ಮಹಿಳಾ ಏಷ್ಯಾಕಪ್‌ ಟಿ20 ಶುರು: ಇಂದು ಭಾರತ vs ಪಾಕಿಸ್ತಾನ ಫೈಟ್‌ -ಶ್ರೀಲಂಕಾ ಆತಿಥ್ಯ, 8 ತಂಡಗಳು ಭಾಗಿ

KannadaprabhaNewsNetwork |  
Published : Jul 19, 2024, 12:47 AM ISTUpdated : Jul 19, 2024, 04:28 AM IST
ಏಷ್ಯಾಕಪ್‌ ಟಿ20  | Kannada Prabha

ಸಾರಾಂಶ

ಶ್ರೀಲಂಕಾ ಆತಿಥ್ಯ, 8 ತಂಡಗಳು ಭಾಗಿ. 7 ಬಾರಿ ಚಾಂಪಿಯನ್‌ ಭಾರತವೇ ಈ ಸಲವೂ ಪ್ರಶಸ್ತಿ ಗೆಲ್ಲುವ ಫೇವರಿಟ್‌. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸಹ ರೇಸ್‌ನಲ್ಲಿವೆ.

ದಾಂಬುಲಾ: 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್‌ಗೆ ಶುಕ್ರವಾರ ಚಾಲನೆ ಸಿಗಲಿದ್ದು, ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ 8 ತಂಡಗಳು ಕಣಕ್ಕಿಳಿಯಲಿವೆ. ಹಾಲಿ ಹಾಗೂ 7 ಬಾರಿ ಚಾಂಪಿಯನ್‌ ಭಾರತವೇ ಈ ಸಲವೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದು, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸಹ ರೇಸ್‌ನಲ್ಲಿವೆ. ಈ ವರೆಗೂ ನಡೆದಿರುವ ಏಕದಿನ ಮಾದರಿಯಲ್ಲಿ ನಾಲ್ಕಕ್ಕೆ ನಾಲ್ಕು, ಟಿ20 ಮಾದರಿಯಲ್ಲಿ ನಾಲ್ಕರಲ್ಲಿ ಮೂರು ಆವೃತ್ತಿಗಳನ್ನು ಭಾರತ ಗೆದ್ದುಕೊಂಡಿದೆ. 

2024ರ ಏಷ್ಯಾಕಪ್‌ ಅನ್ನು ತಂಡಗಳು ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಸಿದ್ಧತೆಗೆ ಬಳಸಿಕೊಳ್ಳಲಿವೆ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಜೊತೆ ಯುಎಇ, ಥಾಯ್ಲೆಂಡ್‌, ಮಲೇಷ್ಯಾ ಹಾಗೂ ನೇಪಾಳ ತಂಡಗಳು ಸಹ ಸೆಣಸಲಿವೆ.

ಭರ್ಜರಿ ಲಯದಲ್ಲಿ ಭಾರತ

ಭಾರತ ತಂಡ ಈ ಟೂರ್ನಿಗೆ ಉತ್ತಮ ಸಿದ್ಧತೆ ನಡೆಸಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ದ.ಆಫ್ರಿಕಾ ವಿರುದ್ಧ 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡ ಭಾರತ ಅದಕ್ಕೂ ಮೊದಲು ಬಾಂಗ್ಲಾ ಪ್ರವಾಸ ಕೈಗೊಂಡು, ಆ ತಂಡವನ್ನು 5-0ಯಲ್ಲಿ ಸೋಲಿಸಿತ್ತು. ಸ್ಮೃತಿ ಮಂಧನಾ ಉತ್ಕೃಷ್ಟ ಲಯದಲ್ಲಿದ್ದು, ಸ್ಪಿನ್‌ ವಿಭಾಗ ಬಲಿಷ್ಠವಾಗಿದೆ. ಪೂಜಾ ವಸ್ತ್ರಾಕರ್‌ ವೇಗದ ಬೌಲಿಂಗ್‌ ಟ್ರಂಪ್‌ಕಾರ್ಡ್‌ ಆಗಿ ರೂಪುಗೊಂಡಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಉತ್ತಮ ಲಯ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಭಾರತದ ಮೊದಲ ಎದುರಾಳಿ ಪಾಕಿಸ್ತಾನ 2023ರ ಏಪ್ರಿಲ್‌ನಿಂದೀಚೆಗೆ 19 ಟಿ20 ಪಂದ್ಯಗಳನ್ನಾಡಿದ್ದು, ಕೇವಲ 7ರಲ್ಲಿ ಗೆದ್ದಿದೆ. ತಂಡ ಸ್ಥಿರ ಪ್ರದರ್ಶನ ತೋರಲು ತಿಣುಕಾಡುತ್ತಿದೆ.

ಟೂರ್ನಿ ನಡೆದು ಬಂದ ಹಾದಿ

20 ವರ್ಷಗಳ ಹಿಂದೆ ಮೊದಲ ಆವೃತ್ತಿ ನಡೆದಾಗ ಕೇವಲ ಭಾರತ ಹಾಗೂ ಶ್ರೀಲಂಕಾ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಿದ್ದವು. ಭಾರತ 5-0ಯಲ್ಲಿ ಗೆದ್ದು ಏಷ್ಯಾ ಚಾಂಪಿಯನ್‌ ಆಗಿತ್ತು. 2005ರಲ್ಲಿ ಕರಾಚಿಯಲ್ಲಿ ನಡೆದ 2ನೇ ಆವೃತ್ತಿಯಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಸ್ಪರ್ಧಿಸಿತ್ತು. 2008ರಲ್ಲಿ ನಡೆದ 4ನೇ ಆವೃತ್ತಿಯಲ್ಲಿ ಬಾಂಗ್ಲಾದೇಶ ಪಾದಾರ್ಪಣೆ ಮಾಡಿತು.

2012ರಲ್ಲಿ ಏಷ್ಯಾಕಪ್‌ ಅನ್ನು ಟಿ20 ಮಾದರಿಗೆ ಬದಲಿಸಲಾಯಿತು. ಆ ವರ್ಷ ಮೊದಲ ಬಾರಿಗೆ 8 ತಂಡಗಳು ಆಡಿದವು. ಚೀನಾ, ಹಾಂಕಾಂಗ್‌, ಥಾಯ್ಲೆಂಡ್‌ ಹಾಗೂ ನೇಪಾಳ ಮೊದಲ ಬಾರಿಗೆ ಸ್ಪರ್ಧೆಗಿಳಿದವು. ಮೊದಲ 6 ಆವೃತ್ತಿಗಳಲ್ಲಿ ಭಾರತವೇ ಚಾಂಪಿಯನ್‌ ಆಗಿತ್ತು.

2018ರಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ಭಾರತಕ್ಕೆ ಆಘಾತ ನೀಡಿ, ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯಿತು. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಟೂರ್ನಿ 2022ರಲ್ಲಿ ಪುನಾರಂಭಗೊಂಡಾಗ, ಮತ್ತೆ ಭಾರತ ಪ್ರಶಸ್ತಿ ಜಯಿಸಿತು.

ಇಂದಿನ ಪಂದ್ಯಗಳು

ನೇಪಾಳ vs ಯುಎಇ, ಮಧ್ಯಾಹ್ನ 2ಕ್ಕೆ, ಭಾರತ vs ಪಾಕಿಸ್ತಾನ, ಸಂಜೆ 7ಕ್ಕೆ. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ ಸ್ಟಾರ್‌

ಟೂರ್ನಿ ಮಾದರಿ ಹೇಗೆ? 

8 ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ , ಪಾಕಿಸ್ತಾನ, ಯುಎಇ ಹಾಗೂ ನೇಪಾಳ ತಂಡಗಳಿದ್ದು, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಹಾಗೂ ಥಾಯ್ಲೆಂಡ್‌ ತಂಡಗಳಿವೆ. ಗುಂಪಿನಲ್ಲಿ ಪ್ರತಿ ತಂಡ 3 ಪಂದ್ಯ ಆಡಲಿದ್ದು, ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮೀಸ್‌ಗೇರಲಿವೆ. ಜು.26ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜು.28ಕ್ಕೆ ಫೈನಲ್‌ ನಿಗದಿಯಾಗಿದೆ. ಭಾರತದ 

ವೇಳಾಪಟ್ಟಿದಿನಾಂಕಎದುರಾಳಿಜು.19ಪಾಕಿಸ್ತಾನಜು.21ಯುಎಇಜು.23ನೇಪಾಳ

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ