹೊಂದಿದ್ದಾರೆ. ನ್ಯೂಜಿಲೆಂಡ್‌ನ ಜೇಕಡ್‌ ಡಫಿ (723 ಅಂಕ), ವೆಸ್ಟ್‌ಇಂಡೀಸ್‌ನ ಅಕೇಲ್‌ ಹೊಸೈನ್‌(707) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಲೆಗ್‌ ಸ್ಪಿನ್ನರ್‌ ರವಿ ಬಿಷ್ನೋಯ್‌ 7ನೇ, ವೇಗಿ ಅರ್ಶ್‌ದೀಪ್‌ ಸಿಂಗ್ 10ನೇ, ಅಕ್ಷರ್ ಪಟೇಲ್‌ 13ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಭಿಷೇಕ್‌ ಶರ್ಮಾ 2ನೇ, ತಿಲಕ್ 4ನೇ, ಸೂರ್ಯಕುಮಾರ್‌ 5ನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್‌ ಪಾಂಡ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಪಾಕ್‌ ವಿರುದ್ಧ 83 ರನ್‌ ಜಯ: ಕಿವೀಸ್‌ಗೆ ಸರಣಿ

ಹ್ಯಾಮಿಲ್ಟನ್: ಪಾಕಿಸ್ತಾನ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 83 ರನ್‌ ಗೆಲುವು ಸಾಧಿಸಿದ ನ್ಯೂಜಿಲೆಂಡ್‌, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 292 ರನ್‌ ಕಲೆಹಾಕಿತು. ಮಿಚೆಲ್ ಹೇ 78 ಎಸೆತಗಳಲ್ಲಿ ಔಟಾಗದೆ 99, ಮುಹಮ್ಮದ್ ಅಬ್ಬಾಸ್‌ 41 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 41.2 ಓವರ್‌ಗಳಲ್ಲಿ 208 ರನ್‌ಗೆ ಆಲೌಟಾಯಿತು. 32 ರನ್‌ಗೆ 5, ಬಳಿಕ 114 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಫಹೀಂ ಅಶ್ರಫ್ (73 ರನ್‌), ನಸೀಂ ಶಾ (51) ಆಸರೆಯಾದರು. ಈ ಜೋಡಿ 9ನೇ ವಿಕೆಟ್‌ಗೆ 60 ರನ್‌ ಜೊತೆಯಾಟವಾಡಿತು. ಆದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.

Share this article