ಚಾಂಪಿಯನ್ಸ್‌ ಟ್ರೋಫಿ: ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ - ಆಫ್ಘನ್‌ ಬಹುತೇಕ ಹೊರಕ್ಕೆ

Published : Mar 01, 2025, 09:00 AM IST
Australia Cricket Team

ಸಾರಾಂಶ

ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಅಫ್ಘಾನಿಸ್ತಾನ ವಿರುದ್ಧ ಶುಕ್ರವಾರದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು.

 ಲಾಹೋರ್‌: ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಅಫ್ಘಾನಿಸ್ತಾನ ವಿರುದ್ಧ ಶುಕ್ರವಾರದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಹೀಗಾಗಿ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿತು. ಇದರೊಂದಿಗೆ ಆಡಿರುವ 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿ ಆಸ್ಟ್ರೇಲಿಯಾ ‘ಬಿ’ ಗುಂಪಿನ ಮೊದಲ ತಂಡವಾಗಿ ಸೆಮಿಫೈನಲ್‌ಗೇರಿತು.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಣಿಸಿದ್ದ ಆಫ್ಘನ್‌ನ ಅಂಕ ಸದ್ಯ ಮೂರಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಕೂಡಾ 3 ಅಂಕ ಹೊಂದಿದೆ. ಈ ಎರಡು ತಂಡಗಳ ಪೈಕಿ ಒಂದು ತಂಡ ಸೆಮಿಫೈನಲ್‌ ಪ್ರವೇಶಿಸಲಿದೆ. ಶನಿವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ಸೆಮಿಫೈನಲ್‌ ಭವಿಷ್ಯ ನಿರ್ಧಾರವಾಗಲಿದೆ.

ಆಫ್ಘನ್‌ ಕೈಹಿಡಿದ ಅದೃಷ್ಟ: ಶುಕ್ರವಾರ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 50 ಓವರ್‌ಗಳಲ್ಲಿ 273 ರನ್‌ಗೆ ಆಲೌಟಾಯಿತು. ಸಿದೀಖುಲ್ಲಾ ಅತಲ್‌ 95 ಎಸೆತಗಳಲ್ಲಿ 85 ರನ್‌ ಸಿಡಿಸಿದರು. ಶತಕದ ನಿರೀಕ್ಷೆ ಮೂಡಿಸಿದ್ದ ಅವರು, ಸ್ಪೆನ್ಸರ್‌ ಜಾನ್ಸನ್‌ ಎಸೆತದಲ್ಲಿ ಸ್ಮಿತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಕೊನೆಯಲ್ಲಿ ಅಬ್ಬರಿಸಿದಿ ಅಜ್ಮತುಲ್ಲಾ ಓಮರ್‌ಜೈ 63 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 67 ರನ್‌ ಸಿಡಿಸಿ ತಂಡದ ಮೊತ್ತವನ್ನು 270ರ ಗಡಿ ದಾಟಿಸಿದರು. ಉಳಿದಂತೆ ಕಳೆದ ಪಂದ್ಯದ ಶತಕವೀರ ಇಬ್ರಾಹಿಂ ಜದ್ರಾನ್‌ 22, ಹಶ್ಮತುಲ್ಲಾ ಶಾಹಿದಿ 20, ರಶೀದ್‌ ಖಾನ್‌ 19 ರನ್‌ ಕೊಡುಗೆ ನೀಡಿದರು. ಆಸೀಸ್‌ ಪರ ಬೆನ್‌ ಡ್ವಾರ್ಶಿಯಸ್‌ 3, ಸ್ಪೆನ್ಸರ್‌, ಆ್ಯಡಂ ಝಂಪಾ ತಲಾ 2 ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಗುರಿ ಪಡೆದ ಆಸೀಸ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡ 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 109 ರನ್‌ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಈ ವೇಳೆ ಟ್ರ್ಯಾವಿಸ್‌ ಹೆಡ್‌ 40 ಎಸೆತಗಳಲ್ಲಿ 59, ಸ್ಟೀವನ್‌ ಸ್ಮಿತ್‌ 19 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದ ಕಾರಣ ಮೈದಾನದಲ್ಲೂ ನೀರು ನಿಂತಿತ್ತು. ಬಳಿಕ ಮಳೆ ನಿಂತರೂ ನೀರು ತುಂಬಿದ್ದ ಕಾರಣ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಭಾರತೀಯ ಕಾಲಮಾನ ರಾತ್ರಿ 9.20ರ ವೇಳೆಗೆ ಪಂದ್ಯ ರದ್ದುಗೊಳಿಸಲು ರೆಫ್ರಿಗಳು ನಿರ್ಧರಿಸಿದರು.

ಸೆಮಿಫೈನಲ್‌ ಲೆಕ್ಕಾಚಾರ ಹೇಗೆ?

- 4 ಅಂಕ ಪಡೆದ ಆಸ್ಟ್ರೇಲಿಯಾ ‘ಬಿ’ ಗುಂಪಿನಿಂದ ಸೆಮಿಫೈನಲ್‌ಗೆ. ಇಂಗ್ಲೆಂಡ್‌ ಹೊರಬಿದ್ದಿದೆ.

- ಮತ್ತೊಂದು ಸ್ಥಾನಕ್ಕಾಗಿ ದ.ಆಫ್ರಿಕಾ, ಅಫ್ಘಾನಿಸ್ತಾನ ನಡುವೆ ಪೈಪೋಟಿ. ಇತ್ತಂಡಗಳೂ ತಲಾ 3 ಅಂಕ ಹೊಂದಿವೆ.

- ಶನಿವಾರ ಇಂಗ್ಲೆಂಡ್‌ ವಿರುದ್ಧ ಆಡಲಿರುವ ದ.ಆಫ್ರಿಕಾ. ಈ ಪಂದ್ಯದಲ್ಲೇ ಸೆಮೀಸ್‌ ಭವಿಷ್ಯ ನಿರ್ಧಾರ.- ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾ ಸೋತರೆ, ಅಂಕಗಳು ತಲಾ 3ರಲ್ಲೇ ಇರುತ್ತವೆ. ಆಗ ನೆಟ್‌ ರನ್‌ ರೇಟ್‌ ಲೆಕ್ಕಾಚಾರ ಎದುರಾಗುತ್ತದೆ.

- ಸದ್ಯ ದ.ಆಫ್ರಿಕಾ +2.140, ಅಫ್ಘಾನಿಸ್ತಾನ -0.990 ನೆಟ್‌ ರನ್‌ರೇಟ್‌ ಹೊಂದಿದೆ.

- ದ.ಆಫ್ರಿಕಾವನ್ನು ಇಂಗ್ಲೆಂಡ್‌ ತಂಡ ಮೊದಲು ಬ್ಯಾಟ್‌ ಮಾಡಿ ಕನಿಷ್ಠ 207 ರನ್‌ಗಳಿಂದ ಸೋಲಿಸಬೇಕು ಅಥವಾ ಇಂಗ್ಲೆಂಡ್‌ಗೆ ಚೇಸಿಂಗ್‌ ಸಿಕ್ಕರೆ 11.1 ಓವರ್‌ಗಳಲ್ಲೇ ಪಂದ್ಯ ಗೆಲ್ಲಬೇಕು.

- ಹೀಗಾದರೆ ಮಾತ್ರ ಅಫ್ಘಾನಿಸ್ತಾನದ ನೆಟ್‌ ರನ್‌ರೇಟ್‌ ದ.ಆಫ್ರಿಕಾಕ್ಕಿಂತ ಹೆಚ್ಚಾಗಿ ಸೆಮಿಫೈನಲ್‌ಗೇರಲಿದೆ. ಅಲ್ಲದಿದ್ದರೆ, ದ.ಆಫ್ರಿಕಾ ಸೆಮಿಗೆ.

ಟೂರ್ನಿಯಲ್ಲಿ ರದ್ದಾದ

8 ಪಂದ್ಯ ಪೈಕಿ 6ರಲ್ಲಿ

ಆಸ್ಟ್ರೇಲಿಯಾ ಭಾಗಿ!

ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ಈ ವರೆಗೂ 8 ಪಂದ್ಯಗಳು ಮಳೆ ಕಾರಣದಿಂದ ರದ್ದುಗೊಂಡಿವೆ. ಈ ಪೈಕಿ 6ರಲ್ಲಿ ಆಸ್ಟ್ರೇಲಿಯಾ ಪಾಲ್ಗೊಂಡಿದೆ ಎಂಬುದು ಗಮನಾರ್ಹ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ-ದ.ಆಫ್ರಿಕಾ ಪಂದ್ಯ ಕೂಡಾ ಮಳೆಗೆ ಆಹುತಿಯಾಗಿತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ನಾನು ಗೆಲ್ಲುವ ಬಹುಮಾನಗಳನ್ನು ನನ್ನ ತಾಯಿಗೆ ಕಳಿಸುತ್ತೇನೆ: ಕೊಹ್ಲಿ!
ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌