ಬೆಂಗಳೂರು: ಭಾರತದಲ್ಲಿ ಬಾಲಕಿಯರ ಫುಟ್ಬಾಲನಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದ್ದು, ಕ್ಯಾಪ್ರಿ ಸ್ಪೋರ್ಟ್ಸ್ ಸಂಸ್ಥೆಯು ‘ನೋವಾ ಸ್ಪೋರ್ಟ್ಸ್’ ಎಂಬ ಬಾಲಕಿಯರಿಗಾಗಿ ವಿಶೇಷವಾಗಿ ರೂಪಿಸಲಾದ ಫುಟ್ಬಾಲ್ ಅಭಿವೃದ್ಧಿ ಉಪಕ್ರಮವನ್ನು ಅಧಿಕೃತವಾಗಿ ಆರಂಭಿಸಿದೆ.ತಳಮಟ್ಟದ ಫುಟ್ಬಾಲ್‌ನಿಂದ ಉನ್ನತ ಮಟ್ಟದ ಆಟಗಾರರ ಅಭಿವೃದ್ಧಿವರೆಗೆ ವ್ಯವಸ್ಥಿತ ಮಾರ್ಗವನ್ನು ನಿರ್ಮಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. 8ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಗುಣಮಟ್ಟದ ತರಬೇತಿ, ಅರ್ಥಪೂರ್ಣ ಸ್ಪರ್ಧೆಗಳು ಹಾಗೂ ದೀರ್ಘಕಾಲೀನ ಆಟಗಾರರ ಅಭಿವೃದ್ಧಿಯನ್ನು ಒದಗಿಸುವ ಮೂಲಕ ಸಮಗ್ರ ಫುಟ್ಬಾಲ್ ಪರಿಸರವನ್ನು ನಿರ್ಮಿಸಲು ‘ನೋವಾ ಸ್ಪೋರ್ಟ್ಸ್’ ಮುಂದಾಗಿದೆ.ಈ ಉಪಕ್ರಮದ ಮೊದಲ ಹಂತವಾಗಿ ಬೆಂಗಳೂರಿನ ಡೆಪೋ18ನಲ್ಲಿ ಸೆಪ್ಟೆಂಬರ್ 5 ಮತ್ತು 6ರಂದು ‘ಸೂಪರ್ ನೋವಾ ಫುಟ್ಬಾಲ್ ಚಾಂಪಿಯನ್‌ಶಿಪ್’ ಆಯೋಜಿಸಲಾಗುತ್ತಿದೆ. ಅಂಡರ್-13, ಅಂಡರ್-15 ಹಾಗೂ ಅಂಡರ್-17 ವಿಭಾಗಗಳಲ್ಲಿ ನಡೆಯಲಿರುವ 7-ಎ-ಸೈಡ್ ಶಾಲಾ ಮಟ್ಟದ ಈ ಟೂರ್ನಿಯಲ್ಲಿ ನಗರದ ವಿವಿಧ ಭಾಗಗಳಿಂದ ಸುಮಾರು 50 ತಂಡಗಳು ಭಾಗವಹಿಸಲಿವೆ.ಸೂಪರ್ ನೋವಾ ಚಾಂಪಿಯನ್‌ಶಿಪ್ ಕೇವಲ ಫುಟ್ಬಾಲ್ ಪಂದ್ಯಾವಳಿಯಾಗಿರದೆ ಆಟಗಾರ್ತಿಯರು, ಶಾಲೆಗಳು, ಕುಟುಂಬಗಳು ಹಾಗೂ ಕೋಚ್‌ಗಳಿಗೆ ವೃತ್ತಿಪರ ಮಟ್ಟದ ಪಂದ್ಯಾವಳಿ ಅನುಭವ ನೀಡುವ ಕ್ರೀಡಾ ಉತ್ಸವವಾಗಿ ರೂಪಿಸಲಾಗಿದೆ. ಸ್ಪರ್ಧಾತ್ಮಕ ಫುಟ್ಬಾಲ್ ಪಂದ್ಯಗಳ ಜೊತೆಗೆ ಎಂಗೇಜ್ಮೆಂಟ್ ವಲಯಗಳು, ಪ್ರಶಸ್ತಿ ಹಾಗೂ ಗೌರವ ಕಾರ್ಯಕ್ರಮಗಳು, ಸಂವಾದಾತ್ಮಕ ಬ್ರ್ಯಾಂಡ್ ಅನುಭವಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಹುದಾದ ವಿವಿಧ ಚಟುವಟಿಕೆಗಳ ಮೂಲಕ ಬಾಲಕಿಯರ ಫುಟ್ಬಾಲ್‌ನಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಪ್ರೇರಣೆ ನೀಡುವ ಗುರಿಯನ್ನು ಹೊಂದಿದೆ.ವಿದ್ಯಾರ್ಥಿನಿಯರಿಗೆ ‘ನೋವಾ ಫುಟ್ಬಾಲ್ ಅಕಾಡೆಮಿ’ಗೆ ನೋಂದಾಯಿಸಿಕೊಳ್ಳುವ ಅವಕಾಶವೂ ದೊರೆಯಲಿದೆ. ಇದು ತಳಮಟ್ಟದ ಫುಟ್ಬಾಲ್ ಅಭಿವೃದ್ಧಿ ಕಾರ್ಯಕ್ರಮವಾಗಿದ್ದು, ನಿರಂತರ ತರಬೇತಿ ಮತ್ತು ಸ್ಪರ್ಧಾತ್ಮಕ ಅವಕಾಶಗಳ ಮೂಲಕ ಯುವ ಆಟಗಾರ್ತಿಯರನ್ನು ಗುರುತಿಸಿ, ಬೆಳೆಸಿ ಹಾಗೂ ಅಭಿವೃದ್ಧಿಪಡಿಸಲು ವ್ಯವಸ್ಥಿತ ವೇದಿಕೆಯನ್ನು ಒದಗಿಸಲಿದೆ.‘Girls First. Always.’ (ಯಾವಾಗಲೂ, ಬಾಲಕಿಯರೇ ಮೊದಲ ಆದ್ಯತೆ) ಎಂಬ ತತ್ವದ ಆಧಾರದ ಮೇಲೆ ನೋವಾ ಸ್ಪೋರ್ಟ್ಸ್ ಅನ್ನು ರೂಪಿಸಲಾಗಿದೆ. ಇದು ಈಗಾಗಲೇ ಇರುವ ಬಾಲಕರ ಕಾರ್ಯಕ್ರಮವನ್ನು ಆಧರಿಸಿ ರೂಪಿಸಿದ ಯೋಜನೆಯಲ್ಲ; ಬಾಲಕಿಯರ ಅಗತ್ಯಗಳು ಮತ್ತು ಆಶಯಗಳನ್ನು ಕೇಂದ್ರದಲ್ಲಿರಿಸಿಕೊಂಡು ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಕಾರ್ಯಕ್ರಮವಾಗಿದೆ.ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಅನುಗುಣವಾದ ಕೋಚಿಂಗ್ ವಿಧಾನಗಳು, ಬಾಲಕಿಯರನ್ನು ಕೇಂದ್ರವಾಗಿಟ್ಟುಕೊಂಡ ಪಠ್ಯಕ್ರಮ, ಸುರಕ್ಷತಾ ಮಾನದಂಡಗಳು, ತಂತ್ರಜ್ಞಾನ ವೇದಿಕೆ ಹಾಗೂ ಸ್ಪರ್ಧಾತ್ಮಕ ವ್ಯವಸ್ಥೆ ಸೇರಿದಂತೆ ಕಾರ್ಯಕ್ರಮದ ಪ್ರತಿಯೊಂದು ಅಂಶವನ್ನೂ ಭಾರತೀಯ ಬಾಲಕಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.ಶಾಲಾ ಫುಟ್ಬಾಲ್, ಅಕಾಡೆಮಿ ತರಬೇತಿ ಮತ್ತು ವ್ಯವಸ್ಥಿತ ಸ್ಪರ್ಧೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ತಳಮಟ್ಟದ ಭಾಗವಹಿಸುವಿಕೆ ಮತ್ತು ಉನ್ನತ ಮಟ್ಟದ ಆಟಗಾರರ ಅಭಿವೃದ್ಧಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ನೋವಾ ಸ್ಪೋರ್ಟ್ಸ್‌ನ ಉದ್ದೇಶವಾಗಿದೆ. ಕ್ರೀಡೆಯ ಮೊದಲ ಹೆಜ್ಜೆಯಿಂದ ಉನ್ನತ ಮಟ್ಟದ ಸ್ಪರ್ಧೆಯವರೆಗೆ ಪ್ರತಿಯೊಬ್ಬ ಬಾಲಕಿಗೂ ಸ್ಪಷ್ಟವಾದ ಪ್ರಗತಿಯ ಮಾರ್ಗ ಕಲ್ಪಿಸುವ ಗುರಿಯನ್ನು ಇದು ಹೊಂದಿದೆ.ಈ ಉಪಕ್ರಮವನ್ನು ಅನುಷ್ಠಾನಗೊಳಿಸಿ ವಿಸ್ತರಿಸಲು ಕ್ಯಾಪ್ರಿ ಸ್ಪೋರ್ಟ್ಸ್, ಭಾರತದ ಪ್ರಮುಖ ತಳಮಟ್ಟದ ಕ್ರೀಡಾ ಅಭಿವೃದ್ಧಿ ಸಂಸ್ಥೆಗಳಲ್ಲಿ ಒಂದಾದ ಇಂಡಿಯಾ ಆನ್ ಟ್ರ್ಯಾಕ್ (IOT) ಅನ್ನು ಕಾರ್ಯಗತಗೊಳಿಸುವ ಪಾಲುದಾರರನ್ನಾಗಿ ಮಾಡಿಕೊಂಡಿದೆ. IOT ಸಂಸ್ಥೆಯು NBA, Premier League, LaLiga, MLB, Gujarat Titans, Apollo Tyres, Coca-Cola ಮತ್ತು Heineken ಸೇರಿದಂತೆ ಹಲವು ಪ್ರಮುಖ ಜಾಗತಿಕ ಹಾಗೂ ಭಾರತೀಯ ಕ್ರೀಡಾ ಹಕ್ಕುದಾರರು ಮತ್ತು ಬ್ರ್ಯಾಂಡ್ಗಳೊಂದಿಗೆ ತಳಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಿದ ಅನುಭವ ಹೊಂದಿದೆ.ಮುಂದಿನ ಒಂದು ದಶಕದಲ್ಲಿ ಈ ಉಪಕ್ರಮವನ್ನು ಒಂದೇ ನಗರದಿಂದ ದೇಶವ್ಯಾಪಿ ಮಟ್ಟಕ್ಕೆ ವಿಸ್ತರಿಸುವ ಗುರಿಯನ್ನು ಕ್ಯಾಪ್ರಿ ಸ್ಪೋರ್ಟ್ಸ್ ಹೊಂದಿದೆ. ಈ ಮೂಲಕ 1.5 ಕೋಟಿಗೂ ಅಧಿಕ ಬಾಲಕಿಯರನ್ನು ತಲುಪುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಸ್ಥೆ ಹೊಂದಿದೆ.ಈ ದೃಷ್ಟಿಕೋನವನ್ನು ಎರಡು ಪರಸ್ಪರ ಸಂಪರ್ಕ ಹೊಂದಿರುವ ಮಾರ್ಗಗಳ ಮೂಲಕ ಸಾಕಾರಗೊಳಿಸಲಾಗುತ್ತದೆ. ಒಂದು ಸಂಪೂರ್ಣ ಅಭಿವೃದ್ಧಿ ಪೈಪ್ಲೈನ್ ಮತ್ತು ಮತ್ತೊಂದು ವ್ಯವಸ್ಥಿತ ಸ್ಪರ್ಧಾತ್ಮಕ ಪಥ. ಅಭಿವೃದ್ಧಿ ಪೈಪ್‌ಲೈನ್‌ನಡಿ ತಳಮಟ್ಟದ ಅಕಾಡೆಮಿಗಳು, ಕೋಚ್‌ಗಳ ತರಬೇತಿ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ತರಬೇತಿ ವ್ಯವಸ್ಥೆಗಳಿಗೆ ಒತ್ತು ನೀಡಲಾಗುತ್ತದೆ. ಮತ್ತೊಂದೆಡೆ, ಸ್ಪರ್ಧಾತ್ಮಕ ಪಥದ ಮೂಲಕ ನಿಯಮಿತ ಪಂದ್ಯಾವಳಿ ಅನುಭವವನ್ನು ಒದಗಿಸಿ, ಪ್ರತಿಯೊಬ್ಬ ಬಾಲಕಿಗೂ ಕ್ರೀಡೆಯಲ್ಲಿ ಮುಂದುವರಿಯಲು ಸ್ಪಷ್ಟವಾದ ಅವಕಾಶ ಕಲ್ಪಿಸಲಾಗುತ್ತದೆ.ಉಪಕ್ರಮದ ಕುರಿತು ಮಾತನಾಡಿದ ಕ್ಯಾಪ್ರಿ ಸ್ಪೋರ್ಟ್ಸ್ ನಿರ್ದೇಶಕಿ ಹಾಗೂ ಪ್ರವರ್ತಕಿ ಜಿನಿಶಾ ಶರ್ಮಾ, ‘ಭಾರತೀಯ ಕ್ರೀಡೆಯ ಭವಿಷ್ಯವನ್ನು ನಿರ್ಮಿಸುವುದು ಬಲಿಷ್ಠ ತಳಮಟ್ಟದ ಕ್ರೀಡಾ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದ ಮತ್ತು ಆರಂಭಿಕ ಹಂತದಲ್ಲೇ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದರಿಂದ ಆರಂಭವಾಗುತ್ತದೆ. ಕ್ಯಾಪ್ರಿ ಸ್ಪೋರ್ಟ್ಸ್‌ನಲ್ಲಿ ನಾವು ನಮ್ಮ ಹೂಡಿಕೆಯ ಪ್ರಮುಖ ಭಾಗವನ್ನು ಮಹಿಳಾ ಕ್ರೀಡೆಯತ್ತ ಕೇಂದ್ರೀಕರಿಸಿದ್ದೇವೆ. ಏಕೆಂದರೆ ಇದು ಭಾರತದ ಬೆಳವಣಿಗೆಗೆ ಅತ್ಯಂತ ದೊಡ್ಡ ಅವಕಾಶಗಳಲ್ಲಿ ಒಂದಾಗಿದೆ ಎಂದು ನಾವು ನಂಬುತ್ತೇವೆ. ನೋವಾ ಸ್ಪೋರ್ಟ್ಸ್ ಈ ಪ್ರಯಾಣದ ಮತ್ತೊಂದು ಪ್ರಮುಖ ಹೆಜ್ಜೆಯಾಗಿದ್ದು, ಹೆಚ್ಚಿನ ಬಾಲಕಿಯರಿಗೆ ಗುಣಮಟ್ಟದ ತರಬೇತಿ, ಸ್ಪರ್ಧೆ ಮತ್ತು ಅಗತ್ಯ ಬೆಂಬಲ ದೊರೆಯುವಂತೆ ಮಾಡುವ ಮೂಲಕ ಅವರ ಸಾಮರ್ಥ್ಯವನ್ನು ಸಾಕಾರಗೊಳಿಸಲು ನೆರವಾಗಲಿದೆ’ ಎಂದರು.ಕ್ಯಾಪ್ರಿ ಸ್ಪೋರ್ಟ್ಸ್ ನ ಕಾಂಟ್ಯಾಕ್ಟ್ ಸ್ಪೋರ್ಟ್ಸ್ ವಿಭಾಗದ ನಿರ್ದೇಶಕ ಅಪೂರ್ವ್ ಗುಪ್ತಾ ಮಾತನಾಡಿ, ‘ಬಾಲಕಿಯರ ಫುಟ್ಬಾಲ್ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ಪರಸ್ಪರ ಸಂಪರ್ಕ ಹೊಂದಿರುವ ಸಮಗ್ರ ಫುಟ್ಬಾಲ್ ಪಥವನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದೆ. ‘Girls First. Always.’ ಎಂಬ ನಮ್ಮ ತತ್ವದ ಮಾರ್ಗದರ್ಶನದಲ್ಲಿ, ಬಾಲಕಿಯರ ಅಭಿವೃದ್ಧಿ, ಮಹತ್ವಾಕಾಂಕ್ಷೆ ಮತ್ತು ಕಲ್ಯಾಣಕ್ಕೆ ಯಾವುದು ಉತ್ತಮ ಎಂಬುದನ್ನು ಆಧರಿಸಿ ಪ್ರತಿಯೊಂದು ನಿರ್ಧಾರವನ್ನೂ ತೆಗೆದುಕೊಳ್ಳುತ್ತೇವೆ.ವ್ಯವಸ್ಥಿತ ಅಭಿವೃದ್ಧಿ, ನಿರಂತರ ಬೆಂಬಲ ಮತ್ತು ಉನ್ನತ ಪ್ರದರ್ಶನದ ವಾತಾವರಣವನ್ನು ಒಟ್ಟುಗೂಡಿಸುವ ವ್ಯವಸ್ಥೆಯ ಮೂಲಕ, ಹಿಂದಿನ ಅನುಭವ ಏನೇ ಇರಲಿ, ಪ್ರತಿಯೊಬ್ಬ ಬಾಲಕಿಗೂ ಫುಟ್ಬಾಲ್ ಆಡಲು, ಪ್ರಗತಿ ಸಾಧಿಸಲು ಮತ್ತು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವಕಾಶ ದೊರೆಯಬೇಕು ಎಂಬುದು ನಮ್ಮ ಆಶಯ. ಅಂತಿಮವಾಗಿ, ನೋವಾ ಸ್ಪೋರ್ಟ್ಸ್ ನ ಪರಿಣಾಮವು ಫುಟ್ಬಾಲ್ ಮೈದಾನವನ್ನು ಮೀರಬೇಕು. ನಮ್ಮೊಂದಿಗೆ ಸೇರುವ ಪ್ರತಿಯೊಬ್ಬ ಆಟಗಾರ್ತಿಯಲ್ಲೂ ಆತ್ಮವಿಶ್ವಾಸ, ಸ್ಥೈರ್ಯ ಮತ್ತು ಹೊಸ ಅವಕಾಶಗಳ ಮನೋಭಾವವನ್ನು ಬೆಳೆಸುವ ಶಕ್ತಿಯಾಗಿ ಇದು ರೂಪುಗೊಳ್ಳಬೇಕು’ ಎಂದು ಹೇಳಿದರು.