ನಾಳೆಯಿಂದ ಟೋಕಿಯೋದಲ್ಲಿ ವಿಶ್ವ ಅಥ್ಲೆಟಿಕ್ಸ್‌ ಶುರು : ಭಾರತದಿಂದ ನೀರಜ್‌ ಒಬ್ಬರೇ ಪದಕ ಭರವಸೆ

KannadaprabhaNewsNetwork |  
Published : Sep 13, 2025, 02:04 AM IST
ನೀರಜ್ | Kannada Prabha

ಸಾರಾಂಶ

ಕಳೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಪಾಕಿಸ್ತಾನದ ನದೀಂ ಚಿನ್ನ ಗೆದ್ದಿದ್ದರು. ಆ ಬಳಿಕ ಇದೇ ಮೊದಲ ಬಾರಿ ನೀರಜ್‌ ಹಾಗೂ ನದೀಂ ಮುಖಾಮುಖಿಯಾಗಲಿದ್ದಾರೆ.

ಟೋಕಿಯೋ: 20ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಶನಿವಾರ ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ಚಾಲನೆ ಸಿಗಲಿದೆ. ಸೆ.21ರ ವರೆಗೂ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 19 ಮಂದಿ ಕಣದಲ್ಲಿದ್ದಾರೆ. ಆದರೆ ಹಾಲಿ ವಿಶ್ವ ಚಾಂಪಿಯನ್‌, ತಾರಾ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಮಾತ್ರ ಭಾರತದ ಪದಕ ಭರವಸೆಯಾಗಿದ್ದಾರೆ.2022ರಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್‌, 2023ರಲ್ಲಿ ಚಿನ್ನದ ಪದಕ ಬೇಟೆಯಾಡಿದ್ದರು.  

ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು. ಈ ಬಾರಿಯೂ ಅವರು ಚಿನ್ನದ ಮೇಲೆ ಕಣ್ಣಿಟ್ಟಿದ್ದು, ಸತತ 2 ಆವೃತ್ತಿಗಳಲ್ಲಿ ಚಿನ್ನ ಗೆದ್ದ ವಿಶ್ವದ 3ನೇ ಕ್ರೀಡಾಪಟು ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ. ಈಗ ನೀರಜ್‌ಗೆ ಕೋಚ್‌ ಆಗಿರುವ ಚೆಕ್‌ ಗಣರಾಜ್ಯದ ಜಾನ್‌ ಜೆಲೆನ್ಜಿ(1993, 1995) ಹಾಗೂ ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌(2019, 2022) ಮಾತ್ರ ಈ ಸಾಧನೆ ಮಾಡಿದ್ದಾರೆ.

ನೀರಜ್‌-ನದೀಂ ಸ್ಪರ್ಧೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌, ಕಳೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಪಾಕಿಸ್ತಾನದ ಅರ್ಶದ್‌ ನದೀಂ ಚಿನ್ನ ಜಯಿಸಿದ್ದರು. ಆ ಬಳಿಕ ಇದೇ ಮೊದಲ ಬಾರಿ ನೀರಜ್‌ ಹಾಗೂ ನದೀಂ ಮುಖಾಮುಖಿಯಾಗಲಿದ್ದಾರೆ. ಕಳೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನದೀಂರನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದ ನೀರಜ್‌, ಈ ಬಾರಿ ಮತ್ತೆ ಚಿನ್ನದ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ. ಅವರಿಗೆ ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಚ್‌, ಜರ್ಮನಿಯ ಜೂಲಿಯನ್‌ ವೆಬರ್‌, ಕೀನ್ಯಾದ ಜೂಲಿಯಸ್‌ ಯೆಗೊ ಸೇರಿ ಪ್ರಮುಖರ ಸವಾಲು ಎದುರಾಗಲಿದೆ. ಉಳಿದಂತೆ ಜಾವೆಲಿನ್‌ನಲ್ಲಿ ಭಾರತ ಇತರ ಮೂವರಾದ ಸಚಿನ್‌ ಯಾದವ್‌, ಯಶ್ವೀರ್‌ ಸಿಂಗ್‌, ರೋಹಿತ್‌ ಯಾದವ್‌ ಕೂಡಾ ಕಣದಲ್ಲಿದ್ದಾರೆ. ಕೂಟದಲ್ಲಿ ಜಾವೆಲಿನ್‌ನ ಅರ್ಹತಾ ಸುತ್ತು ಸೆ.17ಕ್ಕೆ, ಫೈನಲ್‌ ಸುತ್ತು ಸೆ.18ರಂದು ನಡೆಯಲಿದೆ.

ಪಾರುಲ್‌, ಅನಿಮೇಶ್‌, ಅನ್ನು, ಮುರಳಿ ಸ್ಪರ್ಧೆ

ನೀರಜ್‌ ಸೇರಿ ಜಾವೆಲಿನ್‌ನ ನಾಲ್ವರು ಸ್ಪರ್ಧಿಗಳು ಹೊರತುಪಡಿಸಿ ಭಾರತದಿಂದ ಅನ್ನು ರಾಣಿ(ಮಹಿಳಾ ಜಾವೆಲಿನ್‌ ಎಸೆತ), ಪಾರುಲ್‌ ಚೌಧರಿ(3000 ಮೀ. ಸ್ಟೀಪಲ್‌ಚೇಸ್‌), ಮುರಳಿ ಶ್ರೀಶಂಕರ್‌(ಲಾಂಗ್‌ಜಂಪ್‌), ಪ್ರವೀಣ್‌ ಚಿತ್ರವೇಲ್‌(ಟ್ರಿಪಲ್‌ ಜಂಪ್‌), ಗುಲ್ವೀರ್‌ ಸಿಂಗ್‌(5000 ಮೀ. ಓಟ), ಅನಿಮೇಶ್‌ ಕುಜೂರ್(200 ಮೀ.) ಸೇರಿ ಪ್ರಮುಖರು ಕಣದಲ್ಲಿದ್ದು, ಕೂಟದಲ್ಲಿ ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದಾರೆ. ಇತರ ಸ್ಪರ್ಧಿಗಳು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದರೂ, ಫೈನಲ್‌ಗೇರುವ ಅಥವಾ ಪದಕ ಗೆಲ್ಲುವ ಭರವಸೆಯಿಲ್ಲ.

ಈವರೆಗೆ ಭಾರತಕ್ಕೆ ಸಿಕ್ಕಿದ್ದು 3 ಮೆಡಲ್‌!

ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾರತ ಸಾಧನೆ ಹೇಳಿಕೊಳ್ಳುವಂತದ್ದೇನೂ ಇಲ್ಲ. 1983ರಿಂದಲೂ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದಿದ್ದು ಕೇವಲ 3 ಪದಕ. 2003ರಲ್ಲಿ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಕಂಚು ಗೆದ್ದಿದ್ದರು. ಬಳಿಕ ಜಾವೆಲಿನ್‌ನಲ್ಲಿ ನೀರಜ್‌ 2022ರಲ್ಲಿ ಬೆಳ್ಳಿ, 2023ರಲ್ಲಿ ಚಿನ್ನ ಜಯಿಸಿದ್ದಾರೆ.

ಇಂದು ಭಾರತದ ನಾಲ್ವರು ಸ್ಪರ್ಧೆ

ಭಾರತೀಯರು ಇರುವ ಸ್ಪರ್ಧೆಗಳು ಶನಿವಾರವೇ ಆರಂಭಗೊಳ್ಳಲಿವೆ. 35 ಕಿ.ಮೀ. ರೇಸ್‌ವಾಕ್‌ನಲ್ಲಿ ರಾಮ್ ಬಾಬು, ಸಂದೀಪ್‌ ಕುಮಾರ್‌, ಪ್ರಿಯಾಂಕ ಗೋಸ್ವಾಮಿ, 1500 ಮೀ. ರೇಸ್‌ನಲ್ಲಿ ಪೂಜಾ ಸ್ಪರ್ಧಿಸಲಿದ್ದಾರೆ.

05ನೇ ಬಾರಿ: ಜಾವೆಲಿನ್‌ ಎಸೆತಗಾರ್ತಿ ಅನ್ನು ರಾಣಿ 5ನೇ ಬಾರಿ(2017, 2019, 2022, 2023, 2025) ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.ಸ್ಪರ್ಧೆಗಳು ಜಿಯೋಹಾಟ್‌ಸ್ಟಾರ್‌ ಹಾಗೂ ಸ್ಟಾರ್‌ಸ್ಪೋರ್ಟ್ಸ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!