ಕ್ಯಾಂಡಿಡೇಟ್ಸ್‌ ಚೆಸ್‌: ಮತ್ತೆ ಜಂಟಿ ಅಗ್ರಸ್ಥಾನಕ್ಕೆ ಗುಕೇಶ್‌

KannadaprabhaNewsNetwork | Updated : Apr 20 2024, 05:12 AM IST

ಸಾರಾಂಶ

ಭಾರತದ ಪ್ರಜ್ಞಾನಂದ ಹಾಗೂ ವಿದಿತ್‌ ಕ್ಯಾಂಡಿಡೇಟ್ಸ್‌ ಚಾಂಪಿಯನ್‌ ಪಟ್ಟದ ರೇಸ್‌ನಿಂದ ಹೊರಬಿದ್ದಿದ್ದಾರೆ. ಟೂರ್ನಿಯಲ್ಲಿ ಇನ್ನೆರಡು ಸುತ್ತಿನ ಪಂದ್ಯ ಬಾಕಿಯಿದ್ದು, ಅಗ್ರಸ್ಥಾನಕ್ಕಾಗಿ ಪೈಪೋಟಿ ಹೆಚ್ಚಿದೆ.

ಟೊರೊಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಆರ್‌.ಪ್ರಜ್ಞಾನಂದ ಹಾಗೂ ವಿದಿತ್ ಗುಜರಾತಿ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ಮಧ್ಯರಾತ್ರಿ ಮುಕ್ತ ವಿಭಾಗದ 12ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ಅವರು ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಗೆಲುವು ಸಾಧಿಸಿದರು.

 ಇದರೊಂದಿಗೆ ಅಂಕವನ್ನು 7.5ಕ್ಕೆ ಹೆಚ್ಚಿಸಿದ ಗುಕೇಶ್‌, ಅಮೆರಿಕದ ಹಿಕರು ನಕಮುರಾ, ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಟೂರ್ನಿಯಲ್ಲಿ ಇನ್ನೆರಡು ಸುತ್ತಿನ ಪಂದ್ಯಗಳು ಬಾಕಿಯಿದ್ದು, ಅಗ್ರಸ್ಥಾನಕ್ಕಾಗಿ ಪೈಪೋಟಿ ಹೆಚ್ಚಿದೆ.ಇದೇ ವೇಳೆ ನೆಪೊಮ್ನಿಯಾಚಿ ವಿರುದ್ಧ ಡ್ರಾ ಸಾಧಿಸಿದ ಆರ್‌.ಪ್ರಜ್ಞಾನಂದ 6 ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದರೆ, ವಿದಿತ್‌ ಕೇವಲ 5 ಅಂಕ ಹೊಂದಿದ್ದಾರೆ.ಇನ್ನು, ಮಹಿಳಾ ವಿಭಾಗದ 12ನೇ ಸುತ್ತಿನಲ್ಲಿ ಕೊನೆರು ಹಂಪಿ ಅವರು ರಷ್ಯಾದ ಅಲೆಕ್ಸಾಂಡ್ರಾ ವಿರುದ್ಧ ಡ್ರಾ ಸಾಧಿಸಿದರೆ, ಆರ್‌.ವೈಶಾಲಿ ಉಕ್ರೇನ್‌ನ ಅನ್ನಾ ವಿರುದ್ಧ ಗೆಲುವು ಸಾಧಿಸಿದರು. ಕೊನೆರು 6 ಅಂಕದೊಂದಿಗೆ ಜಂಟಿ 3ನೇ, ವೈಶಾಲಿ 5.5 ಅಂಕದೊಂದಿಗೆ 6ನೇ ಸ್ಥಾನದಲ್ಲಿದ್ದಾರೆ

.ಪಾಕಿಸ್ತಾನ-ಕಿವೀಸ್‌ ಮೊದಲ ಟಿ20 ಪಂದ್ಯ ಮಳೆಗಾಹುತಿ

ರಾವಲ್ಪಿಂಡಿ: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಗುರುವಾರ ನಿಗದಿಯಾಗಿದ್ದ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸಿತು. ಸತತ ಗಂಟೆಗಳ ಮಳೆಯಿಂದಾಗಿ ಪಂದ್ಯವನ್ನು ತಲಾ 5 ಓವರ್‌ಗೆ ಇಳಿಸಲಾಯಿತು. ಆದರೆ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆರಂಭಿಸಿ ಕೇವಲ 2 ಎಸೆತ ಎದುರಿಸಿದಾಗಲೇ ಮತ್ತೆ ಮಳೆ ಸುರಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿ ಹಿಂಪಡೆದಿದ್ದ ವೇಗಿ ಮೊಹಮದ್‌ ಅಮೀರ್‌ 4 ವರ್ಷಗಳ ಬಳಿಕ ಪಾಕ್‌ ಪರ ಕಣಕ್ಕಿಳಿದರು. 2ನೇ ಪಂದ್ಯ ಶನಿವಾರ ನಡೆಯಲಿದೆ.

Share this article