ಬೆಂಗಳೂರು :ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೂ ಜನಪದಕ್ಕೂ ಅವಿನಾಭಾವ ಸಂಬಂಧವಿದೆ. ಇನ್ನು ಮುಂದೆ ಪ್ರತಿ ವರ್ಷದ ಕೃಷಿ ಮೇಳದಲ್ಲಿ ಜನಪದ ಕಲಾವಿದರನ್ನೂ ಸನ್ಮಾನಿಸಲಾಗುವುದು ಎಂದು ವಿವಿ ಕುಲಪತಿ ಡಾ.ಎಸ್.ವಿ.ಸುರೇಶ ಭರವಸೆ ನೀಡಿದರು.
ಬನಶಂಕರಿಯ ಸುಚಿತ್ರ ಫಿಲಂ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ‘ಜನಪದ ಸಿರಿ ಕನ್ನಡ’ದಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಜನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯ ಪ್ರತಿ ವರ್ಷ ಆಯೋಜಿಸುವ ಕೃಷಿ ಮೇಳಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕೃಷಿ ಮತ್ತು ಜನಪದಕ್ಕೆ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಇನ್ನು ಮುಂದೆ ಕೃಷಿ ಮೇಳದಲ್ಲಿ ಜನಪದ ಕಲೆಗೆ ಅವಕಾಶ ನೀಡಲಾಗುವುದು, ಕಲಾವಿದರನ್ನೂ ಸನ್ಮಾನಿಸಲಾಗುವುದು. ಕೃಷಿಯನ್ನು ಸಂಪದ್ಭರಿತವಾಗಿ ಮಾಡಿದ್ದೇ ಜನಪದ ಕಲೆ. ಜನಪದಕ್ಕೆ ಅಂತ್ಯವಿಲ್ಲ ಎಂದು ಬಣ್ಣಿಸಿದರು.
ಮನಸ್ಸಿಗೆ ನೆಮ್ಮದಿ
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಮಾತನಾಡಿ, ಜನಪದ ಕಲೆಗಳಿಂದ ಮನಸ್ಸಿಗೆ ನೆಮ್ಮದಿ, ಆನಂದ ಸಿಗುತ್ತದೆ. ಅನಾದಿ ಕಾಲದಿಂದಲೂ ದೇವಸ್ಥಾನಗಳಲ್ಲಿ ಭಕ್ತರಿಗೆ ನೆಮ್ಮದಿ ಸಿಗಲಿ ಎಂದು ಜನಪದ ಕಲೆಗಳನ್ನು ಪ್ರದರ್ಶಿಸಲಾಗುತ್ತಿತ್ತು. ನಶಿಸಿ ಹೋಗುತ್ತಿರುವ ಜನಪದ ಕಲೆಗಳಿಗೆ ಪ್ರಾಮುಖ್ಯತೆ ನೀಡಿ ಕಾಪಾಡಬೇಕಿದೆ ಎಂದು ಆಶಿಸಿದರು.
ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಜನಪದ ಕಲಾವಿದರು ಆಕರ್ಷಕ ಪ್ರದರ್ಶನ ನೀಡಿದರು.
ಡಾ.ಬಾನಂದೂರು ಕೆಂಪಯ್ಯ, ಡಾ.ಮೈಸೂರು ಗುರುರಾಜ್ ಮತ್ತಿತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೇಲಿಮಠದ ಶಿವರುದ್ರ ಸ್ವಾಮೀಜಿ, ಶಾಸಕ ಸಿ.ಕೆ.ರಾಮಮೂರ್ತಿ, ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕಲಾವಿದರಾದ ವೇಮಗಲ್ ನಾರಾಯಣಸ್ವಾಮಿ, ಜರಗನಹಳ್ಳಿ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.