ನ್ಯೂಜಿಲೆಂಡ್ ವಿರುದ್ಧ ಕೊನೆ ಟೆಸ್ಟ್‌ನಲ್ಲಿ ಭಾರತಕ್ಕೆ 25 ರನ್ ಸೋಲು. 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದ ಕಿವೀಸ್. ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ, 147 ರನ್ ಗುರಿ ಬೆನ್ನತ್ತಿದ್ದ ಭಾರತ 121ಕ್ಕೆ ಆಲೌಟ್. ಟೆಸ್ಟ್ ಭದ್ರಕೋಟೆ ಈಗ ನುಚ್ಚುನೂರು.
ಮುಂಬೈ: ಪುಣೆ ಟೆಸ್ಟ್ ಮೂಲಕ ಭಾರತದ ಟೆಸ್ಟ್ ಭದ್ರಕೋಟೆಯನ್ನು ಭೇದಿಸಿದ್ದ ನ್ಯೂಜಿಲೆಂಡ್, ಮುಂಬೈನಲ್ಲಿ ಆ ಕೋಟೆಯನ್ನೇ ನುಚ್ಚುನೂರು ಮಾಡಿದೆ. ತವರಿನಲ್ಲಿ ಈ ವರೆಗೂ ಟೆಸ್ಟ್ ಕ್ರಿಕೆಟ್‌ನ ‘ಹುಲಿ’ ಎಂದೇ ಕರೆಸಿಕೊಳ್ಳುತ್ತಿದ್ದ ಟೀಂ ಇಂಡಿಯಾ, ಸದ್ಯ ಐತಿಹಾಸಿಕ ವೈಟ್‌ವಾಶ್‌ಗೆ ತುತ್ತಾಗುವ ಮೂಲಕ ‘ಇಲಿ’ ಎಂಬಂತಾಗಿದೆ. ವಿದೇಶಿ ತಂಡ ಭಾರತದಲ್ಲಿ ಟೆಸ್ಟ್ ಗೆಲ್ಲಲ್ಲ, ಗೆದ್ದರೂ ಸರಣಿ ಗೆಲ್ಲೋಕೆ ಆಗಲ್ಲ ಎಂಬ ಮಾತುಗಳೆಲ್ಲಾ ಈಗ ಸುಳ್ಳಾಗಿದೆ.
ಟೆಸ್ಟ್ ಪಂದ್ಯ ಆಯ್ತು, ಸರಣಿ ಹೋಯ್ತು ಈಗ ವೈಟ್‌ವಾಶ್ ಮುಖಭಂಗಕ್ಕೂ ಭಾರತ ತುತ್ತಾಗಿದೆ.ನ್ಯೂಜಿಲೆಂಡ್ ವಿರುದ್ಧ ಭಾನುವಾರ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಭಾರತ 0-3 ಹೀನಾಯ ಸೋಲನುಭವಿಸಿತು. ಸರಣಿಯ ಕೊನೆ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 25 ರನ್‌ಗಳಿಂದ ಆಘಾತಕಾರಿ ಸೋಲನುಭವಿಸಿತು.ಬೆಂಗಳೂರಿನ ಬೌನ್ಸಿ ಪಿಚ್ ಅರ್ಥೈಸಲು ವಿಫಲವಾಗಿದ್ದ ಭಾರತ, ಪುಣೆಯ ಸ್ಪಿನ್ ಪಿಚ್‌ನಲ್ಲಿ ತನ್ನದೇ ಖೆಡ್ಡಾಕ್ಕೆ ಬಿದ್ದಿತ್ತು. ಇನ್ನೇನು ಮುಂಬೈನಲ್ಲಾದರೂ ಮಾನ ಉಳಿಸಿಕೊಳ್ಳಲಿದೆ ಅಂದುಕೊಂಡಿದ್ದರೆ ಅಲ್ಲೂ ಸೋಲು.
ಕೇವಲ 147 ರನ್ ಗುರಿ ಬೆನ್ನತ್ತಲೂ ಆಗದೆ ರೋಹಿತ್ ಪಡೆ ಸೋತು ಸುಣ್ಣವಾಗಿದೆ.ಕಿವೀಸ್‌ನ ಮೊದಲ ಇನ್ನಿಂಗ್ಸ್‌ನ 235 ರನ್‌ಗೆ ಉತ್ತರವಾಗಿ ಮೊದಲ ದಿನವೇ 86 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಶನಿವಾರ 263 ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಶುಭ್‌ಮನ್ ಗಿಲ್(90), ರಿಷಭ್ ಪಂತ್(60) ಭಾರತಕ್ಕೆ ಆಸರೆಯಾಗಿದ್ದರು. ಇಬ್ಬರ ಹೋರಾಟದಿಂದಾಗಿ ಸರಣಿಯಲ್ಲಿ ಇದೇ ಮೊದಲ ಬಾರಿ ಭಾರತ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ತಂಡಕ್ಕೆ 27 ರನ್ ಮುನ್ನಡೆ ಲಭಿಸಿತ್ತು.ಬಳಿಕ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ ಆತಿಥೇಯ ತಂಡ, ಕಿವೀಸನ್ನು 174 ರನ್‌ಗೆ ನಿಯಂತ್ರಿಸಿತು. ಜಡೇಜಾ, ಅಶ್ವಿನ್ ಸ್ಪಿನ್ ಮೋಡಿ ಭಾರತಕ್ಕೆ ನೆರವಾಯಿತು. ಹೀಗಾಗಿ ಭಾರತಕ್ಕೆ ಸಿಕ್ಕಿದ್ದು 150ಕ್ಕಿಂತಲೂ ಕಡಿಮೆ ಗುರಿ.
ದಯನೀಯ ವೈಫಲ್ಯ: ಭಾನುವಾರ ಕಿವೀಸ್‌ನ 2ನೇ ಇನ್ನಿಂಗ್ಸ್‌ನ ಕೊನೆ ವಿಕೆಟ್ ಬಿದ್ದಾಗ ಭಾರತ ಗೆಲುವಿನ ನಿರೀಕ್ಷೆಯಲ್ಲಿತ್ತು. ಸುಲಭ ಗುರಿಯನ್ನು ಸುಲಭದಲ್ಲೇ ಬೆನ್ನತ್ತಿ ವೈಟ್‌ವಾಶ್ ಮುಖಭಂಗದಿಂದ ಪಾರಾಗುವ ಕನಸಿನಲ್ಲಿತ್ತು. ಆದರೆ ಬ್ಯಾಟರ್‌ಗಳಿಗೆ ಗೆಲುವು ಬೇಕಾದಂತಿರಲಿಲ್ಲ. ಸರಣಿಯ ದಯನೀಯ ವೈಫಲ್ಯ ಮತ್ತೆ ಪ್ರದರ್ಶನಗೊಂಡಿತು. ರಿಷಭ್ ಪಂತ್ ಹೊರತುಪಡಿಸಿ ಇತರೆಲ್ಲಾ ಬ್ಯಾಟರ್‌ಗಳು ಪ್ರವಾಸಿ ತಂಡದ ಸ್ಪಿನ್ನರ್‌ಗಳ ಮುಂದೆ ಮಂಡಿಯೂರಿ ಕುಳಿತರು.
3ನೇ ಓವರ್‌ನಲ್ಲಿ ಆರಂಭಗೊಂಡ ಕುಸಿತ, 30ನೇ ಓವರ್‌ಗೂ ಮುನ್ನವೇ ಗಂಟುಮೂಟೆ ಕಟ್ಟುವಂತಾಯಿತು. ಜೈಸ್ವಾಲ್ 5, ರೋಹಿತ್ 11ಕ್ಕೆ ಔಟಾದರೆ, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್, ಸರ್ಫರಾಜ್ ಖಾನ್ ಗಳಿಕೆ ತಲಾ 1 ರನ್. ಆದರೆ ರಿಷಭ್ ಕೈಬಿಡಲಿಲ್ಲ. ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು, 57 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 64 ರನ್ ಸಿಡಿಸಿದರು. 22ನೇ ಓವರ್‌ನಲ್ಲಿ ರಿಷಭ್ ಕೂಡಾ ಪೆವಿಲಿಯನ್ ಸೇರುವುದರೊಂದಿಗೆ ಭಾರತದ ಹೋರಾಟ ಅಂತ್ಯಗೊಂಡಿತು. ವಾಷಿಂಗ್ಟನ್ ಸುಂದರ್(12), ಅಶ್ವಿನ್(08) ತಂವಡನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ತಮ್ಮ ತವರಿನಲ್ಲಿ ಮತ್ತೆ ಮಿಂಚಿದ ಅಜಾಜ್ ಪಟೇಲ್ 6 ವಿಕೆಟ್ ಕಬಳಿಸಿದರೆ, ಗ್ಲೆನ್ ಫಿಲಿಪ್ಸ್ 3 ವಿಕೆಟ್ ಕಿತ್ತು ಕಿವೀಸ್‌ಗೆ ಗೆಲುವಿನ ಉಡುಗೊರೆ ನೀಡಿದರು. ಮತ್ತೊಂದು ವಿಕೆಟ್ ಹೆನ್ರಿ ಪಾಲಾಯಿತು.
ಸ್ಕೋರ್: ನ್ಯೂಜಿಲೆಂಡ್ 235/10 ಮತ್ತು 174/10 (ಯಂಗ್ 51, ಜಡೇಜಾ 5-55, 3-63), ಭಾರತ 263/10(ಗಿಲ್ 90, ರಿಷಭ್ 60, ಅಜಾಜ್ 5-103) ಮತ್ತು 121/10 (ರಿಷಭ್ 64, ವಾಷಿಂಗ್ಟನ್ 12, ಅಜಾಜ್ 6-57, 3-42)ಪಂದ್ಯಶ್ರೇಷ್ಠ: ಅಜಾಜ್ ಪಟೇಲ್, ಸರಣಿ ಶ್ರೇಷ್ಠ: ವಿಲ್ ಯಂಗ್.
ತವರಲ್ಲಿ 0-3 ವೈಟ್‌ವಾಶ್ ಆಗಿದ್ದು ಇದೇ ಮೊದಲು!
ತವರಿನಲ್ಲಿ 93 ವರ್ಷಗಳಿಂದ ಟೆಸ್ಟ್ ಆಡುತ್ತಿರುವ ಭಾರತ ಇದೇ ಮೊದಲ ಬಾರಿಗೆ 0-3 ಅಂತರದಲ್ಲಿ ಸರಣಿ ಸೋಲು ಅನುಭವಿಸಿದೆ. ಒಟ್ಟಾರೆ ತವರಿನಲ್ಲಿ ಸರಣಿ ವೈಟ್‌ವಾಶ್ ಆಗಿದ್ದು ಇದು ಕೇವಲ 2ನೇ ಬಾರಿ. 1999-2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಸರಣಿಯನ್ನು 0-2ರಲ್ಲಿ ಸೋತಿತ್ತು.
ಅಸಾಧ್ಯ ಎನಿಸಿದ್ದನ್ನು ಸಾಧ್ಯವಾಗಿಸಿ ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದ ನ್ಯೂಜಿಲೆಂಡ್.
ಈ ಸರಣಿಗೂ ಮುನ್ನ...* 1988ರ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ಒಂದೂ ಟೆಸ್ಟ್ ಗೆದ್ದಿರಲಿಲ್ಲ. * ತನ್ನ ಕ್ರಿಕೆಟ್ ಇತಿಹಾಸದಲ್ಲೇ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರಲಿಲ್ಲ.*ಭಾರತ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದು ಬೀಗುತ್ತಿತ್ತು. ಬೇರ್ಯಾವುದೇ ತಂಡ ತವರಲ್ಲಿ ಸತತ 10ಕ್ಕಿಂತ ಹೆಚ್ಚು ಟೆಸ್ಟ್ ಸರಣಿ ಗೆದ್ದಿಲ್ಲ * ಐಸಿಸಿ ರ್‍ಯಾಂಕಿಂಗ್‌ನಲ್ಲಿ ಭಾರತ ನಂ.1 ಸ್ಥಾನದಲ್ಲಿತ್ತು. ನ್ಯೂಜಿಲೆಂಡ್ ಅಗ್ರ-5ರಲ್ಲೂ ಇರಲಿಲ್ಲ. * 2008ರ ಬಳಿಕ ಭಾರತೀಯ ಉಪಖಂಡದಲ್ಲಿ ನ್ಯೂಜಿಲೆಂಡ್ ಒಂದೂ ಟೆಸ್ಟ್ ಗೆದ್ದಿರಲಿಲ್ಲ. 2018ರಲ್ಲಿ ಏಷ್ಯಾದಲ್ಲೇ ಒಂದೇ ಒಂದು ಪಂದ್ಯ ಗೆದ್ದಿತ್ತು. * ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ತವರಿನಚಾಚೆ ಒಂದೂ ಸರಣಿ ಗೆಲ್ಲದ ಏಕೈಕ ತಂಡ ಎನಿಸಿತ್ತು.* ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ತವರಿನಲ್ಲಿ ಆಡಿದ ಎಲ್ಲಾ ಸರಣಿಗಳನ್ನು ಗೆದ್ದ ಏಕೈಕ ತಂಡ ಎನಿಸಿದ್ದ ಭಾರತ.
ಭಾರತವನ್ನು 0-3 ವೈಟ್‌ವಾಶ್ ಮಾಡಿದ 4ನೇ ತಂಡ ಕಿವೀಸ್!
ಭಾರತವನ್ನು 3ಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ 0-3 ವೈಟ್‌ವಾಶ್ ಮಾಡಿದ 4ನೇ ತಂಡ ನ್ಯೂಜಿಲೆಂಡ್. ಈ ಮೊದಲು ಇಂಗ್ಲೆಂಡ್(4 ಬಾರಿ), ಆಸ್ಟ್ರೇಲಿಯಾ(3 ಬಾರಿ), ವೆಸ್ಟ್‌ಇಂಡೀಸ್(1 ಬಾರಿ) ಈ ಸಾಧನೆ ಮಾಡಿದೆ.
01ನೇ ಬಾರಿ: ಭಾರತ ತಂಡ ತವರಿನಲ್ಲಿ 200ಕ್ಕಿಂತ ಕಡಿಮೆ ಮೊತ್ತ ಬೆನ್ನತ್ತಲು ವಿಫಲವಾಗಿದ್ದು ಇದೇ ಮೊದಲು.
04ನೇ ಬಾರಿ: ಭಾರತ ಟೆಸ್ಟ್‌ನಲ್ಲಿ 4ನೇ ಬಾರಿ 200ಕ್ಕಿಂತ ಕಡಿಮೆ ರನ್ ಗುರಿ ಬೆನ್ನತ್ತಿ ಗೆಲ್ಲಲು ವಿಫಲವಾಯಿತು.
03ನೇ ಬ್ಯಾಟರ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 100+ ಸ್ಟ್ರೈಕ್‌ರೇಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತ 3ನೇ ಬ್ಯಾಟರ್ ರಿಷಭ್. ಸೆಹ್ವಾಗ್, ಜೈಸ್ವಾಲ್ ಕೂಡಾ ಈ ಸಾಧನೆ ಮಾಡಿದ್ದಾರೆ.
01ನೇ ಬಾರಿ: ಟೆಸ್ಟ್‌ನ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ಎಡಗೈ ಸ್ಪಿನ್ನರ್‌ಗಳು 5+ ವಿಕೆಟ್ ಪಡೆದಿದ್ದು ಇದೇ ಮೊದಲು. 1ನೇ, 3ನೇ ಇನ್ನಿಂಗ್ಸ್‌ನಲ್ಲಿ ಜಡೇಜಾ, 2 ಮತ್ತು 4ನೇ ಇನ್ನಿಂಗ್ಸ್‌ನಲ್ಲಿ ಅಜಾಜ್ 5+ ವಿಕೆಟ್ ಕಿತ್ತರು.
03ನೇ ಬೌಲರ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ 5+ ವಿಕೆಟ್ ಕಿತ್ತ 3ನೇ ಕಿವೀಸ್ ಬೌಲರ್ ಅಜಾಜ್. ವೇಟೋರಿ(2 ಬಾರಿ), ಸ್ಯಾಂಟ್ನರ್ ಇತರ ಸಾಧಕರು.
ವಾಂಖೇಡೆಯ 2 ಪಂದ್ಯದಲ್ಲಿ 25 ವಿಕೆಟ್: ಅಜಾಜ್ ದಾಖಲೆ
ಮುಂಬೈನಲ್ಲೇ ಹುಟ್ಟಿದ್ದ ಅಜಾಜ್ ಪಟೇಲ್ ತಮ್ಮ ‘ತವರು’ ಮೈದಾನದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಕ್ರೀಡಾಂಗಣವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ವಿದೇಶಿ ಬೌಲರ್ ಎಂಬ ಖ್ಯಾತಿಗೆ ಅಜಾಜ್ ಪಾತ್ರರಾಗಿದ್ದಾರೆ. ಅಜಾಜ್ ಮುಂಬೈನ ವಾಂಖೇಡೆಯಲ್ಲಿ ಕೇವಲ 2 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ನ ಇಯಾನ್ ಬೋಥಂ 22 ವಿಕೆಟ್ ಕಿತ್ತಿದ್ದರು. ಅದನ್ನು ಅಜಾಜ್ ಅಳಿಸಿ ಹಾಕಿದ್ದಾರೆ. ಬೇರೆ ಯಾವುದೇ ವಿದೇಶಿ ಬೌಲರ್‌ಗಳು, ಭಾರತದ ಯಾವುದೇ ಕ್ರೀಡಾಂಗಣದಲ್ಲಿ 20ಕ್ಕಿಂತ ಹೆಚ್ಚು ವಿಕೆಟ್ ಪಡೆದಿಲ್ಲ.
ಸರಣಿಯಲ್ಲಿ ಕಿವೀಸ್ 3 ಪಂದ್ಯ ಗೆದ್ದಿದ್ದೇ ಮೊದಲು
ನ್ಯೂಜಿಲೆಂಡ್ ತಂಡ ಇದೇ ಮೊದಲ ಬಾರಿ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ತಂಡ ಇದಕ್ಕೂ ಮುನ್ನ ತವರು ಅಥವಾ ತವರಿನಾಚೆ 3 ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಗೆದ್ದಿರಲಿಲ್ಲ.
ವರ್ಷದಲ್ಲಿ 4 ಟೆಸ್ಟ್ ಸೋಲು: 1969ರ ಬಳಿಕ ಇದೇ ಮೊದಲು
ಭಾರತ ತಂಡ ತವರಿನಲ್ಲಿ ವರ್ಷವೊಂದರಲ್ಲಿ 4 ಟೆಸ್ಟ್ ಪಂದ್ಯಗಳಲ್ಲಿ ಸೋತಿದ್ದು ಇದು 2ನೇ ಬಾರಿ. ಈ ಮೊದಲು 1969ರಲ್ಲಿ 4 ಪಂದ್ಯಗಳಲ್ಲಿ ಸೋತಿತ್ತು. ಬರೋಬ್ಬರಿ 55 ವರ್ಷಗಳ ಬಳಿಕ ಮತ್ತೆ ಕಳಪೆ ಸಾಧನೆ ಮಾಡಿದೆ. ಇನ್ನು, 1983ರಲ್ಲಿ 3 ಪಂದ್ಯಗಳನ್ನು ಸೋತಿದ್ದು ಬಿಟ್ಟರೆ ಬೇರೆ ಯಾವುದೇ ವರ್ಷ ಭಾರತ ತವರಿನಲ್ಲಿ 2ಕ್ಕಿಂತ ಹೆಚ್ಚು ಪಂದ್ಯ ಸೋತಿಲ್ಲ.