ಕ್ರೀಡಾಪಟುಗಳಿಗೆ ಉಜ್ವಲ ಉದ್ಯೋಗಾವಕಾಶ :ಕ್ರೀಡೆಯಿಂದ ಓದಿಗೆ ಯಾವುದೇ ತೊಂದರೆಯಾಗುವುದಿಲ್ಲ: ಒಲಿಂಪಿಯನ್‌ ಎಂ.ಆರ್. ಪೂವಮ್ಮ

KannadaprabhaNewsNetwork |  
Published : Aug 25, 2024, 02:07 AM ISTUpdated : Aug 25, 2024, 04:08 AM IST
ಎಂ.ಆರ್‌. ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕ್ರೀಡೆಯಿಂದ ಓದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ನನ್ನ ಸ್ವಂತ ಅನುಭವ ಎಂದರು. ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸಂವಾದ, ಕ್ರೀಡಾಸಕ್ತ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಲು ಸಲಹೆ.

 ಮಂಗಳೂರು : ಉದಯೋನ್ಮುಖ ಕ್ರೀಡಾಪಟುಗಳಿಗೆ ದೇಶದಲ್ಲಿ ಉತ್ತಮ ಭವಿಷ್ಯವಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರುವ ಕ್ರೀಡಾಪಟುಗಳಿಗೆ ಕ್ರೀಡಾ ಕೋಟಾದಡಿ ಉದ್ಯೋಗಾವಕಾಶ ಇರುವ ಕಾರಣ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕೆಂದು ಒಲಿಂಪಿಕ್ಸ್‌ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತೆ ಎಂ.ಆರ್. ಪೂವಮ್ಮ ಹೇಳಿದ್ದಾರೆ.ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಮಂಗಳೂರು ಪ್ರೆಸ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಶಾಲಾ ದಿನಗಳಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಾ ಬಂದಿದ್ದರೂ ಪದವಿ ಪೂರೈಸಿದ್ದೇನೆ. ಕ್ರೀಡೆಯಿಂದ ಓದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ನನ್ನ ಸ್ವಂತ ಅನುಭವ ಎಂದರು.ಕ್ರೀಡಾಪಟುಗಳಿಗೆ ಹಿಂದೆ ಸೀಮಿತ ಸೌಲಭ್ಯವಿತ್ತು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿದೆ. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳನ್ನು ಕೂಡಾ ಗುರುತಿಸಿ ಸ್ಪೋಟ್ಸ್ ಹಾಸ್ಟೆಲ್ ಮೂಲಕ ತರಬೇತಿ ನೀಡುವ ಸೌಲಭ್ಯ ಇದೆ. 

ಖೇಲೋ ಇಂಡಿಯಾ ಸಹಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಹಲವು ಸರ್ಕಾರಿ ಯೋಜನೆಗಳಿವೆ. ಸಾಧನೆಯ ಹಾದಿಯಲ್ಲಿ ಸವಾಲುಗಳು ಎದುರಾಗುವುದು ಸಹಜ. ಅದನ್ನು ಮೀರಿ ನಿಲ್ಲಲು ಪ್ರಯತ್ನಿಸಬೇಕು ಎಂದು ಪೂವಮ್ಮ ಹೇಳಿದರು.ಪ್ರಾಥಮಿಕ ಶಾಲೆಯಲ್ಲಿ ಕಬಡ್ಡಿ, ಪುಟ್‌ಬಾಲ್ ಆಡುತ್ತಿದ್ದ ನಾನು ಬಳಿಕ ಅಥ್ಲೆಟಿಕ್ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ನನ್ನ ತಂದೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿ ದೊಡ್ಡ ಮೈದಾನದ ಇಲ್ಲದ ಕಾರಣ ಮಂಗಳೂರಿಗೆ ಬಂದು ನೆಲೆಸಿದರು. ಮಂಗಳಾ ಕ್ರೀಡಾಂಗಣದಲ್ಲಿ ಆಗ ಸಿಂಥೆಟಿಕ್ ಟ್ರ್ಯಾಕ್ ಕೂಡ ಇರಲಿಲ್ಲ. ನಾನು ಇಂದು ಕ್ರೀಡಾ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದ್ದರೂ ಅದರಲ್ಲಿ ನನ್ನ ಹೆತ್ತವರ ಶ್ರಮ ಅಧಿಕವಾದದ್ದು. ನನ್ನ 24 ವರ್ಷಗಳ ಕ್ರೀಡಾ ಸಾಧನೆಗೆ ಪೋಷಕರು ಹಾಗೂ ಪತಿಯ ಬೆಂಬಲವೇ ಪ್ರಮುಖ ಕಾರಣ. 

ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಇದೇ ರೀತಿ ಎಲ್ಲ ಪೋಷಕರು ಪ್ರೋತ್ಸಾಹ ನೀಡುವಂತಾಗಬೇಕೆಂದು ಎಂದು ಅವರು ಹೇಳಿದರು.ನನಗೀಗ 34 ವರ್ಷ ವಯಸ್ಸು. ಹಾಗೆಂದು ಕ್ರೀಡೆಯನ್ನು ಈಗಲೇ ಬಿಡಲು ಮನಸ್ಸಿಲ್ಲ. ನನ್ನ ಪತಿಯೂ ಕ್ರೀಡಾಪಟು. ಅವರಿಗೆ ಕ್ರೀಡೆಯ ಮಹತ್ವ ತಿಳಿದಿದೆ. ಅವರ ಪ್ರೋತ್ಸಾಹದಿಂದ ನಾನು 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಂತಾಯಿತು. ವಯಸ್ಸು ಸಾಧನೆಗೆ ಅಡ್ಡಿಯಾಗಬಾರದು. ಮುಂದಿನ ಪೀಳಿಗೆಯ ಮಕ್ಕಳಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಇನ್ನೂ ಮುಂದುವರಿಯಲು ಬಯಸಿದ್ದೇನೆ ಎಂದು ಪೂವಮ್ಮ ಹೇಳಿದರು.

ಸುಯೆಝ್ ಪ್ರಾಜೆಕ್ಟ್ಸ್ ಕಂಪೆನಿಯ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಮ್ಯಾನೇಜರ್ ಡಾ. ರೇಶ್ಮಾ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪೂವಮ್ಮ ಅವರ ಪತಿ ಜಿತಿನ್ ಪೌಲ್, ತಾಯಿ ಜಾಜಿ ರಾಜು, ಖೇಲೋ ಇಂಡಿಯಾದ ದ.ಕ. ಕೋಚ್ ಭಕ್ಷಿತ್ ಸಾಲ್ಯಾನ್ ಇದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ. ಭಟ್ ನಿರೂಪಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!