;Resize=(412,232))
ಆಮ್ಸ್‌ಟೆಲ್ವೀನ್(ನೆದರ್‌ಲೆಂಡ್ಸ್): 16ನೇ ಆವೃತ್ತಿಯ ಪುರುಷ ಹಾಗೂ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಗೆ ಶನಿವಾರ(ಆ.15) ಚಾಲನೆ ಸಿಗಲಿದೆ. 4 ವರ್ಷಗಳಿಗೊಮ್ಮೆ ನಡೆಯುವ ಹಾಕಿ ವಿಶ್ವಕಪ್‌ಗೆ ಈ ಬಾರಿ ನೆದರ್‌ಲೆಂಡ್ಸ್ ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯ ವಹಿಸಲಿವೆ. ಪುರುಷರ ವಿಭಾಗದಲ್ಲಿ ಮಾಜಿ ಚಾಂಪಿಯನ್ ಭಾರತ, ಹಾಲಿ ಚಾಂಪಿಯನ್ ಜರ್ಮನಿ, ಗರಿಷ್ಠ ಬಾರಿ(4) ಚಾಂಪಿಯನ್ ಪಾಕಿಸ್ತಾನ ಸೇರಿದಂತೆ ಒಟ್ಟು 5 ಖಂಡಗಳ 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಮಹಿಳಾ ವಿಭಾಗದಲ್ಲಿ ಭಾರತ, 9 ಬಾರಿ ಚಾಂಪಿಯನ್ ನೆದರ್‌ಲೆಂಡ್ಸ್ ಕಣಕ್ಕಿಳಿಯಲಿದೆ.
ಒಟ್ಟು 16 ದಿನಗಳ ಕಾಲ ನೆದರ್‌ಲೆಂಡ್ಸ್‌ನ ಆಮ್ಸ್‌ಟೆಲ್ವೀನ್ ನಗರದ ವ್ಯಾಗನರ್ ಸ್ಟೇಡಿಯಂ, ಬೆಲ್ಜಿಯಂನ ವಾವ್ರೆ ನಗರದಲ್ಲಿರುವ ಸ್ಟೇಡ್ ಜಸ್ಟಿನ್ ಪೀಟರ್ಸ್ ಕ್ರೀಡಾಂಗಣ ಹಾಗೂ ಬೆಲ್ಫಿಯುಸ್ ಕ್ರೀಡಾಂಗಣದಲ್ಲಿ ತಲಾ 50 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಆ.30ರಂದು ನಿಗದಿಯಾಗಿದೆ. ನೆದರ್‌ಲೆಂಡ್ಸ್ ಈ ಹಿಂದೆ 3 ಬಾರಿ ಟೂರ್ನಿಗೆ ಆತಿಥ್ಯ ವಹಿಸಿದ್ದು, ಈಗ 4ನೇ ವಿಶ್ವಕಪ್ ಆತಿಥ್ಯಕ್ಕೆ ಸಜ್ಜಾಗಿದೆ. ಬೆಲ್ಜಿಯಂನಲ್ಲಿ ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
ವಿಶ್ವಕಪ್ 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಪ್ರತಿ ತಂಡಕ್ಕೆ ತಲಾ 3 ಪಂದ್ಯಗಳು. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್(ಒಟ್ಟು 8 ತಂಡ) ಪ್ರವೇಶಿಸಲಿವೆ. ಅಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ.
1971ರಿಂದ 2023ರ ವರೆಗೆ ನಡೆದ ಒಟ್ಟು 15 ಆವೃತ್ತಿಗಳ ಪುರುಷರ ವಿಶ್ವಕಪ್‌ಗಳಲ್ಲಿ ಗರಿಷ್ಠ ಬಾರಿ ಚಾಂಪಿಯನ್ ಆಗಿದ್ದು ಪಾಕಿಸ್ತಾನ. ತಂಡ 1971, 1978, 1982 ಹಾಗೂ 1994ರಲ್ಲಿ ಚಾಂಪಿಯನ್ ಆಗಿದೆ. ನೆದರ್‌ಲೆಂಡ್ಸ್, ಆಸ್ಟ್ರೇಲಿಯಾ, ಜರ್ಮನಿ ತಲಾ 3 ಬಾರಿ ಟ್ರೋಫಿ ಗೆದ್ದಿದ್ದು, ಭಾರತ ಹಾಗೂ ಬೆಲ್ಜಿಯಂ ತಲಾ ಒಮ್ಮೆ ಚಾಂಪಿಯನ್ ಆಗಿವೆ. ಇನ್ನು, ಮಹಿಳಾ ವಿಭಾಗದಲ್ಲಿ ನೆದರ್‌ಲೆಂಡ್ಸ್ 9 ಬಾರಿ ಕಪ್ ಗೆದ್ದಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಜರ್ಮನಿ ತಲಾ 2 ಬಾರಿ ಚಾಂಪಿಯನ್ ಆಗಿವೆ.
1975ರ ಬಳಿಕ ಮತ್ತೊಂದು ಕಪ್ ಮೇಲೆ ಭಾರತದ ಕಣ್ಣು
ಈ ಬಾರಿಯೂ ತಂಡಕ್ಕಿದೆ ಕಠಿಣ ಸವಾಲು
ಆಮ್ಸ್‌ಟೆಲ್ವೀನ್: ಒಂದು ಕಾಲದಲ್ಲಿ ಹಾಕಿ ಜಗತ್ತನ್ನು ಆಳುತ್ತಿದ್ದ ಭಾರತ ತಂಡ ಈಗ ತನ್ನ ಸಾಂಪ್ರದಾಯಿಕ ಕ್ರೀಡೆಯಲ್ಲಿ ಮಂಕಾಗಿದೆ. ತಂಡ ಕಳೆದ 5 ದಶಕಗಳಲ್ಲಿ ಒಮ್ಮೆಯೂ ಹಾಕಿ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿಲ್ಲ. ಈ ಅವಧಿಯಲ್ಲಿ ಒಂದು ಬಾರಿಯೂ ಸೆಮಿಫೈನಲ್‌ಗೂ ತಲುಪಿಲ್ಲ ಎಂಬುದು ಅಚ್ಚರಿ.
ಕಳೆದೆರಡು ಬಾರಿ ತವರಿನಲ್ಲಿ ವಿಶ್ವಕಪ್ ನಡೆದಾಗಲೂ ಭಾರತ ಪುರುಷರ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿಯೇ ಈ ಬಾರಿಯೂ ತಂಡಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ. 1971ರಲ್ಲಿ 3ನೇ ಸ್ಥಾನಿಯಾಗಿದ್ದ ತಂಡ, 1973ರಲ್ಲಿ ರನ್ನರ್-ಅಪ್ ಆಗಿತ್ತು. 1975ರಲ್ಲಿ ಅಜಿತ್ ಪಾಲ್ ಸಿಂಗ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಆ ಬಳಿಕ ತಂಡಕ್ಕೆ ಕಪ್ ಸಿಕ್ಕಿಲ್ಲ.
ಈ ಬಾರಿ ತಂಡ ‘ಡಿ’ ಗುಂಪಿನಲ್ಲಿದ್ದು, ಆ.15ರಂದು ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಆಡಲಿದೆ. ಬಳಿಕ ಆ.17ರಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಅ.19ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.
ಇನ್ನು, ಮಹಿಳಾ ತಂಡ ಈವರೆಗೆ ಒಮ್ಮೆಯೂ ಫೈನಲ್‌ಗೇರಿಲ್ಲ. ತಂಡಕ್ಕೆ ಈ ಬಾರಿ ಚೀನಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸವಾಲು ಎದುರಾಗಲಿದೆ.
ಭಾರತ ಪುರುಷರ ವೇಳಾಪಟ್ಟಿ
ಎದುರಾಳಿ ದಿನಾಂಕ ಸಮಯ
ವೇಲ್ಸ್ ಆ.15 ಸಂಜೆ 4.30
ಇಂಗ್ಲೆಂಡ್ ಆ.17 ಸಂಜೆ 6.30
ಪಾಕಿಸ್ತಾನ ಆ.19 ಸಂಜೆ 6.30
ಭಾರತ ಮಹಿಳೆಯರ ವೇಳಾಪಟ್ಟಿ
ಎದುರಾಳಿ ದಿನಾಂಕ ಸಮಯ
ಚೀನಾ ಆ.16 ಸಂಜೆ 4.30
ದ.ಆಫ್ರಿಕಾ ಆ.18 ಸಂಜೆ 6.30
ಇಂಗ್ಲೆಂಡ್ ಆ.20 ಸಂಜೆ 6.30
(ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ)