ಒಂದು ಟಿ20 ಪಂದ್ಯ, ಮೂರು ಸೂಪರ್‌ ಓವರ್‌: ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಹೊಸ ಇತಿಹಾಸ

KannadaprabhaNewsNetwork | Updated : Aug 24 2024, 04:59 AM IST

ಸಾರಾಂಶ

ಕ್ರಿಕೆಟ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 3 ಸೂಪರ್‌ ಓವರ್‌ ಇದೇ ಮೊದಲು. ಬೆಂಗಳೂರು vs ಹುಬ್ಬಳ್ಳಿ ನಡುವಿನ ಪಂದ್ಯ ಟೈ. ಬಳಿಕ 2 ಸೂಪರ್‌ ಓವರ್‌ ಕೂಡಾ ಟೈ. 3ನೇ ಸೂಪರ್‌ ಓವರ್‌ನಲ್ಲಿ ಹುಬ್ಬಳ್ಳಿಗೆ ಜಯ

  ಬೆಂಗಳೂರು  : ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಹೊಸ ಇತಿಹಾಸ ಸೃಷ್ಠಿಯಾಗಿದೆ. ಶುಕ್ರವಾರ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ ನಡುವಿನ ಪಂದ್ಯದಲ್ಲಿ 3 ಸೂಪರ್‌ ಓವರ್‌ಗಳು ನಡೆದವು. ಕ್ರಿಕೆಟ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 3 ಸೂಪರ್‌ ಓವರ್‌ ನಡೆದಿದ್ದು ಇದೇ ಮೊದಲು. 

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 20 ಓವರ್‌ಗಳಲ್ಲಿ 164 ರನ್‌ಗೆ ಆಲೌಟಾಯಿತು. ಮನೀಶ್‌ ಪಾಂಡೆ 33, ಅನೀಶ್ವರ್‌ ಗೌತಮ್‌ 30. ಮೊಹಮದ್‌ ತಾಹಾ 31 ರನ್‌ ಸಿಡಿಸಿದರು. ಲಾವಿಶ್‌ ಕೌಶಲ್‌ 4 ಓವರ್‌ಗಳಲ್ಲಿ 17 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಳೂರು ತಂಡ ಕೊನೆ ಓವರ್‌ನಲ್ಲಿ ಎಡವಿ, 20 ಓವರ್‌ಗಳಲ್ಲಿ 9 ವಿಕೆಟ್‌ಗೆ 164 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಮಯಾಂಕ್‌ ಅಗರ್‌ವಾಲ್‌ 54, ಸೂರಜ್‌ ಅಹುಜಾ 26, ನವೀನ್‌ 23 ರನ್‌ ಗಳಿಸಿದರು. ಕೊನೆ ಓವರ್‌ನಲ್ಲಿ 6 ರನ್‌ ಬೇಕಿದ್ದಾಗ ನವೀನ್‌ ಮೊದಲ ಎಸೆತವನ್ನು ಬೌಂಡರಿಗಟ್ಟಿದರು. ಬಳಿಕ 5 ಎಸೆತಗಳಲ್ಲಿ ಕೇವಲ 1 ರನ್‌ ನೀಡಿದ ಎಲ್‌.ಆರ್‌.ಕುಮಾರ್‌ ಪಂದ್ಯವನ್ನು ಟೈ ಮಾಡಿದರು.

ಹೇಗಿತ್ತು ಸೂಪರ್‌ ಓವರ್‌ ಫೈಟ್‌?

1ನೇ ಸೂಪರ್‌ ಓವರ್‌: ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 10 ರನ್ ಗಳಿಸಿತು. ಮೊದಲ ಎಸೆತದಲ್ಲೇ ಮಯಾಂಕ್‌ ಔಟಾದರೂ, ಅನಿರುದ್ಧ ಜೋಶಿ ಕೊನೆ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ್ದು ನೆರವಾಯಿತು. 11 ರನ್‌ ಗುರಿ ಪಡೆದ ಹುಬ್ಬಳ್ಳಿ 10 ರನ್‌ ಗಳಿಸಿತು. 4ನೇ ಎಸೆತದಲ್ಲಿ ಮನೀಶ್‌ ಪಾಂಡೆ ಸಿಕ್ಸರ್‌ ಹೊರತಾಗಿಯೂ ತಂಡಕ್ಕೆ ಗೆಲ್ಲಲಾಗಲಿಲ್ಲ. ಹೀಗಾಗಿ ಮೊದಲ ಸೂಪರ್‌ ಓವರ್‌ ಟೈ.

2ನೇ ಸೂಪರ್‌ ಓವರ್‌: ಹುಬ್ಬಳ್ಳಿ ಮೊದಲು ಬ್ಯಾಟ್‌ ಮಾಡಿತು. ಮನೀಶ್‌-ಮನ್ವಂತ್‌ ಜೋಡಿ ಕೇವಲ 8 ರನ್‌ ಗಳಿಸಿತು. ಸುಲಭ ಗುರಿ ಪಡೆದ ಬೆಂಗಳೂರಿಗೆ ಎಲ್‌.ಆರ್‌. ಚೇತನ್‌ರ ಮೊದಲ ಎಸೆತದ ಬೌಂಡರಿ ನೆರವಾಯಿತು. ಆದರೆ ತಂಡ ಬಳಿಕ 5 ಎಸೆತಗಳಲ್ಲಿ ಗಳಿಸಿದ್ದು ಕೇವಲ 4 ರನ್‌. ಮತ್ತೆ ಪಂದ್ಯ ಸಮಬಲ. ಹೀಗಾಗಿ ಪಂದ್ಯ 3ನೇ ಸೂಪರ್‌ ಓವರ್‌ಗೆ ಹೋಯಿತು.

3ನೇ ಸೂಪರ್ ಓವರ್‌: ಬೆಂಗಳೂರು ಮೊದಲು ಬ್ಯಾಟ್ ಮಾಡಿ 1 ವಿಕೆಟ್‌ಗೆ 12 ರನ್‌ ಗಳಿಸಿತು. 6ನೇ ಎಸೆತದಲ್ಲಿ ಶುಭಾಂಗ್‌ ಹೆಗ್ಡೆ ಬಾರಿಸಿದ ಸಿಕ್ಸರ್‌ ತಂಡದ ಗೆಲುವಿನ ಆಸೆ ಚಿಗುರಿಸಿತು. ಬಳಿಕ ಕ್ರಾಂತಿ ಕುಮಾರ್‌ ಚೆಂಡು ಕೈಗೆತ್ತಿಕೊಂಡು ದಾಳಿಗಿಳಿದರು. ಆದರೆ 2ನೇ ಹಾಗೂ 6ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮನ್ವಂತ್‌ ಕುಮಾರ್‌ ಹುಬ್ಬಳ್ಳಿಗೆ ಗೆಲುವು ತಂದುಕೊಟ್ಟರು.

3 ಸೂಪರ್‌ ಓವರ್‌ನಲ್ಲೂ ಆಡಿದ ಮನೀಶ್‌ ಪಾಂಡೆ; ಮಯಾಂಕ್‌ಗಿಲ್ಲ ಅದೃಷ್ಟ

ಹುಬ್ಬಳ್ಳಿಯ ಮನೀಶ್‌ ಹಾಗೂ ಮನ್ವಂತ್‌ 3 ಸೂಪರ್‌ ಓವರ್‌ನಲ್ಲೂ ಆಡಿದರು. ಆದರೆ ಬೆಂಗಳೂರಿನ ಮಯಾಂಕ್‌ ಕೇವಲ 3 ಸೂಪರ್‌ ಓವರ್‌ಗಳಲ್ಲಿ ಕೇವಲ 1 ಎಸೆತ ಮಾತ್ರ ಎದುರಿಸಿದರು. ನಿಯಮಗಳ ಪ್ರಕಾರ ಸೂಪರ್‌ ಓವರ್‌ನಲ್ಲಿ ಒಮ್ಮೆ ಔಟಾದ ಬ್ಯಾಟರ್‌ ಮತ್ತೆ ಎಷ್ಟೇ ಸೂಪರ್‌ ಓವರ್‌ ಆದರೂ ಕ್ರೀಸ್‌ಗಿಳಿಯುವಂತಿಲ್ಲ. ಮಯಾಂಕ್‌ ಮೊದಲ ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ಔಟಾದರು. ಒಮ್ಮೆಯೂ ಔಟಾಗಾದ ಕಾರಣ ಮನೀಶ್‌-ಮನ್ವಂತ್‌ 3 ಸೂಪರ್‌ ಓವರ್‌ನಲ್ಲೂ ಆಡಿದರು.

3ನೇ ಬಾರಿ: ಕ್ರಿಕೆಟ್‌ನಲ್ಲಿ ಈ ವರೆಗೂ 2 ಸೂಪರ್‌ ಓವರ್‌ ಪಂದ್ಯಗಳು 2 ಬಾರಿ ನಡೆದಿತ್ತು. ಜನವರಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಬೆಂಗಳೂರಿನ ಟಿ20 ಪಂದ್ಯದಲ್ಲಿ 2 ಸೂಪರ್‌ ಓವರ್‌ ಆಡಿಸಲಾಗಿತ್ತು. ಅದಕ್ಕೂ ಮೊದಲು 2020ರಲ್ಲಿ ಮುಂಬೈ ಹಾಗೂ ಪಂಜಾಬ್ ನಡುವಿನ ಪಂದ್ಯ ಡಬಲ್ ಸೂಪರ್‌ ಓವರ್‌ಗೆ ಸಾಕ್ಷಿಯಾಗಿತ್ತು.

ಚಿನ್ನಸ್ವಾಮಿಯಲ್ಲೇ 2 ಬಾರಿ 2+ ಸೂಪರ್‌ ಓವರ್‌ ಪಂದ್ಯ

ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೊಮ್ಮೆ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಈ ಕ್ರೀಡಾಂಗಣದಲ್ಲಿ 2ನೇ ಬಾರಿ 2+ ಸೂಪರ್‌ ಓವರ್‌ ಪಂದ್ಯ ನಡೆದಿದೆ. ಜನವರಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ 2 ಸೂಪರ್‌ ಓವರ್‌ ಆಡಿಸಲಾಗಿತ್ತು. ಭಾರತ ಗೆದ್ದಿತ್ತು.

Share this article