ದುಬೈ: ಅನೌಪಚಾರಿಕ ಎನಿಸಿದ್ದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾಕಪ್ ಸೂಪರ್-4 ಪಂದ್ಯ ರೋಚಕವಾಗಿ ಅಂತ್ಯಗೊಂಡಿತು. ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪಂದ್ಯವೊಂದು ದೊಡ್ಡ ಮೊತ್ತಕ್ಕೆ ಸಾಕ್ಷಿಯಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್‌ಗೆ 202 ರನ್ ಕಲೆಹಾಕಿದರೆ, ಪಥುಂ ನಿಸ್ಸಾಂಕರ ಅಮೋಘ ಶತಕದ ನೆರವಿನಿಂದ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಟೈಗೆ ತೃಪ್ತಿಪಟ್ಟು ಬಳಿಕ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಸೋಲಿಗೆ ಶರಣಾಯಿತು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಕಾಲಿಟ್ಟಿತು. ಭಾರತಕ್ಕೆ ಅಭಿಷೇಕ್ ಶರ್ಮಾ ಮತ್ತೊಮ್ಮೆ ಸ್ಫೋಟಕ ಆರಂಭ ಒದಗಿಸಿದರು. ಪವರ್-ಪ್ಲೇನಲ್ಲಿ 71 ರನ್ ಕಲೆಹಾಕಿದ ಭಾರತ, 10 ಓವರಲ್ಲಿ 100 ರನ್ ದಾಖಲಿಸಿತು.
31 ಎಸೆತದಲ್ಲಿ 61 ರನ್ ಸಿಡಿಸಿ ಅಭಿಷೇಕ್ ಔಟಾದ ಬಳಿಕ ತಿಲಕ್ ವರ್ಮಾ ಔಟಾಗದೆ 49, ಸ್ಯಾಮ್ಸನ್ 39, ಅಕ್ಷರ್ ಔಟಾಗದೆ 21 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಿಸ್ಸಾಂಕ ಹಾಗೂ ಕುಸಾಲ್ ಪೆರೇರಾ ಅಬ್ಬರಿಸಿದ ರೀತಿ ನೋಡಿದಾಗ, ಲಂಕಾ ಸುಲಭವಾಗಿ ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. 8.5 ಓವರಲ್ಲಿ 100 ರನ್ ಕಲೆಹಾಕಿದ ಲಂಕಾಕ್ಕೆ ಕೊನೆ 10 ಓವರಲ್ಲಿ ಗೆಲ್ಲಲು 89 ರನ್ ಬೇಕಿತ್ತು. 13ನೇ ಓವರಲ್ಲಿ ವರುಣ್ ಚಕ್ರವರ್ತಿ ಪೆರೇರಾ (58)ರನ್ನು ಪೆವಿಲಿಯನ್‌ಗಟ್ಟಿದರು. ಕುಲ್ದೀಪ್ ರನ್ ನಿಯಂತ್ರಿಸುವುದರ ಜೊತೆಗೆ ಅಸಲಂಕಾರ ವಿಕೆಟ್ ಕಬಳಿಸಿದರು. 12ನೇ ಓವರ್‌ನಿಂದ 17ನೇ ಓವರ್‌ನ ಕೊನೆ ಎಸೆತದ ನಡುವೆ ಲಂಕಾ ಗಳಿಸಿದ್ದು ಕೇವಲ 2 ಬೌಂಡರಿ. ಹೀಗಾಗಿ ಅಗತ್ಯ ರನ್‌ರೇಟ್ ಏರಿತು. 17ನೇ ಓವರ್‌ನ ಕೊನೆ ಎಸೆತದಲ್ಲಿ ನಿಸ್ಸಾಂಕ ಶತಕ ಪೂರೈಸಿದರು.
ನಿಸ್ಸಾಂಕ ಜತೆ ಸೇರಿದ ಶಾನಕ ಲಂಕಾವನ್ನು ಗೆಲುವಿನ ದಡ ಸೇರಿಸುವ ವಿಶ್ವಾಸದಲ್ಲಿದ್ದರು. ಕೊನೆ 2 ಓವರಲ್ಲಿ ಲಂಕಾಕ್ಕೆ ಗೆಲ್ಲಲು 23 ರನ್ ಬೇಕಿತ್ತು. 19ನೇ ಓವರಲ್ಲಿ ಅರ್ಶ್‌ದೀಪ್ 11 ರನ್ ನೀಡಿದರು. ಕೊನೆ ಓವರಲ್ಲಿ 12 ರನ್ ಬೇಕಿದ್ದಾಗ ನಿಸ್ಸಾಂಕ ಮೊದಲ ಎಸೆತದಲ್ಲೇ ಔಟಾದರು. 58 ಎಸೆತದಲ್ಲಿ 107 ರನ್ ಸಿಡಿಸಿದರು. ಆದರೆ ಲಂಕಾ ಹಾಗೂ ಹೀಗೂ ಪಂದ್ಯವನ್ನು ಟೈ ಮಾಡಿಕೊಂಡಿತು. ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ಲಂಕಾ ಪೆರೇರಾ ವಿಕೆಟ್ ಕಳೆದುಕೊಂಡಿತು. ಅರ್ಶ್‌ದೀಪ್ ಲಂಕಾವನ್ನು ಕೇವಲ 2 ರನ್‌ಗೆ ಕಟ್ಟಿಹಾಕಿದರು. ಗಿಲ್ ಜೊತೆ ಕಣಕ್ಕಿಳಿದ ಸೂರ್ಯಕುಮಾರ್ ಮೊದಲ ಎಸೆತದಲ್ಲೇ 3 ರನ್ ಕದ್ದು ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಭಾರತ 202/5 (ಅಭಿಷೇಕ್ 61, ತಿಲಕ್ 49*, ತೀಕ್ಷಣ 1-36), ಶ್ರೀಲಂಕಾ 202/5 (ನಿಸ್ಸಾಂಕ 107, ಪೆರೇರಾ 58, ಕುಲ್ದೀಪ್ 1-31, ವರುಣ್ 1-31)
== ಭಾರತಕ್ಕೆ ಅದೃಷ್ಟದ ಟೈ? ವಿಶ್ವಕಪ್ ಅಥವಾ ಏಷ್ಯಾಕಪ್‌ನಲ್ಲಿ ತಾನಾಡಿದ ಪಂದ್ಯಗಳು ಟೈ ಆದಾಗ, ಭಾರತ ಚಾಂಪಿಯನ್ ಆಗಿದೆ. 2007ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ, 2011ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, 2018ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯ ಟೈ ಆದಾಗ ಭಾರತ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ಭಾರತಕ್ಕೆ ಅದೃಷ್ಟ ಒಲಿಯುತ್ತಾ ಎನ್ನುವುದು ಭಾನುವಾರ ತಿಳಿಯಲಿದೆ.