ಮೊದಲ ಟೆಸ್ಟ್‌ಗೆ ರಾಹುಲ್‌ ಫಿಟ್‌, ಕನ್ನಡಿಗ ಪಡಿಕ್ಕಲ್‌ ಕೂಡಾ ಭಾರತ ತಂಡ ಸೇರ್ಪಡೆ: ನಾಯಕ ರೋಹಿತ್‌ ಔಟ್‌

KannadaprabhaNewsNetwork |  
Published : Nov 18, 2024, 12:01 AM ISTUpdated : Nov 18, 2024, 04:28 AM IST
ರಾಹುಲ್‌ | Kannada Prabha

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿ. ಮೊಣಕೈ ನೋವಿನಿಂದ ಚೇತರಿಸಿಕೊಂಡ ಕನ್ನಡಿಗ ಕೆ.ಎಲ್‌.ರಾಹುಲ್‌. ಮೊದಲ ಟೆಸ್ಟ್‌ನಲ್ಲಿ ಆಡದಿರಲು ರೋಹಿತ್‌ ಶರ್ಮಾ ನಿರ್ಧಾರ. ದೇವದತ್‌ ಪಡಿಕ್ಕಲ್‌ ಮೀಸಲು ಆಟಗಾರನಾಗಿ ತಂಡಕ್ಕೆ ಸೇರ್ಪಡೆ

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾಕ್ಕೆ ಕೊಂಚ ರಿಲೀಫ್‌ ಸಿಕ್ಕಿದೆ. ಅಭ್ಯಾಸದ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದ ಕರ್ನಾಟಕದ ಕೆ.ಎಲ್‌.ರಾಹುಲ್‌ ಚೇತರಿಸಿಕೊಂಡಿದ್ದು, ನ.22ರಿಂದ ಪರ್ತ್‌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಆದರೆ ನಾಯಕ ರೋಹಿತ್‌ ಶರ್ಮಾ ಈ ಟೆಸ್ಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ನೆಟ್ಸ್‌ ಅಭ್ಯಾಸದ ವೇಳೆ ಪ್ರಸಿದ್ಧ್‌ ಕೃಷ್ಣ ಎಸೆದ ಚೆಂಡು ರಾಹುಲ್‌ ಕೈಗೆ ಬಡಿದಿತ್ತು. ನೋವಿನಿಂದ ಚೀರಾಡಿದ ಅವರನ್ನು ತಕ್ಷಣ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಉಪಚರಿಸಿದರೂ, ನೋವು ಕಡಿಮೆಯಾಗದ ಕಾರಣ ಮೈದಾನ ತೊರೆದಿದ್ದರು. 

2 ದಿನಗಳ ಕಾಲ ಅವರ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ಭಾನುವಾರ ಅವರು ಮತ್ತೆ ಅಭ್ಯಾಸಕ್ಕೆ ಆರಂಭಿಸಿದ್ದಾರೆ. ಅವರು ಸಂಪೂರ್ಣ ಪಿಟ್‌ ಇದ್ದಂತೆ ಕಂಡುಬಂದಿದ್ದು, ರೋಹಿತ್‌ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಜೊತೆ ಯಶಸ್ವಿ ಜೈಸ್ವಾಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಶುಭ್‌ಮನ್‌ ಗಿಲ್‌ ಈಗಾಗಲೇ ಗಾಯದ ಕಾರಣಕ್ಕೆ ಮೊದಲ ಟೆಸ್ಟ್‌ನಿಂದ ಹೊರಬಿದ್ದಿದ್ದಿದ್ದಾರೆ. ಈ ನಡುವೆ ರಾಹುಲ್‌ ಚೇತರಿಸಿಕೊಂಡಿರುವುದರಿಂದ ತಂಡ ದೊಡ್ಡ ಸಂಕಷ್ಟದಿಂದ ಪಾರಾಗಿದೆ.

ಪಡಿಕ್ಕಲ್‌ಗೆ ಮಣೆ: ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾರಾ ಬ್ಯಾಟರ್‌, ಕರ್ನಾಟಕದ ದೇವದತ್ ಪಡಿಕ್ಕಲ್‌ರನ್ನು ಮೀಸಲು ಆಟಗಾರನಾಗಿ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. 

ಪಡಿಕ್ಕಲ್‌ ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರು ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದು, ನೆಟ್ಸ್‌ನಲ್ಲೂ ಬೂಮ್ರಾ ಸೇರಿದಂತೆ ವೇಗಿಗಳನ್ನು ಚೆನ್ನಾಗಿ ಎದುರಿಸಿದ್ದಾರೆ. ಹೀಗಾಗಿ ಅವರನ್ನು ಮೀಸಲು ಆಟಗಾರನಾಗಿ ಆಸ್ಟ್ರೇಲಿಯಾದಲ್ಲೇ ಉಳಿಸಿಕೊಳ್ಳಲಾಗಿದೆ. 24 ವರ್ಷದ ಪಡಿಕ್ಕಲ್‌ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಮೂವರು ವೇಗಿಗಳಾದ ನವ್‌ದೀಪ್‌ ಸೈನಿ, ಖಲೀಲ್‌ ಅಹ್ಮದ್‌ ಹಾಗೂ ಮುಕೇಶ್‌ ಕುಮಾರು ಮೀಸಲು ಆಟಗಾರರಾಗಿ ತಂಡದ ಜೊತೆಗಿದ್ದಾರೆ.

ಆಲ್ರೌಂಡರ್‌ ನಿತೀಶ್‌ ಪಾದಾರ್ಪಣೆ ಸಾಧ್ಯತೆ

ಯುವ ಆಲ್ರೌಂಡರ್‌ ನಿತೀಶ್‌ ರೆಡ್ಡಿ ಮೊದಲ ಪಂದ್ಯದ ಮೂಲಕ ಟೆಸ್ಟ್‌ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. 21 ವರ್ಷದ ನಿತೀಶ್‌ ಸದ್ಯ ತಂಡದಲ್ಲಿರುವ ಏಕೈಕ ವೇಗದ ಬೌಲಿಂಗ್‌ ಆಲ್ರೌಂಡರ್‌. ಅವರು 4ನೇ ವೇಗಿಯಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೂಮ್ರಾ ಜೊತೆ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ ಹಾಗೂ ಹರ್ಷಿತ್‌ ರಾಣಾ ತಂಡದಲ್ಲಿದ್ದಾರೆ. ಈ ಪೈಕಿ ಮೂವರನ್ನು ಆಡಿಸಿ, 4ನೇ ವೇಗಿಯಾಗಿ ನಿತೀಶ್‌ರನ್ನು ಆಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ನಿತೀಶ್‌ 21 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 1 ಶತಕ, 2 ಅರ್ಧಶತಕ ಬಾರಿಸಿ, 56 ವಿಕೆಟ್‌ ಕಬಳಿಸಿದ್ದಾರೆ. ಐಪಿಎಲ್‌ನ ಸನ್‌ರೈಸರ್ಸ್‌ ಪರ ಮಿಂಚಿದ್ದಾರೆ.

ರೋಹಿತ್ ಗೈರು: ಮೊದಲ ಟೆಸ್ಟ್‌ಗೆ ಬೂಮ್ರಾ ನಾಯಕ

ಎರಡನೇ ಮಗುವಿಗೆ ಜನ್ಮ ನೀಡಿದ ಪತ್ನಿ ಜೊತೆ ಇನ್ನಷ್ಟು ದಿನ ಸಮಯ ಕಳೆಯುವ ಉದ್ದೇಶದಿಂದ ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್‌ ಶರ್ಮಾ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪರ್ತ್‌ ಟೆಸ್ಟ್‌ಗೆ ರೋಹಿತ್‌ ಅಲಭ್ಯತೆ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗುತ್ತಿತ್ತು.

 ಈ ನಡುವೆ ರೋಹಿತ್‌ ಶೀಘ್ರದಲ್ಲೇ ಆಸೀಸ್‌ಗೆ ತೆರಳಿ, ಮೊದಲ ಟೆಸ್ಟ್‌ಗೂ ಮುನ್ನ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಸದ್ಯ ಮೊದಲ ಟೆಸ್ಟ್‌ಗೆ ಗೈರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಅವರು ಡಿ.6ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ಮುನ್ನ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ರೋಹಿತ್‌ ಅನುಪಸ್ಥಿತಿಯಲ್ಲಿ ವೇಗಿ ಜಸ್‌ಪ್ರೀತ್‌ ಬೂಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಬೂಮ್ರಾ 5 ಪಂದ್ಯಗಳ ಸರಣಿಗೆ ಉಪನಾಯಕನಾಗಿ ಆಯ್ಕೆಯಾಗಿದ್ದರು.

ರೋಹಿತ್ ಗೈರು: ಮೊದಲ ಟೆಸ್ಟ್‌ಗೆ ಬೂಮ್ರಾ ನಾಯಕ

ಎರಡನೇ ಮಗುವಿಗೆ ಜನ್ಮ ನೀಡಿದ ಪತ್ನಿ ಜೊತೆ ಇನ್ನಷ್ಟು ದಿನ ಸಮಯ ಕಳೆಯುವ ಉದ್ದೇಶದಿಂದ ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್‌ ಶರ್ಮಾ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪರ್ತ್‌ ಟೆಸ್ಟ್‌ಗೆ ರೋಹಿತ್‌ ಅಲಭ್ಯತೆ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗುತ್ತಿತ್ತು.

 ಈ ನಡುವೆ ರೋಹಿತ್‌ ಶೀಘ್ರದಲ್ಲೇ ಆಸೀಸ್‌ಗೆ ತೆರಳಿ, ಮೊದಲ ಟೆಸ್ಟ್‌ಗೂ ಮುನ್ನ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಸದ್ಯ ಮೊದಲ ಟೆಸ್ಟ್‌ಗೆ ಗೈರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಅವರು ಡಿ.6ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ಮುನ್ನ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ರೋಹಿತ್‌ ಅನುಪಸ್ಥಿತಿಯಲ್ಲಿ ವೇಗಿ ಜಸ್‌ಪ್ರೀತ್‌ ಬೂಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಬೂಮ್ರಾ 5 ಪಂದ್ಯಗಳ ಸರಣಿಗೆ ಉಪನಾಯಕನಾಗಿ ಆಯ್ಕೆಯಾಗಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ
ಮದುವೆಯಾಗಿ 11 ತಿಂಗಳ ಬಳಿಕ ನೀರಜ್‌ರ ಆರತಕ್ಷತೆ : ಪ್ರಧಾನಿ ಮೋದಿ ಶುಭಹಾರೈಕೆ