ಪ್ಯಾರಾಲಿಂಪಿಕ್ಸ್‌ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಸಾರ್ವಕಾಲಿಕ ಗರಿಷ್ಠ 84 ಮಂದಿ ಕಣಕ್ಕೆ

KannadaprabhaNewsNetwork |  
Published : Aug 25, 2024, 01:50 AM ISTUpdated : Aug 25, 2024, 04:12 AM IST
ಪ್ಯಾರಾಲಿಂಪಿಕ್ಸ್‌ ತಂಡ | Kannada Prabha

ಸಾರಾಂಶ

ಈ ಸಲ ಪ್ಯಾರಿಸ್‌ ಗೇಮ್ಸ್‌ನಲ್ಲಿ ಭಾರತದ 84 ಮಂದಿ ಸ್ಪರ್ಧೆ. ಕರ್ನಾಟಕದಿಂದಲೂ ಮೂವರು ಅಥ್ಲೀಟ್‌ಗಳು. ಕಳೆದ ಬಾರಿ 19 ಪದಕ ಗೆದ್ದಿದ್ದ ಭಾರತಕ್ಕೆ ಈ ಸಲ ಟಾರ್ಗೆಟ್‌ 25 . ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿರುವ ಭಾರತೀಯ ಅಥ್ಲೀಟ್ಸ್‌

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಇನ್ನು ಕೇವಲ 3 ದಿನ ಬಾಕಿದೆ. ಆ.28ರಿಂದ ಫ್ರಾನ್ಸ್‌ನ ರಾಜಧಾನಿಯಲ್ಲಿ ಪ್ಯಾರಾ ಅಥ್ಲೀಟ್‌ಗಳ ಜಾಗತಿಕ ಕ್ರೀಡಾಕೂಟ ನಡೆಯಲಿದೆ. ಭಾರತದ ಅಥ್ಲೀಟ್‌ಗಳು ಕೂಡಾ ಕ್ರೀಡಾಕೂಟಕ್ಕೆ ಸಜ್ಜಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್‌ ವಿಮಾನವೇರಿದ್ದಾರೆ. ಈ ಬಾರಿ ಭಾರತದ ಎಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ, ಯಾವೆಲ್ಲಾ ಕ್ರೀಡೆಗಳಲ್ಲಿ ಆಡಲಿದ್ದಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿವೆ.

ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದು ಭಾರತದ ಮಟ್ಟಿಗೆ ದಾಖಲೆ ಎನಿಸಿದೆ. 2020ರ ಟೋಕಿಯೋ ಪ್ಯಾರಾ ಗೇಮ್ಸ್‌ಗೆ 54 ಅಥ್ಲೀಟ್‌ಗಳು ತೆರಳಿ, 19 ಪದಕಗಳನ್ನು ಜಯಿಸಿದ್ದರು. 1968ರಲ್ಲೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ, 1984ರಿಂದ ನಡೆದ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.

ಅಥ್ಲೆಟಿಕ್ಸ್‌ನಲ್ಲೇ ಭಾರತದ ಅತಿಹೆಚ್ಚು ಸ್ಪರ್ಧಿಗಳು ಕಣಕ್ಕೆ

ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲೇ ಭಾರತದ 38 ಸ್ಪರ್ಧಿಗಳು ಇರಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಜುಡೋ, ಪ್ಯಾರಾಕೆನೋಯಿಂಗ್‌, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಭಾರತಕ್ಕೆ 25 ಪದಕ ಗುರಿ!

ಕಳೆದ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸುಮಿತ್‌ ಅಂತಿಲ್‌, ಮರಿಯಪ್ಪನ್‌ ತಂಗವೇಲು, ಸುಹಾನ್‌ ಎಲ್‌.ವೈ, ಕೃಷ್ಣ ನಾಗರ್‌, ಅವನಿ ಲೇಖರ, ಮನೀಶ್‌ ನರ್ವಾಲ್‌, ಭವಿನಾ ಪಟೇಲ್‌, ನಿಶಾದ್‌ ಕುಮಾರ್‌ ಸೇರಿ ಇನ್ನೂ ಕೆಲವರು ಈ ಆವೃತ್ತಿಗೂ ಅರ್ಹತೆ ಪಡೆದಿದ್ದು, ಮತ್ತೊಮ್ಮೆ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಯುವ ಪ್ಯಾರಾ ಆರ್ಚರಿ ಪಟು, ಎರಡೂ ಕೈಗಳಿಲ್ಲದಿದ್ದರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಶೀತಲ್‌ ದೇವಿ ಭಾರತದ ಅತಿದೊಡ್ಡ ಪದಕ ಭರವಸೆ ಎನಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಈ ವರೆಗೂ ಭಾರತ ಒಟ್ಟು 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ ಒಟ್ಟು 31 ಪದಕಗಳನ್ನು ಗೆದ್ದಿದ್ದು, ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಮೂಲಕ, ಅರ್ಧಶತಕದ ಗಡಿ ದಾಟುವ ಉತ್ಸಾಹದಲ್ಲಿದೆ.

ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯಿಂದ ಪ್ರೋತ್ಸಾಹ

ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ(ಪಿಸಿಐ) ಕಳೆದ 3-4 ವರ್ಷದಲ್ಲಿ ಭಾರತೀಯ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅಗತ್ಯ ನೆರವು ಒದಗಿಸಿದ್ದು, ಪದಕ ಗೆಲ್ಲಲು ಬೇಕಿರುವ ಸಿದ್ಧತೆ ಮಾಡಿಕೊಳ್ಳಲು ಎಲ್ಲಾ ವ್ಯವಸ್ಥೆ ಕಲ್ಪಿಸಿದೆ. ಪಿಸಿಐನ ಪ್ರಧಾನ ಕೋಚ್‌ ಆಗಿರುವ ಕರ್ನಾಟಕದ ಸತ್ಯನಾರಾಯಣ, ಈ ಬಾರಿ ಭಾರತ ಕನಿಷ್ಠ 25-30 ಪದಕಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಇದೇ ಮೊದಲ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಕ್ರೀಡಾಪಟುಗಳನ್ನು 12 ಕ್ರೀಡೆಗಳಲ್ಲಿ ಕಣಕ್ಕಿಳಿಸುತ್ತಿದೆ. ಈ ಬಾರಿ ಕನಿಷ್ಠ 25ರಿಂದ 30 ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸುತ್ತಿದೆ. ಒಲಿಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌ ಅಥ್ಲೀಟ್‌ಗಳಿಗೆ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಈ ಬಾರಿ ನಮ್ಮಿಂದ ಹಲವು ದಾಖಲೆಗಳು ನಿರ್ಮಾಣಗೊಳ್ಳಲಿದೆ ಎನ್ನುವ ನಂಬಿಕೆ ಇದೆ’.

- ಸತ್ಯನಾರಾಯಣ, ಪ್ರಧಾನ ಕೋಚ್‌, ಪಿಸಿಐ

84 ಅಥ್ಲೀಟ್ಸ್‌: ಭಾರತದಿಂದ ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಕ್ರೀಡಾಪಟುಗಳ ಸಂಖ್ಯೆ.

12 ಕ್ರೀಡೆ: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.

38 ಮಂದಿ: ಗೇಮ್ಸ್‌ನಲ್ಲಿ ಭಾರತದ 38 ಮಂದಿ ಅಥ್ಲೆಟಿಕ್ಸ್‌ನ ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಟೋಕಿಯೋ ದಾಖಲೆ ಮುರಿಯುತ್ತಾ ಭಾರತ?

3 ವರ್ಷಗಳ ಹಿಂದೆ ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಪ್ಯಾರಿಸ್‌ ತಲುಪಿದೆ.

ಕರ್ನಾಟಕದ ಮೂವರು

ಪ್ಯಾರಾಲಿಂಪಿಕ್ಸ್‌ನಲ್ಲಿ ಕರ್ನಾಟಕದ ಮೂವರು ಸ್ಪರ್ಧಿಸಲಿದ್ದಾರೆ. ಮಹಿಳೆಯರ 1500 ಮೀ. ಓಟ ಸ್ಪರ್ಧೆಯಲ್ಲಿ ರಕ್ಷಿತಾ ರಾಜು, ಶೂಟಿಂಗ್‌ನಲ್ಲಿ ಶ್ರೀಹರ್ಷ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ಸಕೀನಾ ಖಾತೂನ್‌ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ಮೂಲದ, ಸದ್ಯ ಉತ್ತರ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬ್ಯಾಡ್ಮಿಂಟನ್‌ ತಾರೆ ಸುಹಾಸ್‌ ಕೂಡಾ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!