ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ಗೆ ಬೂಮ್ರಾ ಇಲ್ಲ?

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 11:40 AM IST
ಬೂಮ್ರಾ  | Kannada Prabha

ಸಾರಾಂಶ

ಇಂಗ್ಲೆಂಡ್‌ ಪ್ರವಾಸ ಆರಂಭಗೊಂಡು ಇನ್ನೂ ಒಂದೆರಡು ವಾರವೂ ಕಳೆದಿಲ್ಲ, ಆಗಲೇ ಭಾರತ ತಂಡಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಿದೆ.2ನೇ ಟೆಸ್ಟ್‌ನಲ್ಲಿ ತನ್ನ ಅತಿದೊಡ್ಡ ಅಸ್ತ್ರ ಜಸ್‌ಪ್ರೀತ್‌ ಬೂಮ್ರಾ ಅವರ ಸೇವೆ ಲಭ್ಯವಿರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ಪ್ರವಾಸ ಆರಂಭಗೊಂಡು ಇನ್ನೂ ಒಂದೆರಡು ವಾರವೂ ಕಳೆದಿಲ್ಲ, ಆಗಲೇ ಭಾರತ ತಂಡಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಿದೆ. ಲೀಡ್ಸ್‌ನಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದ ಟೀಂ ಇಂಡಿಯಾಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್‌ನಲ್ಲಿ ತನ್ನ ಅತಿದೊಡ್ಡ ಅಸ್ತ್ರ ಜಸ್‌ಪ್ರೀತ್‌ ಬೂಮ್ರಾ ಅವರ ಸೇವೆ ಲಭ್ಯವಿರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ತಾರಾ ವೇಗಿಯ ಕೆಲಸದ ಒತ್ತಡವನ್ನು ನಿಭಾಯಿಸುವುದು ತಂಡದ ಕೋಚಿಂಗ್‌, ಸಹಾಯಕ ಸಿಬ್ಬಂದಿಯ ಹೊಣೆಯಾಗಿದ್ದು, ಜು.2ರಿಂದ ಆರಂಭಗೊಳ್ಳಲಿರುವ ಪಂದ್ಯಕ್ಕೆ ಬೂಮ್ರಾಗೆ ವಿಶ್ರಾಂತಿ ನೀಡುವುದು ಸೂಕ್ತ ಎನ್ನುವ ನಿರ್ಧಾರ ಕೈಗೊಳ್ಳಲಾಗಿದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೊದಲ ಟೆಸ್ಟ್‌ ಸೋಲಿನ ಬಳಿಕ ತಂಡದ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌, ಪರಿಸ್ಥಿತಿ ಏನೇ ಇದ್ದರೂ ಸರಣಿಯಲ್ಲಿ ಬೂಮ್ರಾ ಆಡುವುದು ಮೂರೇ ಟೆಸ್ಟ್‌ ಎಂದಿದ್ದರು. ಮೊದಲ ಟೆಸ್ಟ್‌ನಲ್ಲಿ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಬೌಲಿಂಗ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ ಬೂಮ್ರಾ, ಎರಡೂ ಇನ್ನಿಂಗ್ಸ್‌ ಸೇರಿ ಒಟ್ಟು 44 ಓವರ್‌ಗಳನ್ನು ಎಸೆದರು. ಇದರಿಂದಾಗಿ ಅವರು ದಣಿದಿದ್ದಾರೆ ಎನ್ನಲಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿರುವುದಾಗಿ ತಂಡದ ಫಿಸಿಯೋ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.

ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲಿಂಗ್‌ ಪಡೆಯನ್ನು ಮುನ್ನಡೆಸುವ ಹೊಣೆ ಮೊಹಮದ್‌ ಸಿರಾಜ್‌ ಹೆಗಲಿಗೆ ಬೀಳಲಿದೆ. ಸಿರಾಜ್‌ ಇತರ ಬೌಲರ್‌ಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸ್ವತಃ ತಾವೂ ಸ್ಫೂರ್ತಿ ಪಡೆಯಬೇಕಿದೆ. ಬಹುಶಃ ಸಿರಾಜ್‌ರ ವೃತ್ತಿಬದುಕಿನಲ್ಲಿ ಇದು ಅತ್ಯಂತ ಮಹತ್ವದ ಪಂದ್ಯವೆನಿಸಲಿದೆ.

ಬೂಮ್ರಾ ಹೊರಗುಳಿದರೆ, ಅವರ ಜಾಗವನ್ನು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ತುಂಬುವ ಸಾಧ್ಯತೆ ಹೆಚ್ಚು. ಅರ್ಶ್‌ದೀಪ್‌ ಇತ್ತೀಚೆಗೆ ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಿ ಅನುಭವ ಗಳಿಸಿದ್ದರು. ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಈಗಾಗಲೇ ಯಶಸ್ವಿ ಬೌಲರ್‌ ಎನಿಸಿರುವ ಅರ್ಶ್‌ದೀಪ್‌, ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ಅಲ್ಲೂ ತಮ್ಮ ಛಾಪು ಮೂಡಿಸಲು ಉತ್ಸುಕಗೊಂಡಿದ್ದಾರೆ.

ಇನ್ನು, ಮೊದಲ ಟೆಸ್ಟ್‌ನಲ್ಲಿ ನಿರಾಸೆ ಮೂಡಿಸಿದ್ದ ಶಾರ್ದೂಲ್‌ ಠಾಕೂರ್‌ರನ್ನು ಹೊರಗಿಟ್ಟು, ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. 

ಇಂದಿನಿಂದ ಅಭ್ಯಾಸ

ಲೀಡ್ಸ್‌ನಲ್ಲಿ ಎದುರಾದ ಆಘಾತಕಾರಿ ಸೋಲಿನಿಂದ ನಿರಾಸೆಗೊಂಡಿರುವ ಭಾರತ ತಂಡ, ಗುರುವಾರ ಬರ್ಮಿಂಗ್‌ಹ್ಯಾಮ್‌ ತಲುಪಿತು. ತಂಡ ಶುಕ್ರವಾರದಿಂದ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದೆ.

PREV
Read more Articles on

Recommended Stories

ಲಕ್ಷ್ಯಗೆ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ
ದ.ಆಫ್ರಿಕಾ ವಿರುದ್ಧ ಏಕದಿನಸರಣಿಗೆ ಭಾರತ ತಂಡ ಪ್ರಕಟ