ಟೊರೊಂಟೊ(ಕೆನಡಾ): ವಿಶ್ವ ಚಾಂಪಿಯನ್‌ಶಿಪ್ ಪಟ್ಟದ ಸೆಮಿಫೈನಲ್ ಎಂಬಂತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ 13ನೇ ಸುತ್ತಿನ ಬಳಿಕ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟೂರ್ನಿಯಲ್ಲಿ ಇನ್ನೊಂದೇ ಸುತ್ತಿನ ಪಂದ್ಯ ಬಾಕಿ ಇದ್ದು, ಗುಕೇಶ್ ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದ್ದಾರೆ.
ಶನಿವಾರ ಮಧ್ಯರಾತ್ರಿ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ 17ರ ಗುಕೇಶ್ ಫ್ರಾನ್ಸ್‌ನ ಫಿರೌಜಾ ಅಲಿರೆಜಾ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ ಅಂಕ ಗಳಿಕೆಯನ್ನು 8.5ಕ್ಕೆ ಹೆಚ್ಚಿಸಿದ ಗುಕೇಶ್, ಸಹ ಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡರು.
ಅತ್ತ ರಷ್ಯಾದ ಇಯಾನ್ ನೆಪೊಮ್ನಿಯಾಚಿ, ಅಮೆರಿಕದ ಫ್ಯಾಬಿಯಾನೊ ಕರುನಾ ಹಾಗೂ ಹಿಕರು ನಕಮುರಾ ತಲಾ 8 ಅಂಕಗಳನ್ನು ಹೊಂದಿದ್ದು, ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಕೊನೆ ಸುತ್ತಿನಲ್ಲಿ ಗುಕೇಶ್‌ಗೆ ನಕಮುರಾ ಸವಾಲು ಎದುರಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಫ್ಯಾಬಿಯಾನೊ-ನೆಪೊಮ್ನಿಯಾಚಿ ಮುಖಾಮುಖಿಯಾಗಲಿದ್ದಾರೆ.ಇದೇ ವೇಳೆ ಆರ್.ಪ್ರಜ್ಞಾನಂದ, ವಿದಿತ್ ಗುಜರಾತಿ ತಲಾ 6 ಅಂಕದೊಂದಿಗೆ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಹಾಗೂ ಸತತ 4 ಜಯ ದಾಖಲಿಸಿದ ಆರ್.ವೈಶಾಲಿ ಇಬ್ಬರೂ 6.5 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದಾರೆ.
ಟೈ ಆದರೆ ಟೈ ಬ್ರೇಕರ್
ಮುಕ್ತ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಭಾರಿ ಪೈಪೋಟಿ ಇದ್ದು, ಆಟಗಾರರು ಟೈ ಸಾಧಿಸುವ ಸಾಧ್ಯತೆಯಿದೆ. 8.5 ಅಂಕ ಹೊಂದಿರುವ ಗುಕೇಶ್ ಕೊನೆ ಸುತ್ತಿನಲ್ಲಿ ಗೆದ್ದರೆ ಚಾಂಪಿಯನ್ ಎನಿಸಿಕೊಳ್ಳಲಿದ್ದಾರೆ. ಸೋತರೆ ಪ್ರಶಸ್ತಿ ಕೈ ತಪ್ಪಲಿದೆ. ಒಂದು ವೇಳೆ ಗುಕೇಶ್ ಡ್ರಾ ಸಾಧಿಸಿ, ಅತ್ತ ಫ್ಯಾಬಿಯಾನೊ(8 ಅಂಕ) ಹಾಗೂ ನೆಪೊಮ್ನಿಯಾಚಿ(8 ಅಂಕ) ಪಂದ್ಯದಲ್ಲಿ ಯಾರಾದರು ಗೆದ್ದರೆ, ಇಬ್ಬರಲ್ಲಿ ಒಬ್ಬರ ಅಂಕ ಗುಕೇಶ್ ಜೊತೆ ಟೈ ಆಗಲಿದೆ. ಆಗ ಟೈ ಬ್ರೇಕರ್‌ನಲ್ಲಿ 2 ರ್‍ಯಾಪಿಡ್ ಗೇಮ್(15 ನಿಮಿಷಗಳ ಪಂದ್ಯ) ನಡೆಯಲಿದೆ. ಅದರಲ್ಲೂ ಟೈ ಆದರೆ ಇಬ್ಬರ ನಡುವೆ 2 ಬ್ಲಿಟ್ಜ್ ಗೇಮ್ (3 ನಿಮಿಷಗಳ ಪಂದ್ಯ) ನಡೆಯಲಿದೆ.
ಗೆದ್ದರೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಫೈಟ್
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆಲ್ಲುವವರು ಹಾಲಿ ವಿಶ್ವ ಚಾಂಪಿಯನ್(ಚೀನಾದ ಡಿಂಗ್ ಲಿರೆನ್) ಜೊತೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ. ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡಲಿರುವ ವಿಶ್ವ ಅತಿ ಕಿರಿಯ ಆಟಗಾರ ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ.