ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ: ಇಂದು ಆಲ್ಕರಜ್‌ vs ಜೋಕೋ ಫೈನಲ್‌

KannadaprabhaNewsNetwork | Updated : Jul 14 2024, 04:43 AM IST

ಸಾರಾಂಶ

25ನೇ ಗ್ರ್ಯಾನ್‌ಸ್ಲಾಂ ಮೇಲೆ ಜೋಕೋ ಕಣ್ಣು. ಸತತ 2ನೇ ವಿಂಬಲ್ಡನ್‌ ಗೆಲ್ತಾರಾ ಆಲ್ಕರಜ್‌?. ಕಳೆದ ವರ್ಷ ವಿಂಬಲ್ಡನ್‌ ಫೈನಲ್‌ನಲ್ಲಿ ಜೋಕೋವಿಚ್‌ರನ್ನೇ ಸೋಲಿಸಿ ಟ್ರೋಫಿ ಗೆದ್ದಿದ್ದ ಆಲ್ಕರಜ್‌

ಲಂಡನ್‌: ಬಹುನಿರೀಕ್ಷಿತ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ಭಾನುವಾರ 7 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಹಾಗೂ ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಪರಸ್ಪರ ಸೆಣಸಾಡಲಿದ್ದಾರೆ.

ಈ ವರ್ಷ ಫ್ರೆಂಚ್ ಓಪನ್‌ ಟ್ರೋಫಿ ಗೆದ್ದಿರುವ ಸ್ಪೇನ್‌ನ 21 ವರ್ಷದ ಆಲ್ಕರಜ್‌, ಶನಿವಾರ ಸೆಮಿಫೈನಲ್‌ನಲ್ಲಿ 5ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಕಳೆದ ವರ್ಷ ವಿಂಬಲ್ಡನ್‌ ಫೈನಲ್‌ನಲ್ಲಿ ಜೋಕೋವಿಚ್‌ರನ್ನೇ ಸೋಲಿಸಿ ಟ್ರೋಫಿ ಗೆದ್ದಿದ್ದ ಆಲ್ಕರಜ್‌, ಈ ಬಾರಿ ಮತ್ತೊಮ್ಮೆ ದಿಗ್ಗಜ ಟೆನಿಸಿಗನ ಸೋಲಿಸುವ ಕಾತರದಲ್ಲಿದ್ದಾರೆ. ಈ ಮೂಲಕ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸಂಖ್ಯೆಯನ್ನು 4ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದಾರೆ.ಮತ್ತೊಂದೆಡೆ ಜೋಕೋ ಸತತ 6ನೇ ಹಾಗೂ ಒಟ್ಟಾರೆ 10ನೇ ಬಾರಿ ವಿಂಬಲ್ಡನ್‌ ಫೈನಲ್‌ ಆಡುತ್ತಿದ್ದು, 8ನೇ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವ ನಂ.2 ಜೋಕೋ, ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ 6-4, 7-6(7/2), 6-4 ಸೆಟ್‌ಗಳಲ್ಲಿ ಗೆದ್ದಿದ್ದರು.

ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಆಲ್ಕರಜ್‌ ಅಜೇಯ ಸಾಧನೆ

ಆಲ್ಕರಜ್‌ ಈ ವರೆಗೂ 3 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ ಆಡಿದ್ದಾರೆ. 3 ಬಾರಿ ಟ್ರೋಫಿ ಗೆದ್ದಿದ್ದಾರೆ. 2022ರ ಯುಎಸ್ ಓಪನ್‌, 2023ರ ವಿಂಬಲ್ಡನ್‌ ಹಾಗೂ 2024ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಎನಿಸಿಕೊಂಡಿದ್ದಾರೆ. 

37 ವರ್ಷ, 37 ಗ್ರ್ಯಾನ್‌ಸ್ಲಾಂ ಫೈನಲ್‌!

37 ವರ್ಷದ ಜೋಕೋವಿಚ್‌ ದಾಖಲೆಯ 37ನೇ ಗ್ರ್ಯಾನ್‌ಸ್ಲಾಂ ಫೈನಲ್‌ ಆಡಲು ಸಜ್ಜಾಗಿದ್ದಾರೆ. ಈ ವರೆಗೂ 24 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿರುವ ಅವರು 12 ಬಾರಿ ರನ್ನರ್‌-ಅಪ್‌ ಆಗಿದ್ದಾರೆ. 7 ಬಾರಿ ವಿಂಬಲ್ಡನ್‌, 10 ಬಾರಿ ಆಸ್ಟ್ರೇಲಿಯನ್‌ ಓಪನ್‌, 3 ಬಾರಿ ಫ್ರೆಂಚ್‌ ಓಪನ್ ಹಾಗೂ 4 ಬಾರಿ ಯುಎಸ್‌ ಓಪನ್‌ ಗೆದ್ದಿದ್ದಾರೆ. ವಿಂಬಲ್ಡನ್‌ನಲ್ಲಿ 2 ಬಾರಿ(2013, 2023) ಫೈನಲ್‌ನಲ್ಲಿ ಸೋತಿದ್ದಾರೆ.

06ನೇ ಪಂದ್ಯ: ಜೋಕೋ ಹಾಗೂ ಆಲ್ಕರಜ್‌ ನಡುವೆ ಇದು 6ನೇ ಮುಖಾಮುಖಿ. ಈ ವರೆಗಿನ 5 ಪಂದ್ಯಗಳಲ್ಲಿ ಜೋಕೋ 3 ಬಾರಿ, ಆಲ್ಕರಜ್‌ 2 ಬಾರಿ ಗೆದ್ದಿದ್ದಾರೆ.

ಪಂದ್ಯ ಆರಂಭ: ಸಂಜೆ 6.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

Share this article