;Resize=(412,232))
ಪ್ರಣವಿ ಅರಸ್ ಸಾಂಸ್ಕೃತಿಕ ನಗರಿ ಮೈಸೂರಿನ ಲಕ್ಷ್ಮಿಪುರದವರು. ಶರತ್ ಚಂದ್ರ ಅರಸ್ ಹಾಗೂ ಕೈವಲ್ಯ ಅರಸ್ ದಂಪತಿಯ ಪುತ್ರಿಯಾಗಿ 2003 ಏ.15ರಂದು ಜನಿಸಿದ ಪ್ರಣವಿ ತಾವು 6 ವರ್ಷದವರಿದ್ದಾಗಲೇ ಗಾಲ್ಫ್ ಆಡಲು ಆರಂಭಿಸಿದರು.
ಪ್ರಣವಿಯ ತಂದೆ ಮತ್ತು ಸಹೋದರ ಮೈಸೂರಿನ ಜಯಚಾಮರಾಜ್ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ಗಾಲ್ಫ್ ಆಡುತ್ತಿದ್ದರು. ಇದನ್ನು ನೋಡಿ ಬೆಳೆದ ಪ್ರಣವಿಗೆ ಸಹಜವಾಗಿಯೇ ಗಾಲ್ಫ್‌ನತ್ತ ಆಕರ್ಷಣೆ ಮೂಡಿತು. ಹವ್ಯಾಸವಾಗಿ ಆರಂಭವಾಗಿ ಬಳಿಕ ವೃತ್ತಿಪರ ಗಾಲ್ಫ್ ಪಟುವಾಗಿ ಬೆಳೆದರು.
2018ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಸಿಂಘಾ ವಿಶ್ವ ಚಾಂಪಿಯನ್, ಅಖಿಲ ಭಾರತ ಜೂನಿಯರ್ ಬಾಲಕಿಯರ ಚಾಂಪಿಯನ್‌ಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಜಯಿಸಿದರು. 2020ರಲ್ಲಿ ವೃತ್ತಿಪರ ಗಾಲ್ಫ್ ಪಟುವಾದ ಅವರು ಹ್ಯಾಂಗ್ಝೋ ಏಷ್ಯನ್ ಗೇಮ್ಸ್‌ನ ವೈಯಕ್ತಿಕ, ಮಹಿಳಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಪದಕ ಗೆದ್ದಿರಲಿಲ್ಲ. ಆ ಬಳಿಕ ಲೇಡೀಸ್ ಯುರೋಪಿಯನ್ ಟೂರ್(ಎಲ್‌ಇಟಿ)ಯಲ್ಲಿ ಸ್ಪರ್ಧಿಸಿ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಗಮನ ಸೆಳೆದರು. 2024ರಲ್ಲಿ ಆಂಡಲೂಸಿಯಾ ಕೋಸ್ಟಾ ಡೆಲ್ ಸೋಲ್ ಓಪನ್ ಡಿ ಎಸ್ಪಾನಾದಲ್ಲಿ 3ನೇ ಸ್ಥಾನ ಪಡೆದಿದ್ದರು. ಇದೀಗ ಅವರ ಸಾಧನೆಗೆ ಐತಿಹಾಸಿಕ ಚಿನ್ನ ಮತ್ತಷ್ಟು ಮೆರುಗು ತಂದುಕೊಟ್ಟಿದೆ.
- ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ
- 23 ವರ್ಷದ ಕನ್ನಡತಿ ಪ್ರಣವಿ ಅರಸ್‌ಗೆ ಅಭಿನಂದನೆಗಳ ಮಹಾಪೂರ
ಏಷ್ಯಾಡ್ ಗೇಮ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಮೈಸೂರಿನ ಪ್ರಣವಿ ಶರತ್ ಅರಸ್‌ಗೆ ಸ್ವರ್ಣ ಸಿಕ್ಕಿದೆ. ತಂಡ ವಿಭಾಗದಲ್ಲಿ ಬೆಂಗಳೂರಿನ ಅದಿತಿ ಅಶೋಕ್, ದೀಕ್ಷಾ ದಾಗರ್ ಜತೆಗೂಡಿ ಬೆಳ್ಳಿ ಪದಕ ಗಳಿಸಿದ್ದಾರೆ.
ಏಷ್ಯಾಡ್‌ನಲ್ಲಿ 1982ರಿಂದ ಪುರುಷ, 1990ರಿಂದ ಮಹಿಳಾ ಗಾಲ್ಫ್ ನಡೆಯುತ್ತಿದೆ. ಪುರುಷರ ವಿಭಾಗದಲ್ಲಿ 1982, 2022ರಲ್ಲಿ ಚಿನ್ನ ಬಂದಿತ್ತು. ಆದರೆ ಮಹಿಳಾ ವಿಭಾಗದಲ್ಲಿ ಬಂಗಾರದ ಕೊರತೆ ಇತ್ತು. ಅದನ್ನು ಮೈಸೂರಿನ ಪ್ರಣವಿ ನೀಗಿಸಿದ್ದಾರೆ. ಪುರುಷ- ಮಹಿಳೆ ಸೇರಿದಂತೆ ಭಾರತೀಯ ಗಾಲ್ಫ್ ಆಟಗಾರರೊಬ್ಬರು ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದು 24 ವರ್ಷಗಳಲ್ಲಿ ಇದೇ ಮೊದಲು
₹1 ಕೋಟಿ: ಇಂಡಿಯನ್ ಗಾಲ್ಫ್ ಪ್ರೀಮಿಯರ್ ಲೀಗ್‌ನಿಂದ ಪ್ರಣವಿಗೆ ಬಹುಮಾನ
ಕ್ರಿಕೆಟ್, ಹಾಕಿ ಸೇರಿ ನಿನ್ನೆ ಭಾರತಕ್ಕೆ ಮತ್ತೆ 5 ಸ್ವರ್ಣ
ಹಾಕಿಯಲ್ಲೂ ಭಾರತಕ್ಕೆ ಐತಿಹಾಸಿಕ ಬಂಗಾರ
ಪುರುಷರ ಹಾಕಿ ತಂಡ ಸತತ 2ನೇ ಹಾಗೂ ಒಟ್ಟಾರೆ 5ನೇ ಬಾರಿ ಚಾಂಪಿಯನ್ ಆಗುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಗಮನಾರ್ಹ ಎಂದರೆ, ಶುಕ್ರವಾರವಷ್ಟೇ ಮಹಿಳಾ ಹಾಕಿ ತಂಡ ಸ್ವರ್ಣ ಗೆದ್ದಿತ್ತು. ಭಾರತದ ಪುರುಷ- ಮಹಿಳಾ ಎರಡೂ ಹಾಕಿ ತಂಡಗಳು ಏಷ್ಯಾಡ್‌ನಲ್ಲಿ ಚಾಂಪಿಯನ್ ಆಗಿದ್ದು ಇದೇ ಮೊದಲು.
ಕ್ರಿಕೆಟ್‌ನಲ್ಲಿ ಭಾರತಕ್ಕೆ ಸತತ 2ನೇ ಸಲ ಚಿನ್ನ
ಏಷ್ಯಾಡ್ ಗೇಮ್ಸ್‌ನ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ 19 ರನ್‌ಗಳಿಂದ ಭಾರತ ರೋಚಕ ಗೆಲುವು ಸಾಧಿಸಿತು. ತನ್ಮೂಲಕ 2ನೇ ಬಾರಿ ಚಿನ್ನ ಗೆದ್ದಿತು
ಬಿಲ್ಗಾರಿಕೆ ರೀಕರ್ವ್‌ನಲ್ಲೂ ಭಾರತದ ಹೊಸ ಚರಿತ್ರೆ
ಭಾರತದ ಯುವ ಆರ್ಚರಿ ಪಟು ಕುಂಕುಮ್ ಮೊಹೋಡ್ ಏಷ್ಯನ್ ಗೇಮ್ಸ್‌ನ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಇದು ಈ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ವೈಯಕ್ತಿಕ ಸ್ವರ್ಣ.