ಡೈಮಂಡ್‌ ಲೀಗ್‌ : 89.49 ಮೀ. ದೂರ ಜಾವೆಲಿನ್‌ ಎಸೆದ ನೀರಜ್‌ ಚೋಪ್ರಾಗೆ 2ನೇ ಸ್ಥಾನ

KannadaprabhaNewsNetwork | Updated : Aug 24 2024, 04:56 AM IST

ಸಾರಾಂಶ

ಫಿಟ್ನೆಸ್‌ ಸಮಸ್ಯೆ ನಡುವೆಯೂ ಆಡಿದ 26 ವರ್ಷದ ನೀರಜ್‌. ಕೊನೆ ಪ್ರಯತ್ನದಲ್ಲಿ 89.49 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರ-2ರಲ್ಲಿ ಸ್ಥಾನ. 90 ಮೀ. ದೂರ ದಾಟುವ ಗುರಿ ಸ್ವಲ್ಪದರಲ್ಲೇ ಮಿಸ್‌

ಲುಸಾನ್‌(ಸ್ವಿಜರ್‌ಲೆಂಡ್‌): ಡೈಮಂಡ್‌ ಲೀಗ್‌ನ ಲುಸಾನ್‌ ಚರಣದಲ್ಲಿ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಫಿಟ್ನೆಸ್‌ ಸಮಸ್ಯೆ ನಡುವೆಯೂ ಆಡಿದ 26 ವರ್ಷದ ನೀರಜ್‌ ತಮ್ಮ ಕೊನೆ ಪ್ರಯತ್ನದಲ್ಲಿ 89.49 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

 ಆದರೆ 90 ಮೀ. ದೂರ ದಾಟುವ ಗುರಿ ಸ್ವಲ್ಪದರಲ್ಲೇ ತಪ್ಪಿತು.ನೀರಜ್‌ ಆರಂಭಿಕ 4 ಪ್ರಯತ್ನಗಳ ಬಳಿಕ 4ನೇ ಸ್ಥಾನದಲ್ಲಿದ್ದರು. 2ನೇ ಪ್ರಯತ್ನದಲ್ಲಿ 83.21 ಮೀ. ದಾಖಲಿಸಿದ್ದು ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ 5ನೇ ಪ್ರಯತ್ನದಲ್ಲಿ 85.58 ಮೀ. ದೂರಕ್ಕೆ ಎಸೆದ ನೀರಜ್‌, ತಮ್ಮ ಕೊನೆ ಪ್ರಯತ್ನದಲ್ಲಿ 89.49 ಮೀ. ದೂರ ದಾಖಲಿಸಿದರು.

 ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ಪ್ರದರ್ಶನ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 89.45 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಗ್ರೆನಡಾದ ಆ್ಯಂಡರ್ಸ್‌ನ ಪೀಟರ್ಸ್‌(90.61 ಮೀ.) ಲೀಗ್‌ನ ಅಗ್ರಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್‌ ವೆಬೆರ್‌ 87.08 ಮೀಟರ್‌ನೊಂದಿಗೆ 3ನೇ ಸ್ಥಾನ ಗಿಟ್ಟಿಸಿಕೊಂಡರು.2ನೇ ಸ್ಥಾನ ಪಡೆಯುವುದರೊಂದಿಗೆ ನೀರಜ್‌ 7 ಅಂಕ ಗಳಿಸಿದ್ದು, ಒಟ್ಟಾರೆ 2024ರ ಡೈಮಂಡ್ ಲೀಗ್‌ನಲ್ಲಿ 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಮುಂದಿನ ಚರಣ ಸೆ.5ಕ್ಕೆ ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆಯಲಿದೆ.

ಏನಿದು ಡೈಮಂಡ್‌ ಲೀಗ್‌?

ಡೈಮಂಡ್‌ ಲೀಗ್‌ ಒಟ್ಟು 15 ಚರಣಗಳ ವಾರ್ಷಿಕ ಕ್ರೀಡಾಕೂಟ. ಚರಣಗಳಲ್ಲಿ ಗೆದ್ದವರಿಗೆ ಪದಕ ನೀಡಲಾಗುವುದಿಲ್ಲ. ಬದಲಾಗಿ ಅವರು ಪಡೆದ ಸ್ಥಾನಕ್ಕೆ ಅನುಗುಣವಾಗಿ ಅಂಕ ನೀಡಲಾಗುತ್ತದೆ. ಒಟ್ಟಾರೆ 14 ಚರಣಗಳ ಅಂಕ ಪಟ್ಟಿಯಲ್ಲಿ ಅಗ್ರ-6 ಸ್ಥಾನ ಪಡೆದವರು ಫೈನಲ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಈ ಬಾರಿ ಡೈಮಂಡ್‌ ಲೀಗ್‌ ಫೈನಲ್ಸ್‌ ಸೆ.14ಕ್ಕೆ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿದೆ.

Share this article