ಮುಂಬೈ: ರಣಜಿ ಟ್ರೋಫಿಯ ರಾಜ ಎಂದೇ ಕರೆಸಿಕೊಳ್ಳುವ 41 ಬಾರಿ ಚಾಂಪಿಯನ್ ಮುಂಬೈ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. 2 ಬಾರಿ ಚಾಂಪಿಯನ್ ವಿದರ್ಭ ವಿರುದ್ಧ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಮುಂಬೈ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದೆ. ವಿದರ್ಭಕ್ಕೆ ದೊಡ್ಡ ಗುರಿ ನೀಡಿದ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯಲ್ಲಿದೆ.ಮುಂಬೈನ 224 ರನ್‌ಗೆ ಉತ್ತರವಾಗಿ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 105 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಮುಂಬೈ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 141 ರನ್ ಗಳಿಸಿದ್ದು, ಒಟ್ಟು 260 ರನ್ ಮುನ್ನಡೆಯಲ್ಲಿದೆ.ಬ್ಯಾಟಿಂಗ್ ವೈಫಲ್ಯ: ಮೊದಲ ದಿನದಂತ್ಯಕ್ಕೆ 31ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ವಿದರ್ಭ ಸೋಮವಾರವೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡದ ಯಾರೊಬ್ಬರೂ ವೈಯಕ್ತಿಕ ಮೊತ್ತ 30ಕ್ಕಿಂತ ಹೆಚ್ಚು ಗಳಿಸಲಿಲ್ಲ. ಯಶ್ ರಾಥೋಡ್ 27 ರನ್ ಬಾರಿಸಿದರು. ತಂಡ 45.3 ಓವರ್‌ಗಳಲ್ಲೇ ಇನ್ನಿಂಗ್ಸ್ ಕೊನೆಗೊಳಿಸಿತು. ಮುಂಬೈನ ಅನುಭವಿಗಳಾದ ಧವಲ್ ಕುಲ್ಕರ್ಣಿ, ಶಮ್ಸ್ ಮುಲಾನಿ ಹಾಗೂ ತನುಶ್ ಕೋಟ್ಯಾನ್ ತಲಾ 3 ವಿಕೆಟ್ ಪಡೆದರು.ಮುಶೀರ್, ಅಜಿಂಕ್ಯಾ ಫಿಫ್ಟಿ: 119 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ ಆರಂಭಿಕ ಆಘಾತಕ್ಕೊಳಗಾಯಿತು. ಪೃಥ್ವಿ ಶಾ(11), ಭೂಪೇಶ್ ಲಲ್ವಾನಿ(18) ಬೇಗನೇ ನಿರ್ಗಮಿಸಿದರು. ಆದರೆ ಮುರಿಯದ 3ನೇ ವಿಕೆಟ್‌ಗೆ ಜೊತೆಯಾಗಿರುವ ನಾಯಕ ಅಜಿಂಕ್ಯಾ ರಹಾನೆ ಹಾಗೂ ಮುಶೀರ್ ಖಾನ್ 107 ರನ್ ಜೊತೆಯಾಟವಾಡಿ ವಿದರ್ಭಕ್ಕೆ ದುಸ್ವಪ್ನವಾಗಿ ಕಾಡಿದರು. ರಹಾನೆ(ಔಟಾಗದೆ 58), ಮುಶೀರ್(ಔಟಾಗದೆ 51) ಕ್ರೀಸ್‌ನಲ್ಲಿದ್ದು, ವಿದರ್ಭಕ್ಕೆ ದೊಡ್ಡ ಗುರಿ ನೀಡಲು ಹೋರಾಡುತ್ತಿದ್ದಾರೆ.ಸ್ಕೋರ್: ಮುಂಬೈ 224/10 ಮತ್ತು 141/2(2ನೇ ದಿನದಂತ್ಯಕ್ಕೆ) (ರಹಾನೆ 58*, ಮುಶೀರ್ 51*, ಯಶ್ 1-25), ವಿದರ್ಭ 105/10(ಯಶ್ ರಾಥೋಡ್ 27, ತನುಶ್ 3-7, ಕುಲ್ಕರ್ಣಿ 3-15, ಶಮ್ಸ್ 3-32)