ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಅಥ್ಲೀಟ್‌ಗಳು ಚಾಂಪಿಯನ್‌: ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork | Updated : Aug 16 2024, 04:22 AM IST

ಸಾರಾಂಶ

ಭಾರತೀಯ ಒಲಿಂಪಿಯನ್‌ಗಳ ಜೊತೆ ಪ್ರಧಾನಿ ಮೋದಿ ಸಂವಾದ. ಹಾಕಿ ಸ್ಟಿಕ್‌ ಉಡುಗೊರೆ ನೀಡಿದ ಹಾಕಿ ತಂಡದ ಆಟಗಾರರು. ಪಿಸ್ತೂಲ್‌ ಕಾರ್ಯಾಚರಿಸುವ ಬಗ್ಗೆ ಮನು ಭಾಕರ್‌ ಜೊತೆ ಕುತೂಹಲದಿಂದ ಪ್ರಶ್ನಿಸಿದ ಮೋದಿ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಪ್ರತಿ ಕ್ರೀಡಾಪಟುಗಳು ಕೂಡಾ ಚಾಂಪಿಯನ್‌ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಭಾರತದ ಒಲಿಂಪಿಯನ್‌ಗಳ ಜೊತೆ ಗುರುವಾರ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಭೋಜನಕೂಟ ಏರ್ಪಡಿಸಿ, ಅವರೊಂದಿಗೆ ಸಂವಾದ ನಡೆಸಿದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಆಟಗಾರನೂ ಚಾಂಪಿಯನ್. ಭಾರತ ಸರ್ಕಾರವು ಕ್ರೀಡೆಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಮತ್ತು ಕ್ರೀಡೆಯ ಉನ್ನತಿಗಾಗಿ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸಂವಾದಕ್ಕೂ ಮುನ್ನ, ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರರು, ಶೂಟರ್‌ಗಳಾದ ಮನು ಭಾಕರ್‌, ಸರಬ್ಜೋತ್‌ ಸಿಂಗ್‌, ಸ್ವಪ್ನಿಲ್‌ ಕುಸಾಲೆ, ಕುಸ್ತಿಪಟು ಅಮನ್‌ ಶೆರಾವತ್‌ ಸೇರಿ ಹಲವರು ಪ್ರಧಾನಿ ಜೊತೆ ಪದಕ ಪ್ರದರ್ಶಿಸಿ ಫೋಟೋ ಕ್ಲಿಕ್ಕಿಸಿದರು. ಭಾರತದ ಬಹುತೇಕ ಅಥ್ಲೀಟ್‌ಗಳು ಸಂವಾದದಲ್ಲಿ ಪಾಲ್ಗೊಂಡರು. ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌, ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌, ಮೀರಾಬಾಯಿ ಚಾನು ಸೇರಿ ಇತರ ಅಥ್ಲೀಟ್‌ಗಳ ಜೊತೆಗೂ ಪ್ರಧಾನಿ ಅವರು ಪ್ಯಾರಿಸ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಕೇಂದ್ರ ಕ್ರೀಡಾ ಸಚಿವ ಮಾನ್‌ಸುಖ್‌ ಮಾಂಡವೀಯ, ಭಾರತ ಒಲಿಂಪಿಕ್‌ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಪಿಸ್ತೂಲ್‌ ಬಗ್ಗೆ ಕುತೂಹಲ, ಹಾಕಿ ಸ್ಟಿಕ್‌ ಉಡುಗೊರೆ!

ಪ್ರಧಾನಿಯನ್ನು ಭೇಟಿಯಾದ ಹಾಕಿ ತಂಡದ ಆಟಗಾರರು, ತಮ್ಮ ಸಹಿ ಇರುವ ಹಾಕಿ ಸ್ಟಿಕ್‌ಅನ್ನು ಮೋದಿ ಅವರಿಗೆ ಉಡಗೊರೆಯಾಗಿ ನೀಡಿದರು. ಅಲ್ಲದೆ, 2 ಪದಕ ವಿಜೇತ ಶೂಟರ್‌ ಮನು ಭಾಕರ್‌ ಅವರ ಬಳಿ, ಪಿಸ್ತೂಲ್‌ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಕುಸ್ತಿಪಟು ಅಮನ್‌, ತಮ್ಮ ಜೆರ್ಸಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.

Share this article