ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ವಿಚಾರಣೆ ಆರಂಭಗೊಂಡಿದ್ದಕ್ಕೆ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಸಂತಸ ವ್ಯಕ್ತಪಡಿಸಿದ್ದು, ಇದು ನಮಗೆ ಸಿಕ್ಕ ಮೊದಲ ಜಯ ಎಂದಿದ್ದಾರೆ.
ಬ್ರಿಜ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಈಗ ನಾವು ಬ್ರಿಜ್‌ಭೂಷಣ್‌ರ ಎದುರು ನಿಂತು, ಅವರ ಕಣ್ಣಲ್ಲಿ ಕಣ್ಣಿಟ್ಟು ನಾವೆಲ್ಲೂ ಹೋಗುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
ನ್ಯಾಯ ಸಿಗುವವರೆಗೂ ನಾವು ವಿರಮಿಸಲ್ಲ’ ಎಂದಿದ್ದಾರೆ. ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಟ ಸುಲಭವಲ್ಲ. ಆದರೆ ಮಹಿಳೆಯರು ಭಯಪಡಬೇಕಿಲ್ಲ. ಪ್ರಭಾವಿ ವ್ಯಕ್ತಿಯ ವಿರುದ್ಧ ಮಹಿಳೆಯರು ಗೆಲ್ಲಬಹುದು ಎಂಬ ದೊಡ್ಡ ಸಂದೇಶವನ್ನು ನಾವು ರವಾನಿಸಿದ್ದೇವೆ’ ಎಂದು ಫೋಗಟ್ ಹೇಳಿದ್ದಾರೆ.