;Resize=(412,232))
ದುಬೈ: ಏಷ್ಯಾಕಪ್ ಫೈನಲ್ ಪಂದ್ಯ ರೋಚಕವಾಗಿ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಭಾರೀ ಹೈಡ್ರಾಮಾದೊಂದಿಗೆ ಕೂಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ, ಪಾಕ್‌ನ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತು.
ನಖ್ವಿ ಹಾಗೂ ಇನ್ನಿತರ ಗಣ್ಯರು ವೇದಿಕೆ ಮೇಲೆ ಬಂದು ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯ ಆಟಗಾರರು ವೇದಿಕೆಯಿಂದ 15-20 ಅಡಿ ದೂರದಲ್ಲಿ ನಿಂತು ಪ್ರತಿರೋಧ ವ್ಯಕ್ತಪಡಿಸಿದರು. ಇನ್ನು ಪಾಕಿಸ್ತಾನಿ ಆಟಗಾರರು ಡ್ರೆಸ್ಸಿಂಗ್ ಕೋಣೆ ಬಿಟ್ಟು ಹೊರಗೇ ಬರಲಿಲ್ಲ. ಒಂದು ಹಂತದಲ್ಲಿ ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಯಿತು. ಪ್ರಶಸ್ತಿ ವಿತರಣಾ ಸಮಾರಂಭ ನಡೆಯತ್ತೋ ಇಲ್ಲವೋ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ.
ಕೊನೆಗೆ ಪಂದ್ಯದ ಮುಗಿದ 55 ನಿಮಿಷಗಳ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಆರಂಭಗೊಂಡಿತು. ವೇದಿಕೆ ಮೇಲೆ ನಖ್ವಿ ಸೇರಿ ಹಲವು ಗಣ್ಯರು ಇದ್ದರು. ಆದರೆ ಭಾರತ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಇನ್ನಿತರ ಗಣ್ಯರಿಂದ ಸ್ವೀಕರಿಸಿತು. ಆದರೆ ನಖ್ವಿಯಿಂದ ಟ್ರೋಫಿ ಪಡೆಯಲಿಲ್ಲ. ‘ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ’ ಎಂದು ತಿಳಿಸಿ ನಿರೂಪಕ ಸೈಮನ್ ಡೂಲ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೊನೆಗೊಳಿಸಿದರು.
ಚೆಕ್ ಬಿಸಾಡಿದ ಪಾಕ್ ನಾಯಕ!
ರನ್ನರ್-ಅಪ್ ಬಹುಮಾನ ಪಡೆಯಲು ಪಾಕಿಸ್ತಾನಿ ಆಟಗಾರರನ್ನು ವೇದಿಕೆ ಮೇಲೆ ಕರೆಯಲಾಯಿತು. ಒಲ್ಲದ ಮನಸಿನಿಂದಲೇ ಪಾಕ್ ಆಟಗಾರರು ವೇದಿಕೆಗೆ ಬಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಖ್ಯಸ್ಥರಿಂದ ಬಹುಮಾನ ಸ್ವೀಕರಿಸಿದರು. ಕೊನೆಯಲ್ಲಿ ನಾಯಕ ಸಲ್ಮಾನ್ ಅಲಿ ಅಘ ಚೆಕ್ ಸ್ವೀಕರಿಸಿ ಅದನ್ನು ವೇದಿಕೆ ಮೇಲೆಯೇ ಎಸೆದು ಹೊರನಡೆದರು.
ಮೋದಿ, ಮೋದಿ ಕೂಗು!
ಪಾಕ್ ಆಟಗಾರರು ಬಹುಮಾನ ಸ್ವೀಕರಿಸಲು ವೇದಿಕೆಗೆ ಕಾಲಿಡುತ್ತಿದ್ದಂತೆ ಸ್ಟ್ಯಾಂಡ್ಸ್‌ನಲ್ಲಿದ್ದ ಭಾರತೀಯ ಅಭಿಮಾನಿಗಳು ‘ಮೋದಿ.. ಮೋದಿ’ ಎಂದು ಕೂಗಿ, ಪಾಕ್ ಆಟಗಾರರನ್ನ ಕಿಚ್ಚಾಯಿಸಿದರು.