ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಿನ್ಮಯಿ ಆಯ್ಕೆ

KannadaprabhaNewsNetwork | Published : Oct 11, 2023 12:45 AM

ಸಾರಾಂಶ

ತುರುವೇಕೆರೆಯ ಐಪಿಎಸ್ ನ ವಿದ್ಯಾರ್ಥಿನಿ ಕೆ.ಎಂ.ಚಿನ್ಮಯಿಗೆ ವಿರಕ್ತ ಮಠದ ಶ್ರೀಗಳಿಂದ ಗೌರವ
ಕನ್ನಡಪ್ರಭವಾರ್ತೆ, ತುರುವೇಕೆರೆ ನವದೆಹಲಿಯ ಕೌನ್ಸಿಲ್ ಫಾರ್, ಇಂಡಿಯನ್ ಸ್ಕೂಲ್ ಎಕ್ಸಾಮಿನೇಷನ್ ಬೋರ್ಡ್ ಇತ್ತೀಚೆಗೆ ಕೊಲ್ಕಾತ್ತಾದಲ್ಲಿ ನಡೆದ ಐಸಿಎಸ್‌ಸಿ ಪಠ್ಯಕ್ರಮದ ಶಾಲೆಗಳಿಗೆ ಆಯೋಜಿಸಿದ್ದ ಸಿ ಐ ಎಸ್ ಇ ರಾಷ್ಟ್ರೀಯ ೧೭ ವರ್ಷದೊಳಗಿನ ಬಾಲಕಿಯರ ಕಬ್ಬಡ್ಡಿ ಸ್ಪರ್ಧೆಯಲ್ಲಿ ಇಂಡಿಯನ್ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯಕ್ಕೆ ಹಾಗೂ ತಮ್ಮ ಶಾಲೆಗೆ ಗೌರವ ಹೆಚ್ಚಿಸಿದ್ದಾಳೆ ಎಂದು ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ತಿಳಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಡೆದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿ ರಾಷ್ಟ್ರ ಮಟ್ಟದ ಎಸ್ ಜಿ ಎಫ್ ಐ ಗೆ ಆಯ್ಕೆಯಾಗಿರುವ ಹಿನ್ನೆಲೆ ತಮ್ಮ ಶಿಕ್ಷಣ ಸಂಸ್ಥೆಯಿಂದ ನೀಡಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕೆ.ಎಂ.ಚಿನ್ಮಯಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಳು. ಈಕೆ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಆಕೆ ಪ್ರಥಮ ಸ್ಥಾನ ಗಳಿಸಿದರು. ಅಂತರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದೇಶದಾದ್ಯಂತ 12 ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ನಾಲ್ವರು ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಈ ನಾಲ್ವರಲ್ಲಿ ಶಾಲೆಯ ವಿದ್ಯಾರ್ಥಿನಿ ಕೆ.ಎಂ.ಚಿನ್ಮಯಿ ಕೂಡ ಒಬ್ಬಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಡಾ.ರುದ್ರಯ್ಯ ಹಿರೇಮಠ್ ಹೇಳಿದರು. ನೆರವು-ದೇಶೀ ಕ್ರೀಡೆಯಾಗಿರುವ ಕಬ್ಬಡ್ಡಿಯಲ್ಲಿ ಉತ್ತಮ ಸಾಧನೆ ತೋರಿರುವ ಈ ಚಿನ್ಮಯಿ ಓರ್ವ ಗ್ರಾಮೀಣ ಪ್ರತಿಭೆಯಾಗಿದ್ದಾಳೆ. ಜನವರಿ ತಿಂಗಳಿನಲ್ಲಿ ರಾಜಸ್ಥಾನದ ಜೈಪುರ್ ನಲ್ಲಿ ನಡೆಯುವ ಸ್ಟೂಡೆಂಟ್ಸ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಭಾಗವಹಿಸಲು ಸಿದ್ದಳಾಗುತ್ತಿದ್ದಾಳೆ. ಪೋಷಕರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಶಿಕ್ಷಣ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಕೆ.ಎಂ.ಚಿನ್ಮಯಿ ಮುಂಬರುವ ದಿನಗಳಲ್ಲಿ ಕಬ್ಬಡ್ಡಿಯಲ್ಲಿ ಉತ್ತಮ ಕ್ರೀಡಾಪಟುವಾಗುವುದರಲ್ಲಿ ಅನುಮಾನವಿಲ್ಲ. ಅವಳಿಗೆ ಸೂಕ್ತ ತರಬೇತಿ ಸಿಕ್ಕಲ್ಲಿ ದೇಶಕ್ಕೆ ಒಳ್ಳೆಯ ಕ್ರೀಡಾಪಟು ಆಗಲಿದ್ದಾಳೆ. ಕ್ರೀಡಾ ಸಂಸ್ಥೆಗಳು, ಕ್ರೀಡಾ ಪ್ರೋತ್ಸಾಹಕರು ಅವರಿಗೆ ಆರ್ಥಿಕ ನೆರವು ಹಾಗೂ ಸೂಕ್ತ ತರಬೇತಿಗೆ ನೆರವು ನೀಡಬೇಕೆಂದು ಡಾ.ರುದ್ರಯ್ಯ ಹಿರೇಮಠ್ ವಿನಂತಿಸಿಕೊಂಡಿದ್ದಾರೆ. ಕೆ.ಎಂ.ಚಿನ್ಮಯಿಯ ಈ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರೂ ಆಗಿರುವ ಆನಂದ್ ಮತ್ತು ಅಶೋಕ್, ಕಬ್ಬಡ್ಡಿ ತರಬೇತುದಾರರಾದ ಜಟ್ಟಿ ಗಂಗಾಧರ್, ಶಾಲೆಯ ಪ್ರಾಂಶುಪಾಲ ಪುಷ್ಟಾ ಎಸ್ ಪಾಟೀಲ್, ಶಿಕ್ಷಕ ವೃಂದಕ್ಕೆ ಡಾ.ರುದ್ರಯ್ಯ ಹಿರೇಮಠ್ ಅಭಿನಂದನೆ ತಿಳಿಸಿದ್ದಾರೆ. ಹಾರೈಕೆ - ಕಬ್ಬಡ್ಡಿಯಲ್ಲಿ ಉತ್ತಮ ಸಾಧನೆ ತೋರಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಚಿನ್ಮಯಿಯನ್ನು ಅಭಿನಂದಿಸಿದ ವಿರಕ್ತ ಮಠದ ಕರಿವೃಷಭ ದೇಶೀಕೇಂದರ ಶಿವಯೋಗೀಶ್ವರ ಸ್ವಾಮಿ ಮುಂಬರುವ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿ ದೇಶಕ್ಕೇ ಹೆಮ್ಮೆ ತರುವ ಶಕ್ತಿ ಚಿನ್ಮಯಿಗೆ ಸಿಗಲಿ ಎಂದು ಹಾರೈಸಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಕೆಪಿಸಿಸಿ ವಕ್ತಾರ ಮುರುಳೀಧರ್ ಹಾಲಪ್ಪ. ದೀಪು ಶಾಲೆಯ ಮುಖ್ಯೋಪಧ್ಯಾಯರಾದ ನಟೇಶ್, ಐಪಿಎಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಚಿನ್ಮಯಿ ಪೋಷಕರಾದ ಕೆ.ಟಿ.ಮಂಜು, ತಾಯಿ ಎನ್.ಜಿ.ಕನ್ನಿಕಾ ಇದ್ದರು. ಪ್ರೋತ್ಸಾಹ - ಚಿನ್ಮಯಿಗೆ ಕಬ್ಬಡ್ಡಿಯಲ್ಲಿ ಸಾಧನೆ ಮಾಡಲು ಆರ್ಥಿಕವಾಗಿ ಅಥವಾ ತರಬೇತು ವಿಷಯದಲ್ಲಾದರೂ ನೆರವು ನೀಡಲು ಇಚ್ಚಿಸುವವರು ಚಿನ್ಮಯಿಯ ತಂದೆ ಮಂಜುರವರ ಮೊಬೈಲ್ ಸಂಖ್ಯೆ ೯೯೬೪೬೦೩೪೮೧ ಗೆ ಸಂಪರ್ಕಿಸಬಹುದು. ಅವರ ಎಸ್ ಬಿ ಐ ಬ್ಯಾಂಕ್ ಖಾತೆ ಸಂಖ್ಯೆ ೬೪೦೭೪೨೨೧೩೩೭, ಐಎಫ್‌ಎಸ್‌ಇ ಕೋಡ್ ಎಸ್ ಬಿ ಐ ಎನ್ ೦೦೪೦೧೦೪ ಗೆ ಆರ್ಥಿಕ ಸಹಾಯ ಮಾಡಬೇಕೆಂದು ವಿನಂತಿಸಿಕೊಳ್ಳಲಾಗಿದೆ. ಫೋಟೊ...... ೧೦ ಟಿವಿಕೆ ೨ - ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ತುರುವೇಕೆರೆಯ ಐಪಿಎಸ್ ನ ವಿದ್ಯಾರ್ಥಿನಿ ಕೆ.ಎಂ.ಚಿನ್ಮಯಿಯನ್ನು ವಿರಕ್ತ ಮಠದ ಶ್ರೀಗಳು ಗೌರವಿಸಿದರು.

Share this article