ಕೋರ್ಟ್‌ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್‌ ಸಂಪರ್ಕ ಕಡಿತ

Published : Jul 01, 2025, 12:11 PM IST
Chinnaswamy Stadium

ಸಾರಾಂಶ

ಅಗ್ನಿ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೂ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ನೀಡಿದ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಗೆ (ಬೆಸ್ಕಾಂ) ಹೈಕೋರ್ಟ್‌ ತೀವ್ರ ತರಾಟೆ 

 ಬೆಂಗಳೂರು :  ಅಗ್ನಿ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೂ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ನೀಡಿದ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಗೆ (ಬೆಸ್ಕಾಂ) ಹೈಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇದರ ಬೆನ್ನಲ್ಲೇ ಬೆಸ್ಕಾಂ ವಿದ್ಯುತ್‌ ಸಂಪರ್ಕ ಕಡಿತ ಮಾಡಿದೆ.

ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಂಬಂಧ ಬೆಸ್ಕಾಂ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಕ್ರೀಡಾಂಗಣ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ತಕರಾರು ಅರ್ಜಿ ಸಲ್ಲಿಸಿತ್ತು.

ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಪೀಠ, ‘ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳದಿದ್ದರೂ ಬೆಸ್ಕಾಂ ಹೇಗೆ ವಿದ್ಯುತ್‌ ಸಂಪರ್ಕ ನೀಡಿದೆ. ಕೆಎಸ್‌ಸಿಎ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಕ್ರೀಡಾಂಗಣ ಕತ್ತಲಲ್ಲಿ ಇರಲಿ ಬಿಡಿ’ ಎಂದು ಖಾರವಾಗಿ ನುಡಿಯಿತು.

ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡಿಲ್ಲ ಎಂಬ ಕಾರಣದಿಂದ ನೋಟಿಸ್ ನೀಡಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಬಳಿಕ ಮತ್ತೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಏಕೆ? ನಿರಾಕ್ಷೇಪಣಾ ಪತ್ರ ಇಲ್ಲದಿದ್ದರೂ ವಿದ್ಯುತ್‌ ಸಂಪರ್ಕ ನೀಡಿರುವ ತಪ್ಪಿಗೆ ಸಂಪೂರ್ಣವಾಗಿ ಬೆಸ್ಕಾಂ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತು.

ಹೈಕೋರ್ಟ್‌ ಚಾಟಿ ಬೀಡಿದ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಬೆಸ್ಕಾಂ ಸಿಬ್ಬಂದಿ ಈ ಹಿಂದೆ ನೀಡಿದ್ದ ನೋಟಿಸ್‌ ಆಧಾರದ ಮೇಲೆ ಸೋಮವಾರ ವಿದ್ಯುತ್‌ ಕಡಿತ ಮಾಡಿದ್ದಾರೆ.

ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಇಂದಿರಾನಗರ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌, ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆ ಮಹಾ ನಿರ್ದೇಶಕರ ಪತ್ರದ ಹಿನ್ನೆಲೆಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದೇವೆ ಎಂದರು.

ಏನಿದು ಪ್ರಕರಣ?:

ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಳ್ಳದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀಡಲಾದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆ ಮಹಾ ನಿರ್ದೇಶಕರು 2025ರ ಜೂ.10ರಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಜೂ.12ರಂದು ಬೆಸ್ಕಾಂ ಕೆಎಸ್‌ಸಿಎಗೆ ವಿದ್ಯುತ್ ಸಂಪರ್ಕ ಕಡಿತದ ಏಳು ದಿನಗಳ ನೋಟಿಸ್ ಜಾರಿಗೊಳಿಸಿತ್ತು. ಜತೆಗೆ ಏಳನೇ ದಿನ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಿತ್ತು.

ಆದರೆ, ಕೆಎಸ್‌ಸಿಎ ಮನವಿ ಮೇರೆಗೆ ಏಳು ದಿನಗಳ ಬದಲಿಗೆ ಹದಿನೈದು ದಿನ ಕಾಲಾವಕಾಶ ನೀಡಿ ವಿದ್ಯುತ್‌ ಸಂಪರ್ಕ ಮರು ಸ್ಥಾಪಿಸಿತ್ತು.

ಇದರ ನಡುವೆಯೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಕುರಿತು ಬೆಸ್ಕಾಂ ನೀಡಿರುವ ನೋಟಿಸ್‌ ಪ್ರಶ್ನಿಸಿ ಕ್ರಿಕೆಟ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ವೇಳೆ ಬೆಸ್ಕಾಂ ವಿರುದ್ಧ ಸಿಟ್ಟಾದ ನ್ಯಾಯಪೀಠ, ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ನಂತರ ಮತ್ತೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಹೇಗೆ? ಅವಘಡ ಸಂಭವಿಸಿದರೆ ಹೊಣೆ ಯಾರು? ತರಾಟೆಗೆ ತೆಗೆದುಕೊಂಡು ಜು.15ಕ್ಕೆ ವಿಚಾರಣೆ ಮುಂದೂಡಿದೆ. ಇದರ ನಡುವೆ ಸೋಮವಾರ ಸಂಜೆಯೇ ಬೆಸ್ಕಾಂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ.

PREV
Read more Articles on

Recommended Stories

ಮಹಿಳಾ ವಿಶ್ವಕಪ್‌ : ದ.ಆಫ್ರಿಕಾಗೆ ಮಣಿದ ಕಿವೀಸ್‌ - 231ಕ್ಕೆ ಆಲೌಟ್‌
ರಣಜಿ: ರಾಜ್ಯಕ್ಕೆ ಮಯಾಂಕ್ ಸಾರಥ್ಯ, ಕರುಣ್‌ ಕಮ್‌ಬ್ಯಾಕ್