ಐಸಿಸಿ ಅಂಡರ್‌-19 ವಿಶ್ವಕಪ್‌: ಸೆಮೀಸ್‌ನಲ್ಲಿ ಆಫ್ಘನ್‌ ನೀಡಿದ್ದ 311 ರನ್‌ ಗುರಿಯನ್ನು 41.1 ಓವರ್‌ನಲ್ಲೇ ಬೆನ್ನತ್ತಿ ಗೆದ್ದ ಭಾರತ ತಂಡಕಿರಿಯರ ವಿಶ್ವಕಪ್‌ ಇತಿಹಾಸದಲ್ಲೇ ಗರಿಷ್ಠ । ಆಫ್ಘನ್‌ ಪರ ಇಬ್ಬರ ಶತಕ । ಭಾರತದ ಪರ ಆ್ಯರೊನ್ 115, ವೈಭವ್‌ 68, ಆಯುಶ್‌ 62

ಹರಾರೆ: ಐಸಿಸಿ ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ಅಫ್ಘಾನಿಸ್ತಾನ ವಿರುದ್ಧ ಸೆಮಿಫೈನಲ್‌ನಲ್ಲಿ ಬರೋಬ್ಬರಿ 311 ರನ್‌ ಯಶಸ್ವಿಯಾಗಿ ಚೇಸ್‌ ಮಾಡಿ ಗೆದ್ದ ತಂಡ, ಕಿರಿಯರ ವಿಶ್ವಕಪ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಬೆನ್ನತ್ತಿ ಗೆದ್ದ ದಾಖಲೆ ಬರೆಯಿತು. ಇದರೊಂದಿಗೆ 6ನೇ ಟ್ರೋಫಿ ಗೆಲುವಿನ ಹಾದಿಯಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಮೊದಲ ಬಾರಿ ಫೈನಲ್‌ಗೇರುವ ಕನಸಿನೊಂದಿಗೆ ಸೆಮೀಸ್‌ನಲ್ಲಿ ಕಣಕ್ಕಿಳಿದ ಆಫ್ಘನ್‌, ಮೊದಲು ಬ್ಯಾಟ್‌ ಮಾಡಿ 4 ವಿಕೆಟ್‌ಗೆ 310 ರನ್‌ ಕಲೆಹಾಕಿತು. ಆರಂಭಿಕ ನಾಲ್ವರು ಬ್ಯಾಟರ್‌ಗಳೂ ಭಾರತೀಯರ ಬೆವರಿಳಿಸಿದರು. ಉಸ್ಮಾನ್‌ ಸಾದಾತ್‌ 39, ಖಾಲಿದ್‌ ಅಹ್ಮದ್‌ಝಾಯ್‌ 31 ರನ್‌ಗೆ ಔಟಾದರು. 3ನೇ ವಿಕೆಟ್‌ಗೆ ಉಜೈರುಲ್ಲಾ ನಿಯಾಝೈ ಹಾಗೂ ಫೈಸಲ್‌ ಶಿನೊಝಾದ 148 ರನ್‌ ಜೊತೆಯಾಟವಾಡಿದರು. ಇಬ್ಬರಿಬ್ಬರೂ ತಲಾ ಶತಕ ಸಿಡಿಸಿ ಆಫ್ಘನ್‌ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಫೈಸಲ್‌ 93 ಎಸೆತಗಳಲ್ಲಿ 110 ರನ್‌ ಸಿಡಿಸಿ ನಿರ್ಗಮಿಸಿದರೆ, ಉಜೈರುಲ್ಲಾ 86 ಎಸೆತಗಳಲ್ಲಿ 101 ರನ್ ಗಳಿಸಿದರು. ಭಾರತದ ಪರ ದೀಪೇಶ್‌ ಹಾಗೂ ಕನಿಶ್ಕ್‌ ಚೌಹಾಣ್‌ ತಲಾ 2 ವಿಕೆಟ್‌ ಕಿತ್ತರು.

ಗ್ರೇಟ್ ಚೇಸ್‌:

ಅಂಡರ್-19 ವಿಶ್ವಕಪ್‌ ನಾಕೌಟ್‌ನಲ್ಲಿ 250ಕ್ಕಿಂತ ಹೆಚ್ಚು ಮೊತ್ತ ಚೇಸ್‌ ಮಾಡಿ ಗೆದ್ದ ಉದಾಹರಣೆ ಇಲ್ಲ. ಹೀಗಾಗಿ ಭಾರತ ತಂಡ ಒತ್ತಡದಲ್ಲೇ ಗುರಿ ಬೆನ್ನತ್ತಲು ಇಳಿಯಿತು. ಆದರೆ ವೈಭವ್‌ ಸೂರ್ಯವಂಶಿ ಹಾಗೂ ಆ್ಯರೊನ್‌ ಜಾರ್ಜ್‌ ಆಟ ತಂಡದ ಚೇಸಿಂಗ್‌ ತೀರಾ ಸುಲಭವಾಗುವಂತೆ ಮಾಡಿತು. ವೈಭವ್‌ 33 ಎಸೆತಗಳಲ್ಲಿ 68 ರನ್‌ ಸಿಡಿಸಿದರೆ, ನಾಯಕ ಆಯುಶ್‌ ಮ್ಹಾಥ್ರೆ 59 ಎಸೆತಕ್ಕೆ 62 ರನ್‌ ಸಿಡಿಸಿ ಔಟಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿ ಶತಕ ಸಿಡಿಸಿದ ಜಾರ್ಜ್‌, 104 ಎಸೆತಗಳಲ್ಲಿ 115 ರನ್‌ ಸಿಡಿಸಿ ಗೆಲುವಿನ ಸನಿಹದಲ್ಲಿ ಔಟಾದರು. ವಿಹಾನ್‌ ಔಟಾಗದೆ 38 ರನ್‌ ಸಿಡಿಸಿ ತಂಡವನ್ನು 41.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಅಫ್ಘಾನಿಸ್ತಾನ 50 ಓವರಲ್ಲಿ 310/4 (ಫೈಸಲ್‌ 110, ಉಜೈರುಲ್ಲಾ 101*, ಕನಿಶ್ಕ್‌ 2-55, ದೀಪೇಶ್‌ 2-64), ಭಾರತ 41.1 ಓವರ್‌ನಲ್ಲಿ 311/3 (ಆ್ಯರೊನ್‌ 115, ವೈಭವ್‌ 68, ಆಯುಶ್‌ 62, ನೂರಿಸ್ತಾನಿ 2-64)

ಪಂದ್ಯಶ್ರೇಷ್ಠ: ಆ್ಯರೊನ್‌ ಜಾರ್ಜ್‌

311 ರನ್ ಚೇಸ್‌:

ವಿಶ್ವಕಪ್‌ ದಾಖಲೆ

ಭಾರತ 311 ರನ್‌ ಬೆನ್ನತ್ತಿ ಗೆದ್ದಿದ್ದು ಅಂಡರ್‌-19 ವಿಶ್ವಕಪ್‌ನಲ್ಲಿ ದಾಖಲೆ. 2006ರಲ್ಲಿ ಐರ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ 305 ರನ್‌ ಬೆನ್ನತ್ತಿ ಗೆದ್ದಿದ್ದು ಈವರೆಗೂ ದಾಖಲೆಯಾಗಿತ್ತು. ಇನ್ನು, ಟೂರ್ನಿಯ ನಾಕೌಟ್‌ ಪಂದ್ಯದಲ್ಲಿ ಇದೇ ಮೊದಲ ಬಾರಿ 250+ ರನ್‌ ಚೇಸ್‌ ಆಯಿತು. 2024ರ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ವಿರುದ್ಧ ಭಾರತ 245 ರನ್‌ ಬೆನ್ನತ್ತಿ ಗೆದ್ದಿತ್ತು.

16 ಆವೃತ್ತಿಗಳ ಪೈಕಿ 10

ಸಲ ಭಾರತ ಫೈನಲ್‌ಗೆ

ಈ ಬಾರಿಯದ್ದು 16ನೇ ಆವೃತ್ತಿಯ ಅಂಡರ್‌-19 ವಿಶ್ವಕಪ್‌. ಈ ಪೈಕಿ 10 ಬಾರಿ ಭಾರತ ಫೈನಲ್‌ಗೇರಿದೆ. 2000, 2008, 2012, 2018, 2022ರಲ್ಲಿ ಚಾಂಪಿಯನ್ ಆಗಿದ್ದರೆ, 2006, 2016, 2020, 2024ರಲ್ಲಿ ರನ್ನರ್‌-ಅಪ್‌ ಆಗಿದೆ.

ಭಾರತ vs ಇಂಗ್ಲೆಂಡ್‌

ಫೈನಲ್‌ ಫೈಟ್‌ ನಾಳೆ

ಟೂರ್ನಿಯ ಫೈನಲ್‌ ಪಂದ್ಯ ಶುಕ್ರವಾರ ನಡೆಯಲಿದ್ದು, ಭಾರತ ಹಾಗೂ ಇಂಗ್ಲೆಂಡ್‌ ಸೆಣಸಾಡಲಿವೆ. ಭಾರತ 6ನೇ, ಇಂಗ್ಲೆಂಡ್‌ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇಂಗ್ಲೆಂಡ್‌ 3ನೇ ಬಾರಿ ಫೈನಲ್‌ ಆಡುತ್ತಿದೆ. 2022ರಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ನಲ್ಲಿ ಭಾರತ ಗೆದ್ದಿತ್ತು.

06 ಫೈನಲ್‌

ಭಾರತ ತಂಡ ಸತತ 6 ಆವೃತ್ತಿಗಳಲ್ಲೂ ಫೈನಲ್‌ ತಲುಪಿದೆ. ಹಿಂದಿನ 5 ಆವೃತ್ತಿಗಳ ಪೈಕಿ 2ರಲ್ಲಿ ಗೆದ್ದಿದ್ದು, 3 ಬಾರಿ ಸೋತಿದೆ.

01ನೇ ಬಾರಿ

ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ತಂಡವೊಂದು 300+ ರನ್‌ ಗಳಿಸಿದ್ದು ಇದೇ ಮೊದಲು. 2014ರಲ್ಲಿ ವಿಂಡೀಸ್‌ 8 ವಿಕೆಟ್‌ಗೆ 294 ರನ್‌ ಗಳಿಸಿತ್ತು.