;Resize=(412,232))
ನವದೆಹಲಿ: ಕಳೆದೊಂದು ವರ್ಷದಲ್ಲಿ ಭಾರತ ತಂಡ ತವರಿನಲ್ಲೇ 2 ಬಾರಿ ಟೆಸ್ಟ್ ಸರಣಿ ವೈಟ್‌ವಾಶ್ ಮುಖಭಂಗ ಅನುಭವಿಸಿದೆ. ಇದಕ್ಕೆ ಕೆಲ ಹಿರಿಯ ಆಟಗಾರರ ‘ತಲೆದಂಡ’ವಾಗಿದ್ದರೆ, ಈಗಿರುವ ಆಟಗಾರರ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೋಚ್ ಗೌತಮ್ ಗಂಭೀರ್ ಬಗ್ಗೆಯೂ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಆದರೆ ಇದೆಲ್ಲದರ ನಡುವೆ ಹೆಚ್ಚಿನ ಟೀಕೆಗಳಿಂದ ಮುಕ್ತರಾಗಿ, ಸುರಕ್ಷಿತ ವಲಯದಲ್ಲಿರುವ ವ್ಯಕ್ತಿ ಅಜಿತ್ ಅಗರ್ಕರ್.
ಮಾಜಿ ಕ್ರಿಕೆಟಿಗ ಅಜಿತ್ 2023ರ ಜುಲೈನಿಂದ ಭಾರತೀಯ ಕ್ರಿಕೆಟ್‌ನ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ. ಹೆಸರೇ ಸೂಚಿಸುವಂತೆ ಆಯ್ಕೆ ಸಮಿತಿಯ ಕೆಲಸ ಪ್ರತಿಭಾವಂತ ಕ್ರಿಕೆಟಿಗರನ್ನು ಗುರುತಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು. ಆದರೆ ಪ್ರತಿಭಾಂತರ ಆಯ್ಕೆ ಮೊಬೈಲ್‌ನಲ್ಲಿ ಲೈವ್ ವೀಕ್ಷಿಸಿ ಅಥವಾ ಸ್ಕೋರ್ ಬೋರ್ಡ್ ನೋಡಿ ಮಾಡುವಂತದ್ದಲ್ಲ. ಸರಿಯಾದ ಆಯ್ಕೆ ಮಾಡಲು ಕ್ರೀಡಾಂಗಣದಲ್ಲಿ ಹಾಜರಿದ್ದು, ಆಟವನ್ನು ನೇರವಾಗಿ ವೀಕ್ಷಿಸಿ ಅವರ ಕೌಶಲ್ಯ, ಸಾಮರ್ಥ್ಯದ ಬಗ್ಗೆ ತಿಳಿಯಬೇಕು.
ಆದರೆ ಕಳೆದೊಂದು ವರ್ಷದ ಅಗರ್ಕರ್ ಹಿನ್ನೆಲೆ ಗಮನಿಸಿದರೆ, ಅವರು ದೇಸಿ ಕ್ರಿಕೆಟ್ ಟೂರ್ನಿಗಳು ನಡೆಯುವ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದಿದ್ದು ತೀರಾ ಕಡಿಮೆ. ಬದಲಾಗಿ ಭಾರತ ತಂಡ ವಿದೇಶಿ ಸರಣಿ, ಟೂರ್ನಿ ಆಡುವಾಗ ಅಲ್ಲಿರುತ್ತಾರೆ. ಇದು ಈಗ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದು, ರಾಷ್ಟ್ರೀಯ ಟೂರ್ನಿಗಳ ವೇಳೆ ಗೈರು ಬಗ್ಗೆ ಅಗರ್ಕರ್‌ಗೆ ಪ್ರಶ್ನಿಸಿದೆ ಎಂದು ವರದಿಯಾಗಿದೆ.
ಅಗರ್ಕರ್ ಕಳೆದ 1 ವರ್ಷದಲ್ಲಿ ಕೇವಲ ಒಂದು ರಣಜಿ ಪಂದ್ಯವನ್ನು ಮಾತ್ರ ನೇರವಾಗಿ ವೀಕ್ಷಿಸಿದ್ದಾರೆ ಎಂದುದು ಅಚ್ಚರಿಯಾದರೂ ಸತ್ಯ. 2024ರಲ್ಲಿ ಕರ್ನಾಟಕ-ತಮಿಳುನಾಡು ಪಂದ್ಯಕ್ಕೆ ಅಜಿತ್ ಹಾಜರಿದ್ದರು. ಆ ಪಂದ್ಯದಲ್ಲಿ 151 ರನ್ ಸಿಡಿಸಿದ್ದ ದೇವದತ್ ಪಡಿಕ್ಕಲ್ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಉಳಿದಂತೆ ಅಗರ್ಕರ್ ದೇಸಿ ಪಂದ್ಯ ನೇರವಾಗಿ ವೀಕ್ಷಿಸಿದ್ದು ಶುಕ್ರವಾರ. ಕರ್ನಾಟಕ-ಜಾರ್ಖಂಡ್ ಟಿ20 ಪಂದ್ಯಕ್ಕೆ ಹಾಜರಿದ್ದರು.
ಆದರೆ ಕಳೆದ 12 ತಿಂಗಳಲ್ಲಿ ಭಾರತ ತಂಡದ ಜತೆ ಅಗರ್ಕರ್ ಇಂಗ್ಲೆಂಡ್, ಆಸ್ಟ್ರೇಲಿಯಾ(2 ಬಾರಿ), ದುಬೈ(2 ಬಾರಿ) ಪ್ರವಾಸ ಕೈಗೊಂಡಿದ್ದಾರೆ. ಅವರ ಜೊತೆ ಆಯ್ಕೆ ಸಮಿತಿಯ ಸದಸ್ಯ ಶಿವಸುಂದರ್ ದಾಸ್ ಕೂಡಾ ಕೆಲವು ವಿದೇಶಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಯ್ಕೆ ಸಮಿತಿಯಲ್ಲಿರುವವರು ದೇಸಿ ಟೂರ್ನಿಗಳಾದ ರಣಜಿ, ವಿಜಯ್ ಹಜಾರೆ ಏಕದಿನ, ಮುಷ್ತಾಕ್ ಅಲಿ ಟಿ20, ದುಲೀಪ್ ಟ್ರೋಫಿ, ಇರಾನಿ ಕಪ್‌ಗಳಿಗೆ ಹಾಜರಾಗದೆ, ರಾಷ್ಟ್ರೀಯ ತಂಡದ ಜೊತೆಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅಭಿಮಾನಿಗಳು ಹಾಗೂ ಈಗ ಕೆಲ ಬಿಸಿಸಿಐ ಅಧಿಕಾರಿಗಳ ಪ್ರಶ್ನೆ.
ಕ್ರಿಕೆಟ್ ಅಂದರೆ ಕೇವಲ ಗಳಿಸಿದ ಸ್ಕೋರ್, ಪಡೆದ ವಿಕೆಟ್ ಅಲ್ಲ. ಕೆಲವೊಮ್ಮೆ ಆಟಗಾರ ಗಳಿಸಿದ 50-60 ರನ್‌ಗೆ ಶತಕಕ್ಕಿಂತ ಹೆಚ್ಚಿನ ಮಹತ್ವವಿರುತ್ತದೆ. ಕೆಲ ಹೋರಾಟದ ಇನ್ನಿಂಗ್ಸ್‌ಗಳಿಗೆ ಬರೀ ಸ್ಕೋರ್ ಬೋರ್ಡ್ ನ್ಯಾಯ ಒದಗಿಸುವುದಿಲ್ಲ. ಹೀಗಿರುವಾಗ ದೇಸಿ ಪಂದ್ಯಗಳಿಗೆ ಹಾಜರಾಗದೆ ಕೇವಲ ವೆಬ್‌ಸೈಟ್‌ನಲ್ಲಿ ಸ್ಕೋರ್‌ಬೋರ್ಡ್ ನೋಡಿ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದರೆ ಅದು ಇತರ ಪ್ರತಿಭಾವಂತರಿಗೆ ಮಾಡುವ ಅನ್ಯಾಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಇನ್ನು, ಭಾರತದ ಹಿರಿಯ ಕ್ರಿಕೆಟಿಗರಿಗೆ ದೇಸಿ ಟೂರ್ನಿಗಳಲ್ಲಿ ಆಡಲು ಸೂಚಿಸಿ, ಸ್ವತಃ ಆಯ್ಕೆ ಸಮಿತಿ ಸದಸ್ಯರೇ ದೇಸಿ ಕ್ರಿಕೆಟ್‌ನಿಂದ ದೂರ ಉಳಿಯುತ್ತಿರುವ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದು ನ್ಯಾಯವೇ?
- ಆಯ್ಕೆ ಸಮಿತಿ ಮುಖ್ಯಸ್ಥರಾಗಿ ರಣಜಿ ಪಂದ್ಯಗಳಿಗೆ ಗೈರು. ಭಾರತ ತಂಡದ ವಿದೇಶಿ ಟೂರ್ನಿ, ಸರಣಿಗಳಿಗೆ ಹಾಜರು.
- ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಿಗೆ ಅವಕಾಶವಿಲ್ಲ. ಐಪಿಎಲ್ ಸ್ಟಾರ್‌ಗಳಿಗೆ ಮಣೆ.
- ನೇರವಾಗಿ ಪಂದ್ಯ ವೀಕ್ಷಿಸಿ ಪ್ರತಿಭಾನ್ವೇಷನೆ ಮಾಡುವ ಬದಲು ಆ್ಯಪ್, ಸ್ಕೋರ್‌ಬೋರ್ಡ್‌ಗಳ ಅವಲಂಬನೆ.
- ಆಟಗಾರರಿಗೆ ದೇಸಿ ಕ್ರಿಕೆಟ್ ಆಡಲು ಸೂಚನೆ. ಆದರೆ ಆಯ್ಕೆ ಸಮಿತಿ ಮುಖ್ಯಸ್ಥ, ಸದಸ್ಯರೇ ದೇಸಿ ಕ್ರಿಕೆಟ್‌ಗೆ ಗೈರು.
- ದೇಸಿ ಕ್ರಿಕೆಟಿಗರ ಜೊತೆ ಸಂಪರ್ಕ ಕಡಿತ. ಗಾಯ, ಫಿಟ್ನೆಸ್ ಬಗ್ಗೆ ನೇರವಾಗಿ ಆಟಗಾರರ ಜೊತೆ ಮಾತುಕತೆಯಿಲ್ಲ.