ಜುಡೋದಲ್ಲಿ ಭಾರತಕ್ಕೆ ಐತಿಹಾಸಿಕ ಡಬಲ್‌ ಚಿನ್ನ!

Published : Aug 01, 2026, 11:45 AM IST
Commonwealth Games 2026

ಸಾರಾಂಶ

ಕಾಮನ್‌ವೆಲ್ತ್‌ ಗೇಮ್ಸ್: ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದ ಅಸ್ಮಿತಾ ದೇ । ಪುರುಷರ 60 ಕೆ.ಜಿ. ವಿಭಾಗದಲ್ಲಿ ಹರ್ಷ್‌ಗೆ ಬಂಗಾರವೇಟ್‌ಲಿಫ್ಟಿಂಗ್‌, ಅಥ್ಲೆಟಿಕ್ಸ್‌ನಲ್ಲೂ ಭಾರತಕ್ಕೆ ಪದಕ ಗರಿ । 20 ಮೆಡಲ್ ಗೆದ್ದು 8ನೇ ಸ್ಥಾನಕ್ಕೆ । ಇಂದು ಬಾಕ್ಸಿಂಗ್‌ನಲ್ಲಿ ಹಲವು ಚಿನ್ನದ ನಿರೀಕ್ಷೆ

ಗ್ಲಾಸ್ಗೋ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಶುಕ್ರವಾರ ಹೊಸ ಇತಿಹಾಸ ಸೃಷ್ಟಿಸಿದೆ. ಗೇಮ್ಸ್‌ನ ಚರಿತ್ರೆಯಲ್ಲೇ ಮೊದಲ ಬಾರಿ ದೇಶದ ಜುಡೋ ಸ್ಪರ್ಧಿಗಳು ಚಿನ್ನದ ಪದಕ ಗೆದ್ದಿದ್ದಾರೆ. ಕೆಲವೇ ನಿಮಿಷಗಳ ಅಂತರದಲ್ಲಿ 2 ಬಂಗಾರ ಸಾಧನೆ ಮಾಡುವ ಮೂಲಕ ಜುಡೋ ಪಟುಗಳಾದ ಅಸ್ಮಿತಾ ದೇ ಹಾಗೂ ಹರ್ಷ್‌ ಸಿಂಗ್‌ ಭಾರತೀಯ ಕ್ರೀಡಾ ಪ್ರೇಮಿಗಳಲ್ಲಿ ಸಂಭ್ರಮಕ್ಕೆ ಕಾರಣರಾದರು.

ಮಹಿಳೆಯರ 48 ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ತ್ರಿಪುರಾದ 23 ವರ್ಷದ ಅಸ್ಮಿತಾ ದೇ, ಕೆನಡಾದ ಹೀದಿ ಕ್ವಾಚ್‌ ವಿರುದ್ಧ ಜಯಭೇರಿ ಬಾರಿಸಿದರು. 4 ನಿಮಿಷಗಳ ಸ್ಪರ್ಧೆಯಲ್ಲಿ ಒಂದು ಹಂತದಲ್ಲಿ ಇಬ್ಬರೂ 1-1 ಅಂಕಗಳಿಂದ ಸಮಬಲ ಸಾಧಿಸಿದ್ದರು. ಹೆಚ್ಚುವರಿ ಸಮಯದಲ್ಲಿ ಎದುರಾಳಿಯನ್ನು ಕೆಡವಿದ ಅಸ್ಮಿತಾ, ಸಡನ್‌ ಡೆತ್‌ ಅಂಕದ ಮೂಲಕ ಚಿನ್ನ ಕೊರಳಿಗೇರಿಸಿಕೊಂಡರು.

ಹರ್ಷ್‌ಗೆ ಸ್ವರ್ಣ ಗರಿ:

ಅಸ್ಮಿತಾ ಚಿನ್ನ ಗೆದ್ದ ಕೆಲ ನಿಮಿಷಗಳ ಅಂತರದಲ್ಲಿ ಹರ್ಷ್‌ ಸಿಂಗ್‌ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟರು. ಅವರು ಪುರುಷರ 60 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್‌ ವಿರುದ್ಧ ಜಯಭೇರಿ ಬಾರಿಸಿದರು. ಈ ಮೂಲಕ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಜುಡೋ ಪಟು ಎನಿಸಿಕೊಂಡರು.

ಕಾಟ್ಜ್‌ ಓಷ್ಯಾನಿಯಾ ಹಾಗೂ ಆಸ್ಟ್ರೇಲಿಯಾದ ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು. 2022ರ ಬರ್ಮಿಂಗ್‌ಹ್ಯಾಮ್‌ನಲ್ಲಿ ಅವರು ಕಂಚು ಗೆದ್ದಿದ್ದರು. ಆದರೆ 23ರ ಹರ್ಷ್‌ ಆಟದ ಮುಂದೆ ಕಾಟ್ಜ್‌ಗೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ.

3ನೇ ಚಿನ್ನ:

ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಯಾಮಿನಿ ಮೌರ್ಯ ಅವರು ಇಂಗ್ಲೆಂಡ್‌ನ ಅಸೆಲ್ಯಾ ಟೊಪ್ರಾಕ್ ವಿರುದ್ಧ ಗೆಲ್ಲುವ ಮೂಲಕ ಭಾರತ ಜುಡೋ ಸ್ಪರ್ಧೆಯಲ್ಲಿ ಒಂದೇ ದಿನ 3 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿತು.

ಮೊದಲ ಚಿನ್ನ:

ಜುಡೋ ಸ್ಪರ್ಧೆಗಳನ್ನು 1990 ಆಕ್ಲಂಡ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪರಿಚಯಿಸಲಾಗಿತ್ತು. ಅಲ್ಲಿಂದ ಪ್ರತಿ ಗೇಮ್ಸ್‌ನಲ್ಲೂ ಭಾರತ ಪದಕ ಗೆಲ್ಲುತ್ತಿತ್ತು. ಆದರೆ ಚಿನ್ನ ಗೆದ್ದಿದ್ದು ಇದೇ ಮೊದಲು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮತ್ತೆ 1 ಚಿನ್ನ, 2 ಬೆಳ್ಳಿ
ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ ದಾಖಲೆಯ 9 ಬಾಕ್ಸರ್ಸ್‌ಗೆ ಮೆಡಲ್‌ ಖಚಿತ!