ಎಲ್ಲಾ ಮಾದರಿ ಕ್ರಿಕೆಟ್‌ಗೆ ಶಿಖರ್‌ ಧವನ್‌ ಗುಡ್‌ಬೈ : 2 ದಶಕದ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ತೆರೆ

KannadaprabhaNewsNetwork | Updated : Aug 25 2024, 04:09 AM IST

ಸಾರಾಂಶ

ಭಾರತ ಪರ 269 ಪಂದ್ಯವಾಡಿರುವ ತಾರಾ ಬ್ಯಾಟರ್‌. 2022ರಲ್ಲಿ ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ 2 ವರ್ಷಗಳಲ್ಲಿ ಅವರಿಗೆ ಯಾವುದೇ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.

ನವದೆಹಲಿ: ಭಾರತೀಯ ಕ್ರಿಕೆಟ್‌ನ ಯಶಸ್ವಿ ಆರಂಭಿಕ ಆಟಗಾರರಲ್ಲಿ ಓರ್ವರಾಗಿದ್ದ ಶಿಖರ್‌ ಧವನ್‌ ಶನಿವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ‘ಬದುಕಿನ ಮತ್ತೊಂದು ಪುಟ ತಿರುಗಿಸಬೇಕಾದ ಅಗತ್ಯವಿದೆ.

 ಹೀಗಾಗಿ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ದೀರ್ಘ ಕಾಲ ಆಡಿದ ನಾನು ಈಗ ನೆಮ್ಮದಿಯಲ್ಲಿದ್ದೇನೆ’ ಎಂದು 38 ವರ್ಷದ ಧವನ್‌ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.2010ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದ ಧವನ್‌, 2022ರಲ್ಲಿ ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ 2 ವರ್ಷಗಳಲ್ಲಿ ಅವರಿಗೆ ಯಾವುದೇ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.

 ಭಾರತದ ಪರ ಅವರು 34 ಟೆಸ್ಟ್‌, 167 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನಲ್ಲಿ 17 ಶತಕ ಸಸಹಿತ 6793 ರನ್‌, ಟೆಸ್ಟ್‌ನಲ್ಲಿ 7 ಶತಕಗಳನ್ನೊಳಗೊಂಡ 2315 ರನ್‌ ಕಲೆಹಾಕಿದ್ದಾರೆ. 2013ರಲ್ಲಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗ ಧವನ್‌ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಐಪಿಎಲ್‌ನಲ್ಲಿ ಅವರು 222 ಪಂದ್ಯಗಳನ್ನಾಡಿದ್ದು. 6769 ರನ್‌ ಸಿಡಿಸಿದ್ದಾರೆ. ಈ ವರ್ಷ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಅವರು ಫಿಟ್ನೆಸ್‌ ಸಮಸ್ಯೆಯಿಂದಾಗಿ ಕೇವಲ 5 ಪಂದ್ಯಗಳನ್ನಾಡಿದ್ದರು.

ಧವನ್‌ ನಿವೃತ್ತಿ: ಫ್ಯಾನ್ಸ್‌, ದಿಗ್ಗಜರ ಶುಭ ಹಾರೈಕೆ

ಧವನ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಅವರ ಮುಂದಿನ ಜೀವನಕ್ಕೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌, ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್‌, ಮಾಜಿ ಕೋಚ್‌ ಹಾಗೂ ದಿಗ್ಗಜ ಸ್ಪಿನ್ನರ್‌ ಅನಿಲ್‌ ಕುಂಬ್ಳೆ, ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌, ಮಾಜಿ ಬ್ಯಾಟರ್‌ ವಾಸೀಂ ಜಾಫರ್‌, ಪಾಕಿಸ್ತಾನದ ಮಾಜಿ ಆಟಗಾರ ಸಯೀದ್‌ ಅನ್ವರ್‌ ಸೇರಿ ಪ್ರಮುಖರು ಧವನ್‌ಗೆ ಶುಭ ಹಾರೈಸಿದ್ದಾರೆ.

Share this article