ಗ್ರಾಸ್ ಐಲೆಟ್: ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಡೇವಿಡ್ ವಾರ್ನರ್‌ರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಮುಕ್ತಾಯಗೊಂಡಿದೆ. ಭಾರತ ವಿರುದ್ಧದ ಸೂಪರ್-8 ಪಂದ್ಯವೇ ಅವರು ಆಡಿದ ಕೊನೆಯ ಅಂ.ರಾ. ಪಂದ್ಯ. ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದ ಕಾರಣ, ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಹೊರಬಿತ್ತು. ಇದರೊಂದಿಗೆ 37 ವರ್ಷದ ವಾರ್ನರ್‌ರ ಆಟಕ್ಕೂ ತೆರೆಬಿತ್ತು.2009ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಾರ್ನರ್, 2023ರ ವಿಶ್ವಕಪ್ ಫೈನಲ್ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ವಾರ್ನರ್, ಈ ವರ್ಷ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಟಿ20 ವಿಶ್ವಕಪ್ ಬಳಿಕ ಅಂ.ರಾ. ಕ್ರಿಕೆಟ್‌ಗೆ ಗುಡ್‌ಬೈ ಹೇಳುವುದಾಗಿ ಅವರು ಮೊದಲೇ ಘೋಷಿಸಿದ್ದರು. ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿರುವ ವಾರ್ನರ್, ಅತಿಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾ ಆಟಗಾರ ಎನಿಸಿದ್ದಾರೆ. 110 ಪಂದ್ಯಗಳಲ್ಲಿ 3277 ರನ್ ಕಲೆಹಾಕಿರುವ ಅವರು, 1 ಶತಕ, 28 ಅರ್ಧಶತಕ ದಾಖಲಿಸಿದ್ದಾರೆ.