ಕುಸ್ತಿ ಹೋರಾಟಗಾರರ ವಿರುದ್ಧವೇ ದೇಶದ ಕುಸ್ತಿಪಟುಗಳ ಸಮರ!

KannadaprabhaNewsNetwork | Updated : Jan 05 2024, 04:54 PM IST

ಸಾರಾಂಶ

ದೇಶದಲ್ಲಿ ನಡೆಯುತ್ತಿರುವ ಕುಸ್ತಿ ಫೆಡರೇಷನ್‌ ಹೋರಾಟಕ್ಕೆ ಬಹುದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ದೇಶದ ಕುಸ್ತುಪಟುಗಳು ಮೂರು ಪಟುಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

ನವದೆಹಲಿ: ಭಾರತೀಯ ಕುಸ್ತಿಯಲ್ಲಿ ನಡೆಯುತ್ತಿರುವ ‘ಜಂಗೀಕುಸ್ತಿ’ಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಕಳೆದೊಂದು ವರ್ಷದಿಂದ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ತಾರಾ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌ ಹಾಗೂ ವಿನೇಶ್‌ ಫೋಗಟ್‌ ವಿರುದ್ಧವೇ ಈಗ ಪ್ರತಿಭಟನೆ ಆರಂಭವಾಗಿದೆ. 

ಈ ಮೂವರ ಪ್ರತಿಭಟನೆಯಿಂದಾಗಿ 2023ರ ಜನವರಿಯಿಂದ ರಾಷ್ಟ್ರೀಯ ಕುಸ್ತಿ ಕೂಟಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ತಮ್ಮ ಭವಿಷ್ಯ ಹಾಳಾಗುತ್ತಿದೆ ಎಂದು ಸಿಟ್ಟಿಗೆದ್ದಿರುವ ನೂರಾರು ಯುವ ಕುಸ್ತಿಪಟುಗಳು ಬುಧವಾರ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಮೂವರು ಕುಸ್ತಿಪಟುಗಳಿಂದ ಭಾರತೀಯ ಕುಸ್ತಿಯನ್ನು ಉಳಿಸಿ ಎಂದು ಜಾಗತಿಕ ಕುಸ್ತಿ ಒಕ್ಕೂಟಕ್ಕೆ ಮನವಿ ಮಾಡುವ ಪೋಸ್ಟರ್‌ಗಳನ್ನು ಹಿಡಿದು ಉ.ಪ್ರದೇಶ, ಹರ್ಯಾಣ, ದೆಹಲಿ ರಾಜ್ಯಗಳ 300ಕ್ಕೂ ಹೆಚ್ಚು ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು, 10 ದಿನಗಳ ಒಳಗೆ ನೂತನವಾಗಿ ಆಯ್ಕೆಯಾಗಿರುವ ಡಬ್ಲ್ಯುಎಫ್‌ಐ ಸಮಿತಿಯ ಮೇಲೆ ಹೇರಿರುವ ಅಮಾನತನ್ನು ತೆರವುಗೊಳಿಸಿ, ವಿವಿಧ ವಯೋಮಿತಿ ವಿಭಾಗಗಳ ರಾಷ್ಟ್ರೀಯ ಕೂಟಗಳನ್ನು ಆಯೋಜಿಸುವಂತೆ ಒತ್ತಾಯಿಸಿದರು.

 ‘ಇದೊಂದು ಸಾಂಕೇತಿಕ ಪ್ರತಿಭಟನೆ. ಸರ್ಕಾರಕ್ಕೆ ಅಮಾನತು ತೆರವುಗೊಳಿಸಿ, ಕೂಟಗಳನ್ನು ಆಯೋಜಿಸಲು 10 ದಿನ ಕಾಲಾವಕಾಶ ನೀಡುತ್ತಿದ್ದೇವೆ. ಒಂದು ವೇಳೆ ಇದು ನಡೆಯದಿದ್ದರೆ, ಬಜರಂಗ್‌ ಹಾಗೂ ವಿನೇಶ್‌ರಂತೆ ನಾವೂ ಅರ್ಜುನ ಸೇರಿ ವಿವಿಧ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇವೆ’ ಎಂದು ಗ್ರೀಕೋ-ರೋಮನ್‌ ಕುಸ್ತಿಪಟು, 2023ರ ಏಷ್ಯನ್‌ ಗೇಮ್ಸ್‌ ಕಂಚು ವಿಜೇತ, ಅರ್ಜುನ ಪುರಸ್ಕೃತ ಸುನಿಲ್‌ ರಾಣಾ ಎಚ್ಚರಿಸಿದರು. 

ತಾರೆಯರ ಫೋಟೋ ವಿರೂಪ: ವಿನೇಶ್‌, ಸಾಕ್ಷಿ, ಬಜರಂಗ್‌ರ ಚಿತ್ರಗಳನ್ನು ವಿರೂಪಗೊಳಿಸಿದ ಪ್ರತಿಭಟನಾಕಾರರು, ಅವುಗಳನ್ನು ಕಾಲಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ. 

3 ಮಂದಿ ವಿರುದ್ಧ ಕೋಚ್‌ಗಳು ಕೆಂಡ: ಯುವ ಕುಸ್ತಿಪಟುಗಳ ಪ್ರತಿಭಟನೆಗೆ ಹಲವು ಕೋಚ್‌ಗಳಿಂದ ಬೆಂಬಲ ವ್ಯಕ್ತವಾಗಿದ್ದು, ಬುಧವಾರ ಜಂತರ್‌ ಮಂತರ್‌ಗೆ ಅನೇಕರು ಆಗಮಿಸಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಪ್ರದೀಪ್‌ ಕುಮಾರ್‌ ಎಂಬ ಕೋಚ್‌, ಉ.ಪ್ರದೇಶದ ಶೇ.90ರಷ್ಟು ಅಖಾಡಗಳು ನಮ್ಮ ಪರವಾಗಿವೆ. ಇತರ ರಾಜ್ಯಗಳ ಕುಸ್ತಿಪಟುಗಳೂ ನಮ್ಮೊಂದಿಗಿದ್ದಾರೆ. ಒಂದು ಕಡೆ ಕೇವಲ ಮೂರು ಕುಸ್ತಿಪಟುಗಳು ಇದ್ದರೆ, ಮತ್ತೊಂದೆಡೆ ಲಕ್ಷಾಂತರ ಮಂದಿ ಇದ್ದಾರೆ. 

ದೇಶಾದ್ಯಂತ ಲಕ್ಷಾಂತರ ಕುಸ್ತಿಪಟುಗಳ ಭವಿಷ್ಯವನ್ನು ಆ ಮೂವರು ಹಾಳುಗೆಡವುತ್ತಿದ್ದಾರೆ’ ಎಂದು ಸಿಟ್ಟು ಹೊರಹಾಕಿದರು. ‘ಮಹಿಳಾ ಹಾಗೂ ಯುವ ಕುಸ್ತಿಪಟುಗಳ ಹಿತರಕ್ಷಣೆಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಜರಂಗ್‌, ವಿನೇಶ್‌, ಸಾಕ್ಷಿ ಡಬ್ಲ್ಯುಎಫ್‌ಐನ ದೊಡ್ಡ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ದೇಶದ ಕುಸ್ತಿ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಎನ್ನುವ ದುರಾಸೆ ಅವರ ಪ್ರತಿಭಟನೆಗಳ ಹಿಂದಿರುವ ಉದ್ದೇಶ’ ಎಂದು ಮತ್ತೊಬ್ಬ ಕೋಚ್‌ ಆಕ್ರೋಶದಿಂದ ನುಡಿದರು.

ಪ್ರತಿಭಟನೆಗೆ ಮಣಿದ ಕುಸ್ತಿ ಆಡಳಿತ ಸಮಿತಿ: ಕುಸ್ತಿಪಟುಗಳ ಪ್ರತಿಭಟನೆ ಬೆನ್ನಲ್ಲೇ ತಾತ್ಕಾಲಿಕ ಆಡಳಿತ ಸಮಿತಿಯಿಂದ ಅಂಡರ್‌-15, ಅಂಡರ್‌-20 ಕುಸ್ತಿ ಕೂಟಗಳ ಘೋಷಣೆಯಾಗಿದೆ. 6 ವಾರಗಳೊಳಗೆ ಗ್ವಾಲಿಯರ್‌ನಲ್ಲಿ ಕೂಟ ಆಯೋಜಿಸುವುದಾಗಿ ಆಡಳಿತ ಸಮಿತಿ ಪ್ರಕಟಿಸಿದೆ.

ಮೆತ್ತಗಾದ ಸಾಕ್ಷಿ ಮಲಿಕ್‌!

ಚುನಾವಣೆ ಮೂಲಕ ನೂತನವಾಗಿ ಆಯ್ಕೆಯಾಗಿರುವ ಕುಸ್ತಿ ಫೆಡರೇಶನ್‌ನ ಪದಾಧಿಕಾರಿಗಳೆಲ್ಲರ ವಿರುದ್ಧ ಹರಿಹಾಯುತ್ತಿದ್ದ ಸಾಕ್ಷಿ ಮಲಿಕ್‌, ತಮ್ಮ ವಿರುದ್ಧವೇ ಯುವ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಮೆತ್ತಗಾದಂತೆ ಕಂಡುಬರುತ್ತಿದೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಬ್ರಿಜ್‌ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಒಬ್ಬರನ್ನು ಹೊರತುಪಡಿಸಿ ಹೊಸದಾಗಿ ಆಯ್ಕೆಯಾಗಿರುವ ಮತ್ತ್ಯಾರ ಬಗ್ಗೆಯೂ ನಮಗೆ ತಕರಾರಿಲ್ಲ. ಸಂಜಯ್‌ರನ್ನು ಅಧಿಕಾರದಿಂದ ದೂರವಿಡಿ’ ಎಂದು ಕ್ರೀಡಾ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ.

Share this article