ವಿನೇಶ್‌ ಬೆಳ್ಳಿ ಪದಕದ ತೀರ್ಪು ನಾಡಿದ್ದಿಗೆ ಮುಂದೂಡಿಕೆ

KannadaprabhaNewsNetwork |  
Published : Aug 14, 2024, 12:47 AM IST
ಬೆಳ್ಳಿ ಪದಕದ ನಿರೀಕ್ಷೆಯಲ್ಲಿರುವ ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌  | Kannada Prabha

ಸಾರಾಂಶ

ವಿನೇಶ್‌ ಫೋಗಟ್‌ರ ಬೆಳ್ಳಿ ಪದಕ ತೀರ್ಪು ಮತ್ತೆ ಮುಂದೂಡಿಕೆ. ನಾಡಿದ್ದು ರಾತ್ರಿ 9.30ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ ಜಾಗತಿಕ ಕ್ರೀಡಾ ನ್ಯಾಯಾಲಯ. 3ನೇ ಬಾರಿಗೆ ತೀರ್ಪು ಮುಂದೂಡಿಕೆ.

ಪ್ಯಾರಿಸ್‌: ಜಾಗತಿಕ ಕ್ರೀಡಾ ನ್ಯಾಯಾಲಯ (ಸಿಎಎಸ್‌)ನ ತಾತ್ಕಾಲಿಕ ಪೀಠವು ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ರ ಬೆಳ್ಳಿ ಪದಕದ ತೀರ್ಪನ್ನು 3ನೇ ಬಾರಿಗೆ ಮುಂದೂಡಿದೆ. ಮಂಗಳವಾರ ರಾತ್ರಿ ಪ್ರಕಟಗೊಳ್ಳಬೇಕಿದ್ದ ತೀರ್ಪು, ಆ.16ರ ರಾತ್ರಿ 9.30 (ಭಾರತೀಯ ಕಾಲಮಾನ)ಕ್ಕೆ ಪ್ರಕಟಿಸುವುದಾಗಿ ಸಿಎಎಸ್‌ ತಿಳಿಸಿದೆ.

ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ 29 ವರ್ಷದ ವಿನೇಶ್‌ ತೂಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ, ಫೈನಲ್‌ಗೂ ಮುನ್ನ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ವಿನೇಶ್‌ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿಗೆ ಇದ್ದರು. ಅನರ್ಹತೆ ಪ್ರಶ್ನಿಸಿ ವಿನೇಶ್‌ ಕಳೆದ ವಾರ ಸಿಎಎಸ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಾವು ನ್ಯಾಯಯುತವಾಗಿ ಫೈನಲ್‌ ಪ್ರವೇಶಿಸಿದ್ದು, ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಸ್ವೀಕರಿಸಿದ್ದ ಸಿಎಎಸ್‌, ಒಲಿಂಪಿಕ್ಸ್‌ ಮುಗಿಯುವ ಮುನ್ನ ತೀರ್ಪು ನೀಡುವುದಾಗಿ ತಿಳಿಸಿತ್ತು. ಬಳಿಕ ಆ.13ಕ್ಕೆ ಮುಂದೂಡಿಕೆಯಾಗಿತ್ತು.

ವಿನೇಶ್‌ಗೆ ವರವಾಗುತ್ತಾ ನಿಯಮದಲ್ಲಿನ ದೋಷ?

ವಿಶ್ವ ಕುಸ್ತಿ ಫೆಡರೇಶನ್‌ನ ನಿಯಮದಲ್ಲಿನ ಲೋಪದೋಷ, ವಿನೇಶ್‌ ಫೋಗಟ್‌ರ ಪ್ರಕರಣಕ್ಕೆ ಸಹಕಾರಿಯಾಗುತ್ತಾ ಎನ್ನುವ ಚರ್ಚೆ ಕ್ರೀಡಾ ವಲಯದಲ್ಲಿ ನಡೆಯುತ್ತಿದೆ. ಫೈನಲ್‌ನಿಂದ ವಿನೇಶ್‌ ಅನರ್ಹಗೊಂಡ ಬಳಿಕ ಅವರ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಕ್ಯೂಬಾದ ಯೂಸ್ನೇಲೈಸ್‌ ಗುಜ್ಮನ್‌ ಫೈನಲ್‌ಗೆ ಪ್ರವೇಶ ಪಡೆದರು. ಆದರೆ ವಿನೇಶ್‌ ವಿರುದ್ಧ ಮೊದಲ ಸುತ್ತಿನಲ್ಲಿ ಸೋತಿದ್ದ ಜಪಾನ್‌ನ ಯುಹಿ ಸುಸಾಕಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ನೀಡಲಾಯಿತು. ಸುಸಾಕಿ ಕಂಚಿನ ಪದಕ ಸಹ ಗೆದ್ದರು. ನಿಯಮದ ಪ್ರಕಾರ, ಫೈನಲ್‌ ಪ್ರವೇಶಿಸಿದ ಕುಸ್ತಿಪಟುಗಳ ವಿರುದ್ಧ ಮೊದಲ ಸುತ್ತಿನಿಂದ ಕ್ವಾರ್ಟರ್‌ ಫೈನಲ್‌ ವರೆಗಿನ ಪಂದ್ಯಗಳಲ್ಲಿ ಸೋತವರಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ಸಿಗಲಿದೆ. ಆ ಸುತ್ತಿನಲ್ಲಿ ಆಡಿ ಕಂಚಿನ ಪದಕ ಗೆಲ್ಲುವ ಅವಕಾಶವಿರಲಿದೆ. ಈ ಪ್ರಕರಣದಲ್ಲಿ ವಿನೇಶ್‌ರ ಬದಲು ಫೈನಲ್‌ನಲ್ಲಿ ಆಡಿದ್ದ ಗುಜ್ಮನ್‌.

ಹೀಗಾಗಿ, ಅವರ ವಿರುದ್ಧ ಸೋತಿದ್ದ ಎದುರಾಳಿಗಳಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ಸಿಗಬೇಕಿತ್ತು. ವಿನೇಶ್‌ ಅನರ್ಹಗೊಂಡ ಬಳಿಕ ಮೊದಲ ಸುತ್ತಿನಿಂದ ಅವರು ಸಾಧಿಸಿದ ಗೆಲುವುಗಳೆಲ್ಲವೂ ಅಮಾನ್ಯಗೊಂಡವು. ಹೀಗಾಗಿ, ವಿನೇಶ್‌ ವಿರುದ್ಧ ಸೋತ ಸುಸಾಕಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ನೀಡಿದ್ದು ನಿಯಮದಲ್ಲಿರುವ ಲೋಪ ಎಂದು ಕೆಲ ತಜ್ಞರು ಅಭಿಪ್ರಾಯಿಸಿದ್ದಾರೆ. ವಿನೇಶ್‌ ಪರ ವಕೀಲರು ಈ ಲೋಪದೋಷವನ್ನು ನ್ಯಾಯಪೀಠದ ಮುಂದೆ ಎತ್ತಿ ತೋರಿಸಿ, ಬೆಳ್ಳಿ ಪದಕಕ್ಕೆ ಭಾರತೀಯ ಕುಸ್ತಿಪಟು ಅರ್ಹರು ಎಂದು ವಾದಿಸಿದ್ದಾರೆ ಎಂದು ತಿಳಿದುಬಂದಿದೆ.

PREV

Recommended Stories

ಯುವ ಫುಟ್‌ಬಾಲ್ ಆಟಗಾರರಿಗಾಗಿ ರೆಸಿಡೆನ್ಷಿಯಲ್ ಅಕಾಡೆಮಿ ಆರಂಭಿಸಿದ ಎಸ್‌ಯುಎಫ್‌ಸಿ
ಕೆಎಸ್‌ಸಿಎ ಚುನಾವಣೆ: ವೆಂಕಟೇಶ್‌ ಪ್ರಸಾದ್‌ ಟೀಮ್‌ಗೆ ಕುಂಬ್ಳೆ, ದ್ರಾವಿಡ್‌, ಶ್ರೀನಾಥ್‌ ಬೆಂಬಲ