ಮಹಾರಾಜ ಟ್ರೋಫಿ ಟಿ 20 :ಮಂಗಳೂರು ವಿರುದ್ಧ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ಶುಭಾರಂಭ

KannadaprabhaNewsNetwork | Updated : Aug 17 2024, 04:15 AM IST

ಸಾರಾಂಶ

ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

 ಬೆಂಗಳೂರು : ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. 

ಶುಕ್ರವಾರ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧದ ಮಳೆ ಪೀಡಿತ ಪಂದ್ಯದಲ್ಲಿ ಮನೀಶ್‌ ಪಾಂಡೆ ನಾಯಕತ್ವದ ಹುಬ್ಬಳ್ಳಿಗೆ ವಿಜೆಡಿ ನಿಯಮದನ್ವಯ 15 ರನ್‌ ಗೆಲುವು ಲಭಿಸಿತು.ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಂಗಳೂರು 16 ಓವರಲ್ಲಿ 7 ವಿಕೆಟ್‌ಗೆ 143 ರನ್‌ ಕಲೆಹಾಕಿತು. 

ಉತ್ತಮ ಆರಂಭ ಪಡೆದ ತಂಡ ಪವರ್‌-ಪ್ಲೇನಲ್ಲಿ 59 ರನ್‌ ಕಲೆಹಾಕಿತು. ಮ್ಯಾಕ್‌ನೀಲ್‌ ನೊರೊನ್ಹಾ 23, ರೋಹನ್‌ ಪಾಟೀಲ್‌ 11 ಎಸೆತಗಳಲ್ಲಿ 24 ರನ್‌ ಸಿಡಿಸಿ ನಿರ್ಗಮಿಸಿದರು. ಬಳಿಕ ಸಿದ್ಧಾರ್ಥ್‌ 27 ಎಸೆತಗಳಲ್ಲಿ 44, ನಿಕಿನ್‌ ಜೋಸ್‌ 33 ರನ್‌ ಕಲೆಹಾಕಿದರು. 10.3 ಓವರ್‌ ಬಳಿಕ ಮಳೆ ಸುರಿಯಿತು. ಆ ಬಳಿಕ ಮತ್ತೆ ಪಂದ್ಯ ಪುನಾರಂಭಗೊಂಡರೂ, ಪದೇ ಪದೇ ಮಳೆ ಅಡ್ಡಿಪಡಿಸುತ್ತಿದ್ದ ಕಾರಣ ಪಂದ್ಯವನ್ನು 16 ಓವರ್‌ಗೆ ಕಡಿತಗೊಳಿಸಲಾಯಿತು.

 ಬಳಿಕ ಹುಬ್ಬಳ್ಳಿಗೆ 7 ಓವರ್‌ಗಳಲ್ಲಿ 80 ರನ್‌ ಗುರಿ ನಿಗದಿಪಡಿಸಲಾಯಿತು. ಮೊಹಮದ್‌ ತಾಹಾ(6 ಎಸೆತಗಳಲ್ಲಿ 12) ಹಾಗೂ ತಿಪ್ಪಾ ರೆಡ್ಡಿ(ಔಟಾಗದೆ 19) ಹುಬ್ಬಳ್ಳಿಗೆ ಉತ್ತಮ ಆರಂಭ ಒದಗಿಸಿದರು. 

ಬಳಿಕ ನಾಯಕ ಮನೀಶ್‌ ಪಾಂಡೆ 14 ಎಸೆತಗಳಲ್ಲಿ 24 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. 5.1 ಓವರ್‌ಗಳಲ್ಲಿ 1 ವಿಕೆಟ್‌ಗೆ 69 ರನ್‌ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. ಆದರೆ ರನ್‌ ಅಂತರದಲ್ಲಿ ವಿಜೆಡಿ ನಿಯಮದನ್ವಯ ಹುಬ್ಬಳ್ಳಿ ಮುಂದಿದ್ದ ಕಾರಣ, ತಂಡಕ್ಕೆ ಗೆಲುವು ಒಲಿಯಿತು.ಸ್ಕೋರ್‌: ಮಂಗಳೂರು 16 ಓವರಲ್ಲಿ 143/7 (ಸಿದ್ಧಾರ್ಥ್‌ 44, ನಿಕಿನ್‌ 33, ಕುಮಾರ್‌ 3-30), ಹುಬ್ಬಳ್ಳಿ 5.1 ಓವರಲ್ಲಿ 69/1 (ಮನೀಶ್‌ 24*, ತಿಪ್ಪಾರೆಡ್ಡಿ 19*, ದರ್ಶನ್‌ 1-24)

 ಪಂದ್ಯಶ್ರೇಷ್ಠ: ತಿಪ್ಪಾರೆಡ್ಡಿ

ಇಂದಿನ ಪಂದ್ಯಗಳು

ಶಿವಮೊಗ್ಗ-ಮಂಗಳೂರು, ಮಧ್ಯಾಹ್ನ 3ಕ್ಕೆ 

ಗುಲ್ಬರ್ಗಾ-ಹುಬ್ಬಳ್ಳಿ, ಸಂಜೆ 7 ಗಂಟೆಗೆ

ಸ್ಟಾರ್‌ಸ್ಪೋರ್ಟ್ಸ್, ಫ್ಯಾನ್‌ಕೋಡ್‌ ಆ್ಯಪ್‌

Share this article